ಶನಿವಾರ, ಸೆಪ್ಟೆಂಬರ್ 18, 2021
27 °C

ಚಂಡಮಾರುತ: ಕನ್ನಡಿಗ ಎಂಜಿನಿಯರ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಅಮೆರಿಕದ ನ್ಯೂಜೆರ್ಸಿಯಲ್ಲಿ ಬುಧವಾರ ಮತ್ತು ಗುರುವಾರ ಅಪ್ಪಳಿಸಿದ ಇಡಾ ಚಂಡಮಾರುತಕ್ಕೆ ಸಿಲುಕಿ ಚಿಂತಾಮಣಿಯ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಏನಿಗದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೆಪಲ್ಲಿ ಗ್ರಾಮದ ಧನುಷ್ ರೆಡ್ಡಿ (35) ಮೃತಪಟ್ಟವರು. ಅವರು ಗ್ರಾಮದ ವಿಜಯಲಕ್ಷ್ಮೀ ಮತ್ತು ನಾಗರಾಜು ದಂಪತಿಯ ಪುತ್ರ.

ವಿಜಯಲಕ್ಷ್ಮೀ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸದ್ಯ ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸವಾಗಿದ್ದಾರೆ.

ಧನುಷ್ ರೆಡ್ಡಿ ಕಳೆದ ಎಂಟು ವರ್ಷಗಳಿಂದ ನ್ಯೂಜೆರ್ಸಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ತನ್ನ ತಂಗಿಯನ್ನು ಸಹ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕರೆಸಿಕೊಂಡಿದ್ದರು. ನ್ಯೂಜೆರ್ಸಿ ನಗರದಲ್ಲಿ ಚಂಡಮಾರುತದಿಂದ ಬಿರುಗಾಳಿ ಮತ್ತು ಬಾರಿ ಮಳೆಯಿಂದ ಪ್ರವಾಹ ಉಕ್ಕಿ ಹರಿಯುತ್ತಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಚಿಂತಾಮಣಿಯ ಧನುಷ್ ರೆಡ್ಡಿ ಕೂಡ ಒಬ್ಬರಾಗಿದ್ದಾರೆ. ರಸ್ತೆ ಪಕ್ಕದ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಅವರ ರಕ್ಷಣೆಗೆ ಧಾವಿಸಿದ ಧನುಷ್ ರೆಡ್ಡಿ ಅವರೂ ಕೊಚ್ಚಿಕೊಂಡು ಹೋಗಿದ್ದಾರೆ.

ಕಾಲುವೆಗೆ ಅಡ್ಡಿವಾಗಿರುವ ಪೈಪ್‌ಗೆ ಸಿಲುಕಿಕೊಂಡು ಮಹಿಳೆಯ ಶವ ದೊರೆತರೆ, ಧನುಷ್ ರೆಡ್ಡಿಯ ಶವ ಪೈಪಿನೊಳಕ್ಕೆ ತೂರಿಕೊಂಡು ಹೋಗಿದ್ದು ಗುರುವಾರ ದೊರೆತಿದೆ. ಅವರು ಮೃತಪಟ್ಟಿರುವುದನ್ನು ಕುಟುಂಬದವರೂ ದೃಢಪಡಿಸಿದ್ದಾರೆ. ಶವವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು