ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಜೆಟ್‌ನಲ್ಲಿ ನಾಡಿನ ಪ್ರಗತಿಯ ಭವಿಷ್ಯ ಬರೆಯುವೆ’-ಬೊಮ್ಮಾಯಿ

ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ವಿಫಲ: ಬೊಮ್ಮಾಯಿ
Last Updated 22 ಫೆಬ್ರುವರಿ 2022, 20:32 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲೇ ಮುಂದಿನ ತಿಂಗಳ ಬಜೆಟ್‌ ಕನಸುಗಳನ್ನು ಹಂಚಿಕೊಳ್ಳಬೇಕು ಅಂದುಕೊಂಡಿದ್ದೆ. ಆದರೆ, ನೀವು (ಕಾಂಗ್ರೆಸ್‌) ಬೇಜವಾಬ್ದಾರಿಯಿಂದ ನಡೆದುಕೊಂಡು, ಐದು ದಿನ ಕಲಾಪವನ್ನು ನಡೆಯಲು ಬಿಡದ ಕಾರಣ ಅದು ಸಾಧ್ಯವಾಗಲಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಂದನಾ ನಿರ್ಣಯದ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಮಂಗಳವಾರ ಅವರು ಉತ್ತರ ನೀಡಿದರು.

‘ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಕೂಡ ಕಾಂಗ್ರೆಸ್‌ ವಿಫಲವಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂತಹ ಹಿರಿಯರ ಅನುಭವಕ್ಕೆ ಮುಸುಕು ಬಿದ್ದಿದೆ. ಹೀಗಾಗಿ ಕಾಂಗ್ರೆಸ್‌ಗೆ ರಾಜಕೀಯ ಭವಿಷ್ಯವಿಲ್ಲ. ಸಚಿವ ಈಶ್ವರಪ್ಪ ಅವರ ಹೇಳಿಕೆಯಲ್ಲಿ ಗದ್ದಲ ಮಾಡುವಂತಹದ್ದು ಏನೂ ಇರಲಿಲ್ಲ. ಅದನ್ನು ಹಿಡಿದುಕೊಂಡು ಜಗ್ಗಾಡಿದರು. ಹಿಜಾಬ್‌ ವಿವಾದ, ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ತಿಳಿಗೊಳಿಸಬೇಕಿತ್ತು. ಸರ್ಕಾರಕ್ಕೆ ಸಲಹೆ ನೀಡಬೇಕಿತ್ತು. ವಿರೋಧ ಪಕ್ಷವಾಗಿ ತನ್ನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಯಿತು’ ಎಂದು ಅವರು ಟೀಕಿಸಿದರು.

ಕೋವಿಡ್ ನಿಯಂತ್ರಣಕ್ಕೆ ₹2 ಸಾವಿರ ಕೋಟಿ: ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದ ಮುಖ್ಯಮಂತ್ರಿ, ‘ಕೋವಿಡ್‌ ಸಂಕಷ್ಟದ ನಡುವೆಯೂ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ₹ 2,000 ಕೋಟಿ ವೆಚ್ಚ ಮಾಡಿದೆ. ಕೋವಿಡ್‌ ಲಸಿಕೆ ವಿತರಣೆಯಲ್ಲಿ ಮುಂಚೂಣಿಯಲ್ಲಿದೆ’ ಎಂದರು.

‘ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿವೇತನ ನೀಡಲಾಗಿದೆ. ಐದು ಲಕ್ಷ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, 48,000 ಮನೆಗಳ ನಿರ್ಮಾಣ ಮುಗಿದಿದೆ. ಗ್ರಾಮ ಒನ್‌ ಯೋಜನೆಯನ್ನು ಇನ್ನೂ ಹತ್ತು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು’ ಎಂದು ಬೊಮ್ಮಾಯಿ ಹೇಳಿದರು.

ಭಾಷಣದ ಪ್ರಮುಖ ಅಂಶಗಳು

*ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹ 3,500 ಕೋಟಿ ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ₹ 1,400 ಕೋಟಿ ನೀಡಲಾಗಿದೆ. ಮುಂದಿನ ವರ್ಷ ₹ 3,000 ಕೋಟಿ ಒದಗಿಸಲಾಗುವುದು.

*ರೈತ ವಿದ್ಯಾರ್ಥಿ ನಿಧಿ ಯೋಜನೆಯಡಿ 4.50 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿವಿಧ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ₹150 ಕೋಟಿಯನ್ನು ಒದಗಿಸಲಾಗಿದೆ.

*31,627 ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಲಾಗಿದೆ.

*ಕೋವಿಡ್‌ ಮೊದಲ ಡೋಸ್‌ ಶೇ 100 ರಷ್ಟು ಮತ್ತು ಎರಡನೇ ಡೋಸ್‌ ಶೇ 90 ರಷ್ಟು ಜನರಿಗೆ ನೀಡಲಾಗಿದೆ. ಒಟ್ಟಾರೆ ಕೋವಿಡ್‌ ನಿರ್ವಹಣೆ ರಾಜ್ಯಕ್ಕೇ ಮಾದರಿ.

* ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ ಭಾಗವಹಿಸದೇ ಧರಣಿ ಮಾಡಿದ್ದು ವಿಧಾನಮಂಡಲದ ಇತಿಹಾಸದಲ್ಲೇ ಕಪ್ಪು ಚುಕ್ಕೆ, ಮಾತ್ರವಲ್ಲ ಬೇಜವಾಬ್ದಾರಿಯ ನಡೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಗದ್ದಲದ ಮಧ್ಯೆ ಐದು ಮಸೂದೆ ಅಂಗೀಕಾರ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸಭಾಪತಿ ಪೀಠದ ಎದುರು ಕಾಂಗ್ರೆಸ್‌ ಸದಸ್ಯರ ಧಿಕ್ಕಾರಗಳ ಮಧ್ಯೆಯೇ, 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಅವಕಾಶ ಕಲ್ಪಿಸುವ ಮಸೂದೆ ಸೇರಿ ಒಟ್ಟು ಐದು ಮಸೂದೆಗಳಿಗೆ ಸರ್ಕಾರ, ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಪಡೆಯಿತು.

‘ಕರ್ನಾಟಕ ಸಿವಿಲ್‌ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ–2022’ ಮಂಡಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಈ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಅವರಿಗೆ ನ್ಯಾಯ ಕೊಡಲು ಈ ಮಸೂದೆ ರೂಪಿಸಲಾಗಿದೆ’ ಎಂದರು.

‘ಅಭ್ಯರ್ಥಿಯೊಬ್ಬರು ನೀಡಿದ್ದ ದೂರು ಆಧರಿಸಿ ಅಂದಿನ ಸರ್ಕಾರ ಕೆಪಿಎಸ್‍ಸಿ ನೇಮಕಾತಿಯ ಅಧಿಸೂಚನೆಯನ್ನೇ ವಾಪಸು ಪಡೆದಿತ್ತು. ಈ ಕುರಿತ ಪ್ರಕರಣದಲ್ಲಿ ಕೆಎಟಿಯಿಂದ ತೀರ್ಪು ಪ್ರಕಟವಾದ ಬಳಿಕ ಮತ್ತೆ ನೇಮಕಾತಿ ಆದೇಶ ಕೊಡಲು ಸರ್ಕಾರ ನಿರ್ಧರಿಸಿತ್ತು. ಈ ಪ್ರಕರಣಲ್ಲಿ ಹೈಕೋರ್ಟ್‍ಗೂ ತಪ್ಪು ಮಾಹಿತಿ ನೀಡಿ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಇದೀಗ, ಕಾಯ್ದೆ ಮೂಲಕ ಆಯ್ಕೆಯನ್ನು ಊರ್ಜಿತಗೊಳಿಸಲು ನಿರ್ಧರಿಸಲಾಗಿದ್ದು, ಈ ವಿಷಯದಲ್ಲಿ ಯಾವುದೇ ಕಾನೂನು ತೊಡಕು ಎದುರಾದರೂ ಅಭ್ಯರ್ಥಿಗಳ ಹಿತ ಕಾಪಾಡಲು ಬದ್ಧ’ ಎಂದರು.

ಮಸೂದೆ ಸಮರ್ಥಿಸಿ ಮಾತನಾಡಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ತಿಪ್ಪೇಸ್ವಾಮಿ, ಬಿಜೆಪಿಯ ಎನ್‌. ರವಿಕುಮಾರ್‌, ‘ಈ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಮಾನವೀಯ ಕೆಲಸವನ್ನು ಸರ್ಕಾರ ಮಾಡಿದೆ’ ಎಂದರು.

‘ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಮಸೂದೆ–2022’ ಮಂಡಿಸಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ‘ಸಹಕಾರ ಸಂಘಗಳ ಗೃಹ ನಿರ್ಮಾಣ ಸಂಘಗಳ ಮೂಲಕ ಖರೀದಿಸಿದ ನಿವೇಶನದ ನೋಂದಣಿಗೆ ಮುದ್ರಾಂಕ ಶುಲ್ಕ ಹೆಚ್ಚಿದ್ದು, ಅದನ್ನು ಕಡಿಮೆ ಮಾಡಲಾಗುತ್ತಿದೆ. ಇದರಿಂದ ಬಹಳಷ್ಟು ಜನರಿಗೆ ಸಹಾಯವಾಗಲಿದೆ‘ ಎಂದರು.

‘ಕರ್ನಾಟಕ ಸ್ಟ್ಯಾಂಪ್ (ಎರಡನೇ ತಿದ್ದುಪಡಿ) ಮಸೂದೆ–2022’ ಮಂಡಿಸಿದ ಅವರು, ‘ಕಂಪನಿಗಳ ಸ್ಥಿರಾಸ್ತಿ ಮೇಲೆ ಸಂಗ್ರಹಿಸಲಾಗುತ್ತಿದ್ದ ಶೇ 3 ಮುದ್ರಾಂಕ ಶುಲ್ಕ ದುಬಾರಿಯಾಗುತ್ತಿತ್ತು. ಇದರಿಂದ ಖಾಸಗಿ ಕಂಪನಿಗಳು ನೆರೆಯ ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದವು, ಇನ್ನು ಮುಂದೆ ಕಂಪನಿಗಳ ಸ್ಥಿರಾಸ್ತಿ ಹಾಗೂ ಷೇರು ಮೌಲ್ಯಗಳನ್ನು ಸಂಗ್ರಹಿಸುವ ಶುಲ್ಕವನ್ನು ಗರಿಷ್ಠ ₹25 ಕೋಟಿಗೆ ಸೀಮಿತಗೊಳಿಸಲಾಗಿದೆ’ ಎಂದರು. ಗೃಹ ಸಚಿವರ ಪರವಾಗಿ ಸಚಿವ ಜೆ.ಸಿ. ಮಾಧುಸ್ವಾಮಿ, ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ ತಿದ್ದುಪಡಿ ಮಸೂದೆ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT