ಬುಧವಾರ, ನವೆಂಬರ್ 25, 2020
21 °C

ಉಪಚುನಾವಣೆ ಬಳಿಕ ಬಂಡೆ ಛಿದ್ರ, ಹುಲಿಯಾ ಕಾಡಿಗೆ ಹೋಗಬೇಕು: ನಳಿನ್ ಕುಮಾರ್ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿರಾ ಮತ್ತು ಆರ್‌.ಆರ್‌. ನಗರ ಮುಗಿದ ಬಳಿಕ ‘ಬಂಡೆ’ ಛಿದ್ರವಾಗುತ್ತದೆ, ‘ಹುಲಿಯಾ’ ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ಲೇವಡಿ ಮಾಡಿದರು.

ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೊರೇಟರ್‌ಗಳು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೆರೆಮರೆಗೆ ಸರಿಯುತ್ತಾರೆ. ಇವರಿಬ್ಬರ ಮಧ್ಯೆ ತಾಳಮೇಳವಿಲ್ಲದೆ ಕಾಂಗ್ರೆಸ್‌ ದಿಕ್ಕೆಟ್ಟು ಹೋಗಿದೆ ಎಂದು ತಿಳಿಸಿದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ತಳಮಳ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಈ ಎರಡೂ ಪಕ್ಷಗಳ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದು, ಅವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಬಹುಮತ ಇದ್ದಾಗ ಅಭಿವೃದ್ಧಿ ಕಾರ್ಯಗಳನ್ನು ಜಾತಿ ರಾಜಕಾರಣ ಮಾಡಿದರು. ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಪ್ರಯತ್ನ ಮಾಡಿದರೆ, ವೀರಶೈವ–ಲಿಂಗಾಯತ ಸಮಾಜವನ್ನೂ ಒಡೆಯುವ ಕೆಲಸ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಇನ್ನಿಲ್ಲದಂತೆ ತೊಂದರೆ ನೀಡಿದರು ಎಂದು ಕಟೀಲ್‌ ಹೇಳಿದರು.

ಮತ್ತೊಂದೆಡೆ ಜೆಡಿಎಸ್‌ ಅಧಿಕಾರದಲ್ಲಿ ಒಂದು ರೀತಿ, ಅಧಿಕಾರದಲ್ಲಿ ಇಲ್ಲದಾಗ ಮತ್ತೊಂದು ರೀತಿ ವರ್ತಿಸುತ್ತಿದೆ. ಇವರು ಅಧಿಕಾರಕ್ಕಾಗಿ ಇನ್ನೊಂದು ಪಕ್ಷದ ಜತೆ ‘ಪ್ರೇಮ ವಿವಾಹ’ ಆಗುತ್ತಾರೆ. ಆ ಬಳಿಕ ಬೈದಾಡಿಕೊಳ್ಳುತ್ತಾರೆ. ಅಪ್ಪ ಒಂದು ಪಕ್ಷದ ಪರ ಮಾತನಾಡಿದರೆ, ಮಗ ಇನ್ನೊಂದು ಪಕ್ಷದ ಪರ ಮಾತನಾಡುತ್ತಾರೆ ಎಂದು ನಳಿನ್ ಲೇವಡಿ ಮಾಡಿದರು.

ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಮುಸುಕಿನ ಗುದ್ದಾಟವೇ ಕಾರಣ. ಗಲಭೆಯ ಸೂತ್ರಧಾರ ಸಂಪತ್‌ರಾಜ್‌ ಅವರನ್ನು ಬಂಧಿಸಿ, ನ್ಯಾಯಾಂಗ ತನಿಖೆ ನಡೆಸಿ ಎಂದು ಹೇಳುವ ತಾಕತ್ತು ಇಬ್ಬರಿಗೂ ಇಲ್ಲ ಎಂದು ಅವರು ಹೇಳಿದರು.

ಮಂಜುಳಾ ನಾರಾಯಣಸ್ವಾಮಿ ಸೇರ್ಪಡೆ: ಮಾಜಿ ಕಾರ್ಪೊರೇಟರ್‌ ಮಂಜುಳನಾರಾಯಣ ಸ್ವಾಮಿ ಬುಧವಾರ ಬಿಜೆಪಿಯನ್ನು ಸೇರ್ಪಡೆಗೊಂಡರು. ಈ ಹಿಂದೆ ಪಾಲಿಕೆಯಲ್ಲಿ ಮುನಿರತ್ನ ವಿರುದ್ಧ ಮಂಜುಳ ಜಗಳವಾಡಿದ್ದರು. ಈಗ ಬಿಜೆಪಿ ಸೇರುವ ಮೂಲಕ ಇಬ್ಬರೂ ಒಂದಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ, ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು