ಮಂಗಳವಾರ, ಡಿಸೆಂಬರ್ 7, 2021
19 °C
ಸಾಂಸ್ಕೃತಿಕ ವಲಯದಲ್ಲಿ ಆಡಳಿತಾಧಿಕಾರಿ ನಡೆಗೆ ವಿರೋಧ

ಕಸಾಪ: ಆಡಳಿತಾಧಿಕಾರಿಯಿಂದ ₹1ಕೋಟಿ ವೆಚ್ಚದ ಯೋಜನೆ! ಚರ್ಚೆಗೆ ಗ್ರಾಸ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಆಡಳಿತಾಧಿಕಾರಿ ಕೈಗೆತ್ತಿಕೊಂಡಿರುವ ‌₹ 1 ಕೋಟಿ ವೆಚ್ಚದ ಕಟ್ಟಡ ನವೀಕರಣ ಯೋಜನೆಯು ಚರ್ಚೆಗೆ ಗ್ರಾಸವಾಗಿದೆ. 

ಕಳೆದ ಸೆ.2ರಂದು ಮನು ಬಳಿಗಾರ್ ನೇತೃತ್ವದ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಅಂತ್ಯವಾಗಿತ್ತು. ಸೆ.3ರಿಂದ ಅನ್ವಯವಾಗುವಂತೆ ಆಡಳಿತಾಧಿಕಾರಿಯನ್ನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅವರನ್ನು ನೇಮಕಮಾಡಿ, ಸರ್ಕಾರ ಆದೇಶ ಹೊರಡಿಸಿತ್ತು.

ಕೋವಿಡ್‌ನಿಂದ ಮುಂದೂಡಲ್ಪಟ್ಟಿದ್ದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಗಳಿಗೆ ನ. 21ರಂದು ಚುನಾವಣೆ ನಡೆಯಲಿದೆ. ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬರುವವರೆಗೂ ಆಡಳಿತಾಧಿಕಾರಿಯೇ ಪರಿಷತ್ತಿನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ. ಈ ನಡುವೆ, ಅವರು ಕಟ್ಟಡಗಳ ನವೀಕರಣ, ಸದಸ್ಯತ್ವ ಅಭಿಯಾನ, ದಾಸ್ತಾನಿನಲ್ಲಿ ಇರುವ ಕೆಲವು ಪುಸ್ತಕಗಳ ವಿಲೇವಾರಿಯಂತಹ ನಿರ್ಣಯಗಳನ್ನು ಕೈಗೊಂಡಿದ್ದಾರೆ. 

ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿಯಲ್ಲಿ ಪರಿಷತ್ತಿನ ಸಭಾಂಗಣಗಳು ಹಾಗೂ ಅಧ್ಯಕ್ಷರ ಕಚೇರಿಯನ್ನು ನವೀಕರಣ ಮಾಡಲಾಗುತ್ತಿದೆ. ಸಿಎಸ್‌ಆರ್‌ ನಿಧಿ ಅಡಿಯಲ್ಲಿ ಆರ್ಥಿಕ ನೆರವು ನೀಡಲು ಕೆನರಾ ಬ್ಯಾಂಕ್ ಮುಂದೆ ಬಂದಿದೆ. ಅದರಂತೆ ಈಗಾಗಲೇ ಅಧ್ಯಕ್ಷರ ಕಚೇರಿಯ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. 

‘ನೂತನ ಕಾರ್ಯಕಾರಿ ಸಮಿತಿ ಅಧಿಕಾರ ವಹಿಸಿಕೊಳ್ಳುವವರೆಗೆ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಬೇಕಾದ ಆಡಳಿತಾಧಿಕಾರಿ, ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಪರಿಷತ್ತಿನ ಸಭಾಂಗಣ ಸೇರಿದಂತೆ ಕಟ್ಟಡವನ್ನು ನವೀಕರಣ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಈ ಅವಧಿಯಲ್ಲಿ ಆತುರವಾಗಿ ಏಕೆ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿತ್ತು? ಆಡಳಿತಾಧಿಕಾರಿಯಾದವರು ತಮ್ಮ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಬಾರದು’ ಎಂಬ ಆಕ್ಷೇಪ ಸಾಂಸ್ಕೃತಿಕ ವಲಯದಲ್ಲಿ ಕೇಳಿ ಬಂದಿದೆ. 

ಬೈಲಾದಲ್ಲಿ ಪ್ರಸ್ತಾಪವಿಲ್ಲ: ಪರಿಷತ್ತಿನ ಬೈಲಾದಲ್ಲಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಅಧಿಕಾರದ ವ್ಯಾಪ್ತಿ, ಕಾರ್ಯವಿಧಾನದ ಬಗ್ಗೆ ತಿಳಿಸಲಾಗಿದೆ. ಆಡಳಿತಾಧಿಕಾರಿ ಹಾಗೂ ಅವರ ಕಾರ್ಯವೈಖರಿಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಆದರೆ, ಪರಿಷತ್ತಿನ ಇತಿಹಾಸದಲ್ಲಿ ಆಡಳಿತಾಧಿಕಾರಿಯ ಅವಧಿಯಲ್ಲಿ ಇಷ್ಟು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡ ಉದಾಹರಣೆ ಇಲ್ಲ. 

‘ಭವನ ನಿರ್ಮಾಣ, ಕಟ್ಟಡಗಳ ನವೀಕರಣ ಸೇರಿದಂತೆ ಹಣಕಾಸಿಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಇರಲಿದೆ. ಪರಿಷತ್ತು ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಆಡಳಿತವೆಲ್ಲ ಅಧ್ಯಕ್ಷರ ಮೇಲ್ವಿಚಾರಣೆಯಲ್ಲಿಯೇ ನಡೆಯಬೇಕು. ಆಡಳಿತಾಧಿಕಾರಿ ಆದವರು ತಮ್ಮ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಬಾರದು’ ಎಂದು ಇಲ್ಲಿನ ಕನ್ನಡ ಪರ ಹೋರಾಟಗಾರರೊಬ್ಬರು ಪ್ರಶ್ನಿಸಿದರು.

‘ಪರಿಷತ್ತಿನ ಹಣ ಬಳಕೆಯಾಗಿಲ್ಲ’

‘ಪರಿಷತ್ತಿನ ಹಣದಲ್ಲಿ ಸಭಾಂಗಣ ಹಾಗೂ ಕಟ್ಟಡವನ್ನು ನವೀಕರಣ ಮಾಡುತ್ತಿಲ್ಲ. ಸಿಎಸ್‌ಆರ್ ನಿಧಿಯಡಿ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಹೊಸದಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಬೈಲಾದಲ್ಲಿ ಪ್ರಸ್ತಾಪವಿಲ್ಲ. ಈ ನವೀಕರಣ ಕಾರ್ಯವು ಹಿಂದೆಯೇ ಆಗಬೇಕಾಗಿತ್ತು. ಇನ್ನಷ್ಟು ದಿನ ಬಿಟ್ಟರೆ ಕಟ್ಟಡವು ಸಂಪೂರ್ಣ ಹಾಳಾಗಲಿದೆ’ ಎಂದು ಆಡಳಿತಾಧಿಕಾರಿ ಎಸ್. ರಂಗಪ್ಪ ತಿಳಿಸಿದರು.

ಏನಿದು ನವೀಕರಣ ಯೋಜನೆ? 

ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರವು ನಗರದ ಅತ್ಯಂತ ಹಳೆಯ ಸಭಾಂಗಣಗಳಲ್ಲಿ ಒಂದಾಗಿದೆ. ಹತ್ತು ವರ್ಷಗಳ ಹಿಂದೆ ಪ್ಲೈವುಡ್‌ನಿಂದ ಸಭಾಂಗಣದ ಗೋಡೆಗಳನ್ನು ಅಂದಗೊಳಿಸಲಾಗಿತ್ತು. ಆದರೆ, ಈಗ ಸಭಾಂಗಣದ ಪ್ಲೈವುಡ್‌ಗಳು ಹಾಳಾಗಿದ್ದು, ಕೆಲವೆಡೆ ಕಿತ್ತು ಹೋಗಿವೆ. ಹಾಗಾಗಿ, ನವೀಕರಣಗೊಳಿಸಿ, ಸ್ಥಿರ ಆಸನಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಅಕ್ಕಮಹಾದೇವಿ ಸಭಾಂಗಣದಲ್ಲಿ ಧ್ವನಿ ವ್ಯವಸ್ಥೆಯ ಸಮಸ್ಯೆ ನಿವಾರಣೆ ಹಾಗೂ ಸ್ಥಿರ ಆಸನಗಳ ಅಳವಡಿಕೆಯೂ ಯೋಜನೆಯಲ್ಲಿ ಸೇರಿದೆ. ಅಧ್ಯಕ್ಷರ ಕಚೇರಿಯನ್ನೂ ನವೀಕರಣ ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು