ಶುಕ್ರವಾರ, ಮೇ 27, 2022
28 °C

2 ವರ್ಷ ಆದರೂ ಕಡತಗಳಿಗೆ ಸಿಗದ ಮೋಕ್ಷ: ಸರ್ಕಾರಕ್ಕೆ ಚಾಟಿ ಬೀಸಿದ ಸಭಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ‘ಸರ್ಕಾರದಲ್ಲಿ ಕೆಲಸಗಳು ಆಗುತ್ತಿಲ್ಲ, ಆಡಳಿತದಲ್ಲಿ ಹಿಡಿತ ತಪ್ಪುತ್ತಿರುವ ಭಾವನೆ ಮೂಡುತ್ತಿದೆ. ನಮ್ಮ ಕೆಲಸಗಳೇ ಆಗುತ್ತಿಲ್ಲ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ನಗರೋತ್ಥಾನ ಮೂರನೇ ಹಂತದ ಯೋಜನೆಗಳಲ್ಲಿ ಕೆಲಸ ಬದಲಾವಣೆಗೆ ಸಂಬಂಧಿಸಿ ಶಾಸಕರ ಬೇಡಿಕೆಗಳನ್ನು ಕಡೆಗಣಿಸುತ್ತಿರುವ ಬಗ್ಗೆ ಅವರು ಸಚಿವರು ಮತ್ತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಉತ್ತರಿಸುವಾಗ ಸಭಾಧ್ಯಕ್ಷರು ಅಧಿಕಾರಿಗಳ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು. ‘ಸಚಿವರು ಈ ಬಗ್ಗೆ ಏಕೆ ಗಮನಹರಿಸುತ್ತಿಲ್ಲ’ ಎಂದೂ ಪ್ರಶ್ನಿಸಿದರು.

‘ಎರಡು ವರ್ಷಗಳಿಂದ ಕೆಲಸ ಬದಲಾವಣೆಗೆ ಸಂಬಂಧಿಸಿ ಕಡತಗಳು ನಮ್ಮ ಕ್ಷೇತ್ರದಿಂದ ಜಿಲ್ಲಾಧಿಕಾರಿ ಕಚೇರಿಗೂ, ಅಲ್ಲಿಂದ ವಿಧಾನಸೌಧಕ್ಕೂ ಬರುತ್ತವೆ. ಆದರೆ, ಕೆಲಸ ಆಗುವುದಿಲ್ಲ. ವಿಧಾನಸೌಧದಿಂದ ಮತ್ತೆ ವಾಪಸ್‌ ಬರುತ್ತವೆ. ಎರಡು ವರ್ಷದಿಂದ ಇದೇ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೊಕ್ಕೆ ಹಾಕಿ ಕೂರುತ್ತಾರೆ. ಸಚಿವರ ಗಮನಕ್ಕೂ ಇದು ಬರುವುದಿಲ್ಲ’ ಎಂದು ಕಾಗೇರಿ ಸಿಟ್ಟಿನಿಂದ ನುಡಿದರು. ಪಕ್ಷಭೇದ ಮರೆತು ಸದಸ್ಯರು ಧ್ವನಿಗೂಡಿಸಿದರು.

ಜಮೀನು ವಾಪಸ್‌: ನಿರಾಣಿ
ಬೆಳಗಾವಿ: ಹಲವು ವರ್ಷ ಕಳೆದರೂ ಕೈಗಾರಿಕೆ ಆರಂಭಿಸದ 500ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಮೀನು ಹಿಂಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿಧಾನಸಭೆಯಲ್ಲಿ ತಿಳಿಸಿದರು.

ಭೂಮಿ ಹಂಚಿಕೆಯಾಗಿ 5ರಿಂದ 20 ವರ್ಷ ಕಳೆದರೂ ಕೈಗಾರಿಕೆಯನ್ನು ಆರಂಭಿಸಿಲ್ಲ. ಈಗಾಗಲೇ ಅಂತಹ ಜಮೀನುಗಳನ್ನು ಗುರುತಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು