ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: ಬರೀ ನೋಟ, ಸಾಲದ ಆಟ

ಕಾಂಗ್ರೆಸ್‌ ಸಭಾತ್ಯಾಗದ ಮಧ್ಯೆಯೇ ಬಜೆಟ್ ಮಂಡನೆ‌ * ರೈತರಿಗೆ ಅಭಯ, ಸ್ತ್ರೀ ಶಕ್ತಿಗೆ ಅಭ್ಯುದಯ
Last Updated 8 ಮಾರ್ಚ್ 2021, 21:19 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ತಂದಿತ್ತ ಸಂಕಷ್ಟದಿಂದ ಬಸವಳಿದಿರುವ ಜನರಿಗೆ ಊರುಗೋಲಾಗಿ ನಿಂತು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪವನ್ನು ಬಜೆಟ್‌ನಲ್ಲಿ ಮಾಡಬಹುದೆಂಬ ಅಪೇಕ್ಷೆ ಹುಸಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವರಮಾನ ಸಂಗ್ರಹದಲ್ಲಿ ಉಂಟಾಗಿರುವ ಕೊರತೆ ನೀಗಲು ಅಪಾರ ಪ್ರಮಾಣದ ಸಾಲ ತರುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.

ಬಡ್ಡಿ ಪಾವತಿಸಿ ತಂದ ಸಾಲದ ಮೊತ್ತವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಬಳಸಲು ಚಿತ್ತ ಹರಿಸಿಲ್ಲ. ಅದರ ಬದಲು, ತಮ್ಮ ಹಳೆಯ ಶೈಲಿಯಲ್ಲಿ ಎಲ್ಲ ಸಮುದಾಯಗಳಿಗೂ ‘ಉದಾರ’ ವಾಗಿ ಹಂಚಿ, ಎಲ್ಲರನ್ನೂ ಮೆಚ್ಚಿಸುವ ಕಸರತ್ತು ನಡೆಸಿದ್ದಾರೆ.

ಕಾಂಗ್ರೆಸ್ ಸದಸ್ಯರ ಧಿಕ್ಕಾರ, ಸಭಾತ್ಯಾಗದ ಮಧ್ಯೆಯೇ ರಾಜ್ಯ ಬಜೆಟ್‌ ಅನ್ನು ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಸೋಮವಾರ ಮಂಡಿಸಿದರು. ಕೋವಿಡ್‌ ನಿಂದ ಆರ್ಥಿಕ ಚಟುವಟಿಕೆ ಮತ್ತು ಆದಾಯ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮಗಳಾಗಿದ್ದರೂ, ಬಜೆಟ್‌ ಗಾತ್ರವನ್ನು ಕುಗ್ಗಿಸಿಲ್ಲ. ತೆರಿಗೆ ಹಾಕಿ ಜನರ ಮೇಲೆ ಮತ್ತಷ್ಟು ಹೊರೆ ಹಾಕುವ ಧೈರ್ಯ ತೋರದ ಮುಖ್ಯಮಂತ್ರಿ, ಸಂಪನ್ಮೂಲದ ಕೊರತೆ ತುಂಬಲು ವರ್ಷವೊಂದರಲ್ಲಿ ದಾಖಲೆಯ ₹ 71,332 ಕೋಟಿ ಸಾಲ ಪಡೆಯುವುದಾಗಿ ಹೇಳಿದ್ದಾರೆ.

ಇದರಿಂದಾಗಿ 2022ರ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹ 4.57 ಲಕ್ಷ ಕೋಟಿ ಮೀರಲಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 26.9ರಷ್ಟಾಗುತ್ತದೆ. ಇದಕ್ಕಾಗಿ ಕಾಯ್ದೆ ತಿದ್ದುಪಡಿ ಪ್ರಸ್ತಾವವನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕ ಆಸ್ತಿ ನಿರ್ಮಾಣ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಿರಂತರ ಆದಾಯ ತರುವ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ಗೌಣವಾಗಿದೆ. ಸಂಪುಟ ಸಭೆಗಳಲ್ಲಿ ಕೈಗೊಂಡಿರುವ ಹಲವು ತೀರ್ಮಾನಗಳನ್ನು ಬಜೆಟ್‌ನಲ್ಲಿ ಪುನರುಚ್ಚರಿಸಲಾಗಿದೆ. ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದ್ದರೂ ಅನುದಾನ ಖಾತರಿಪಡಿಸಿಲ್ಲ. ಕೆಲವು ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿದ್ದರೂ, ಬಳಕೆಯ ಉದ್ದೇಶವನ್ನು ಸ್ಪಷ್ಟಪಡಿಸದೇ ಇರುವುದು ಎದ್ದು ಕಾಣುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಬದ್ಧ ವೆಚ್ಚಗಳನ್ನು (ವೇತನ, ಸೌಲಭ್ಯ, ಪಿಂಚಣಿ) ಹಾಗೂ ಸಹಾಯಾನುದಾನಗಳನ್ನು ಕಡಿಮೆ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಅಭಿವೃದ್ಧಿಗೆ ಮಾಡಬೇಕಾದ ಬಂಡವಾಳ ವೆಚ್ಚ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಜಾತಿ, ಧರ್ಮ, ಸಮುದಾಯ ಆಧಾರಿತವಾಗಿ ಅನುದಾನ ಹಂಚಿಕೆ ಮಾಡಿ, ಓಲೈಸುವ ಪ್ರವೃತ್ತಿಯನ್ನು ಯಡಿಯೂರಪ್ಪ ತಮ್ಮ ಎಂಟನೇ ಬಜೆಟ್‌ನಲ್ಲೂ ಮುಂದುವರಿಸಿದ್ದಾರೆ. ಆದ್ಯತಾ ವಲಯಕ್ಕೆ ಅನುದಾನ ಹೆಚ್ಚಳ ಮಾಡದೇ ಇರುವುದಕ್ಕೆ ಕೋವಿಡ್‌ ಸಂಕಷ್ಟವನ್ನು ಉಲ್ಲೇಖಿಸಿರುವ ಅವರು, ಜಾತಿ ಮತ್ತು ಸಮುದಾಯ ಆಧಾರಿತ ಯೋಜನೆಗಳು, ಮಠ, ಮಂದಿರಗಳು, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳಿಗೆ ಒಟ್ಟಾರೆ ಸುಮಾರು ₹ 3,000 ಕೋಟಿ ಕೊಡುಗೆ ನೀಡಿದ್ದಾರೆ.

ಮೀಸಲಾತಿ ಹೋರಾಟದ ಕಣಕ್ಕೆ ಪ್ರವೇಶಿಸಲು ಅಣಿಯಾಗುತ್ತಿರುವ ಒಕ್ಕಲಿಗ ಸಮುದಾಯದ ಮನವೊಲಿಕೆಗೆ ಮುಂದಾಗಿರುವ ಮುಖ್ಯಮಂತ್ರಿ, ಪ್ರತ್ಯೇಕ ನಿಗಮ ರಚನೆಯ ಘೋಷಣೆ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಎಲ್ಲ ನಿಗಮಗಳಿಗೆ ಒಟ್ಟಾಗಿ ನೀಡಿರುವ ಅನುದಾನದಷ್ಟೇ ಮೊತ್ತವನ್ನೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಘೋಷಿಸಿದ್ದಾರೆ.

ಆದರೆ, ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ) ಉಪ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ.

ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ ಇಲಾಖೆಗಳಿಗೆ ಬಜೆಟ್‌ನಲ್ಲಿ ನಿರೀಕ್ಷಿತ ಆದ್ಯತೆ ದೊರಕಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆಗಳಿಗಷ್ಟೇ ಅನುದಾನ ಹಂಚಿಕೆ ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯಡಿ ಆರಂಭವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ಮಾತ್ರ ಬಜೆಟ್‌ನಲ್ಲಿದೆ.

ಸ್ತ್ರೀ ಶಕ್ತಿಗೆ ಬಲ: ಅಂತರರಾಷ್ಟ್ರೀಯ ಮಹಿಳಾ ದಿನದಂದೇ ಬಜೆಟ್‌ ಮಂಡಿಸಿದ ಯಡಿಯೂರಪ್ಪ, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್‌‌ ಒದಗಿಸುವುದು, ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಮೂಲಕ ಅಲಕ್ಷಿತ ಮಹಿಳಾ ಸಮುದಾಯಕ್ಕೆ ಮೊದಲ ಬಾರಿಗೆ ‘ಆರ್ಥಿಕತೆ’ಯ ಬಲ ಕೊಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಕೃಷಿ ಮತ್ತು ಪೂರಕ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಕೃಷಿ ಮತ್ತು ಪೂರಕ ವಲಯಗಳಿಗೆ ಸಂಬಂಧಿಸಿದಂತೆ ದೊಡ್ಡ ಯೋಜನೆಗಳನ್ನೇನೂ ಪ್ರಕಟಿಸಿಲ್ಲ. ಆದರೆ, ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಿದ್ದಾರೆ. ಆರೋಗ್ಯ ಸೇವೆಯನ್ನು ರಾಜ್ಯದ ಬೇರೆ ಬೇರೆ ಭಾಗಗಳಿಗೆ ವಿಸ್ತರಿಸುವ ಪ್ರಯತ್ನಕ್ಕೆ ಪೂರಕವಾದ ಯೋಜನೆಗಳು ಬಜೆಟ್‌ನಲ್ಲಿವೆ.

ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿ ಪ್ರಕಾರ, ಹಿಂದುಳಿದಿರುವ ತಾಲ್ಲೂಕುಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕಳೆದ ವರ್ಷದಷ್ಟೇ ಅನುದಾನ ಒದಗಿಸಲಾಗಿದೆ.

ಫ್ಲ್ಯಾಟ್ ಖರೀದಿಸುವವರಿಗೆ ಸಿಹಿ: ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕಡಿಮೆ ದರದ ಫ್ಲ್ಯಾಟ್‌ ಖರೀದಿಸುವವರಿಗೆ ನೀಡುತ್ತಿರುವ ನೋಂದಣಿ ಶುಲ್ಕದ ರಿಯಾಯಿತಿ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈವರೆಗೂ ₹ 35 ಲಕ್ಷದವರೆಗಿನ ಅಪಾರ್ಟ್‌ಮೆಂಟ್‌ಗಳ ನೋಂದಣಿಗೆ ಶೇ 3ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಅದಕ್ಕಿಂತ ಹೆಚ್ಚಿನ ಬೆಲೆಯ ಸ್ವತ್ತಿಗೆ ಶೇ 5ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು.
₹ 45 ಲಕ್ಷದವರೆಗಿನ ಅಪಾರ್ಟ್‌ಮೆಂಟ್‌ಗಳ ನೋಂದಣಿಗೂ ಶೇ 3ರಷ್ಟು ಶುಲ್ಕ ವಿಧಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

*
ರಾಜ್ಯದ ಬಜೆಟ್‍ಗೆ ಇದ್ದ ಮಹತ್ವ ಮತ್ತು ಪಾವಿತ್ರ್ಯವನ್ನೇ ಯಡಿಯೂರಪ್ಪ ಹಾಳು ಮಾಡಿದ್ದಾರೆ. ರಾಜ್ಯದಲ್ಲಿರುವ 33 ಇಲಾಖೆಗಳನ್ನು ಆರು ವಲಯಗಳನ್ನಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಬಜೆಟ್‌ನಲ್ಲಿ ಇಲಾಖೆಗಳ ಕಾರ್ಯಕ್ರಮಗಳೇನು,<br/> ಕಳೆದ ವರ್ಷದ ಸಾಧನೆಗಳೇನು, ಹೊಸ ಯೋಜನೆಗಳೇನು ಎಂಬ ವಿವರಗಳೇ ಇಲ್ಲ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸ ಆಗಿಲ್ಲ. ಅತಿವೃಷ್ಟಿ ಮತ್ತು ಬೆಳೆ ಹಾನಿಯಿಂದ ನಷ್ಟಕ್ಕೀಡಾದ ರೈತರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ₹10 ಸಾವಿರ ಕೋಟಿ ಅನುದಾನ ನೀಡಬೇಕಿತ್ತು. ಆತ್ಮನಿರ್ಭರ ಯೋಜನೆಯಡಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಪ್ರಸ್ತಾಪವೇ ಇಲ್ಲ. ತಮಗೆ ಬೇಕಾದವರಿಗೆ ಧಾರಾಳವಾಗಿ ಹಣ ಕೊಟ್ಟಿದ್ದಾರೆ.
-ಬಂಡೆಪ್ಪ ಕಾಶೆಂಪೂರ್, ಉಪನಾಯಕ, ಜೆಡಿಎಸ್

**
ಯಾರಿಗೆ ಎಷ್ಟು ಅನುದಾನ

* ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ

* ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯ ಎಲ್ಲ ನಿಗಮಗಳಿಗೆ ಒಟ್ಟು ₹ 500 ಕೋಟಿ

* ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ₹ 50 ಕೋಟಿ

* ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಕಡಿತ

* ಆದಿಚುಂಚನಗಿರಿ ಮಠದಲ್ಲಿ ನಾಥ ಪಾರಂಪರಿಕ ಕೇಂದ್ರ ಸ್ಥಾಪನೆಗೆ ₹ 10 ಕೋಟಿ

* ಅಯೋಧ್ಯೆಯ ಯಾತ್ರಿನಿವಾಸಕ್ಕೆ ₹ 10 ಕೋಟಿ

* ಡಾ. ಎಸ್‌.ಎಲ್‌. ಭೈರಪ್ಪ ಅವರ ‘ಪರ್ವ’ ರಂಗ ಪ್ರಯೋಗಕ್ಕೆ ₹ 1 ಕೋಟಿ

* ಜೈನ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ₹ 50 ಕೋಟಿ

* ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಸ್ಮೃತಿ ವನಕ್ಕೆ ₹2 ಕೋಟಿ

* ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಸ್ಮೃತಿ ವನಕ್ಕೆ ₹ 2 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT