ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಡಿಪಿಆರ್‌ ತಯಾರಿಗೆ ₹25 ಕೋಟಿ ವೆಚ್ಚ: ಬೊಮ್ಮಾಯಿ

Last Updated 21 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ₹ 25 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮಂಗಳವಾರ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಸಹ ಸದಸ್ಯ ಶರತ್‌ ಬಚ್ಚೇಗೌಡ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ’1996ರಲ್ಲಿ ಯೋಜನೆಗಾಗಿ ಕೆಪಿಸಿಎಲ್‌ ಯೋಜನಾ ವರದಿ ತಯಾರಿಸಿತ್ತು. ಬಳಿಕ ಹಲವು ಬದಲಾವಣೆ ಮಾಡಲಾಗಿತ್ತು. ವಿಸ್ತೃತ ಯೋಜನಾ ವರದಿ ತಯಾರಿಗೆ 5 ವರ್ಷ ತೆಗೆದುಕೊಳ್ಳಲಾಗಿತ್ತು. ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ಬಳಿಕ ಕೈಬಿಡಲಾಗಿತ್ತು. ಕೊನೆಗೆ ಸ್ಥಳೀಯ ಹಂತದಲ್ಲೇ ಟೆಂಡರ್‌ ಕರೆಯಲಾಗಿತ್ತು‘ ಎಂದರು.

ಯೋಜನೆಗೆ ಅನುಮೋದನೆ ನೀಡುವ ಸಂಬಂಧ ಕೇಂದ್ರ ಜಲ ಆಯೋಗದಲ್ಲಿ ಹಿಂದೆ ಎರಡು ಸಭೆಗಳು ನಡೆದಿವೆ. ಮುಂದಿನ ಸಭೆಯಲ್ಲಿ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಪರಿಸರ ಅನುಮೋದನೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳುವ ವಿಶ್ವಾಸ ಇದೆ. ಈ ಎರಡು ಒಪ್ಪಿಗೆ ಸಿಕ್ಕ ಬಳಿಕ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶರತ್‌ ಬಚ್ಚೇಗೌಡ ಪ್ರಶ್ನೆ ಕೇಳಿದಾಗ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ’ಇದೊಂದು ಸೂಕ್ಷ್ಮ ವಿಚಾರ. ಇಲ್ಲಿ ಹೆಚ್ಚು ಚರ್ಚೆ ನಡೆಸುವುದು ಬೇಡ‘ ಎಂದು ಕೋರಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ’ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಆಗುತ್ತಿದೆ. ಯೋಜನೆಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಅರ್ಜಿ ಹಾಕಿ ಕುಳಿತರೆ ಕೆಲಸ ಆಗುತ್ತದೆಯೇ‘ ಎಂದು ಪ್ರಶ್ನಿಸಿದರು.

ಗೋವಿಂದ ಕಾರಜೋಳ, ‘ಈ ಹಿಂದಿನ ಜಲಸಂಪನ್ಮೂಲ ಸಚಿವರೊಬ್ಬರು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಚೆನ್ನೈಯ ಹಸಿರು ನ್ಯಾಯಮಂಡಳಿ ಪೀಠ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ದೆಹಲಿ ಪೀಠದಲ್ಲಿ ಅರ್ಜಿ ಸಲ್ಲಿಸಿ ಪ್ರಕರಣ ತೆರವು ಮಾಡಿದೆವು. ಈ ರೀತಿ ಸ್ಥಿತಿ ಇದೆ’ ಎಂದು ಗಮನ ಸೆಳೆದರು.

ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌, ’ಸುಪ್ರೀಂ ಕೋರ್ಟ್‌ ನಮ್ಮ ಪರ ತೀರ್ಪು ನೀಡಿದೆ. ಪರಿಸರ ಅನುಮೋದನೆ ಪಡೆಯುವುದು ಸರ್ಕಾರದ ಜವಾಬ್ದಾರಿ. ನಮ್ಮ ಹಣ, ನಮ್ಮ ಯೋಜನೆ. ಹೀಗಾಗಿ, ಅನುಷ್ಠಾನ ಮಾಡಲೇಬೇಕು. ಶೀಘ್ರ ಭೂಮಿ ಪೂಜೆ ಮಾಡಬೇಕು.ಈ ಹಿಂದೆ ಯೋಜನಾ ಮೊತ್ತ ₹4 ಸಾವಿರ ಕೋಟಿ ಇತ್ತು. ಈಗ ₹9 ಸಾವಿರ ಕೋಟಿಗೆ ಏರಿದೆ. ಮುಂದಿನ ದಿನಗಳಲ್ಲಿ ₹18 ಸಾವಿರ ಕೋಟಿ ಆಗಲಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT