ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ₹9 ಸಾವಿರ ಕೋಟಿ ಯೋಜನೆ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ
Last Updated 9 ಮಾರ್ಚ್ 2021, 21:46 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನಾ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ₹9 ಸಾವಿರ ಕೋಟಿ ಮೊತ್ತದ ಯೋಜನಾ ವರದಿ ತಯಾರಿಸಿ, ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.

ಜೆಡಿಎಸ್‌ನ ಎ. ಮಂಜುನಾಥ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಯೋಜನೆಗೆ ಅಗತ್ಯ ಇರುವ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆ ನಡೆದಿದೆ. ಶಾಸನಬದ್ಧ ಸಮ್ಮತಿ ಪಡೆದ ನಂತರ ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.

ಸಮಗ್ರ ಯೋಜನಾ ವರದಿಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ ಪಡೆಯಬೇಕಿದೆ. ಜಲ ಆಯೋಗವು ಯೋಜನೆಯ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಭಿಪ್ರಾಯ ವನ್ನು ಕೇಳಿದ್ದು, ಅದು ಸಲ್ಲಿಕೆಯಾಗಬೇಕಿದೆ. ಯೋಜನೆಗೆ ಬೇಕಾದ 5252 ಹೆಕ್ಟೇರ್‌ ಭೂಮಿಯಲ್ಲಿ 5051 ಹೆಕ್ಟೇರ್ ಅರಣ್ಯ ಭೂಮಿಯಿದ್ದು ಪರಿಸರ ಸಚಿವಾಲಯದ ಒಪ್ಪಿಗೆಯೂ ಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ಯೋಜನಾ ವರದಿ ತಯಾರಿಸಲು ಕೇಂದ್ರ ಜಲ ಆಯೋಗ ನೀಡಿರುವ ಅನುಮತಿ ತಡೆ ಹಿಡಿದು, ಅದನ್ನು ವಾಪಸ್‌ ಪಡೆಯಲು, ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಅದು ಇತ್ಯರ್ಥಕ್ಕೆ ಬಾಕಿ ಇದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಯೋಜನೆಯಾಗಿ ಎತ್ತಿನಹೊಳೆ: ಪತ್ರ
ಎತ್ತಿನಹೊಳೆ ಯೋಜನೆಯನ್ನು ನೇತ್ರಾವತಿ–ಹೇಮಾವತಿ ಸಂಪರ್ಕಿಸುವ ವಿಸ್ತರಣೆ ಯೋಜನೆಯೆಂದು ಪರಿಗಣಿಸಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಕೇಂದ್ರ ಜಲ ಶಕ್ತಿ ಸಚಿವರಿಗೆ ಇದೇ ವರ್ಷದ ಫೆಬ್ರುವರಿಯಲ್ಲಿ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡರ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಸಮಗ್ರ ಯೋಜನಾ ವರದಿಯನ್ನೂ ಕೇಂದ್ರಕ್ಕೆ ಕಳಿಸಲಾಗಿದೆ. ಜನವರಿಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದ್ದು, ತರುವಾಯ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT