ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ವ ಸಂಗ್ರಹದಲ್ಲಿ ಶೇ 91ರಷ್ಟು ಗುರಿ ಸಾಧನೆ: ರಾಜ್ಯಪಾಲ ಥಾವರಚಂದ್ ಗೆಹಲೋತ್

Last Updated 10 ಫೆಬ್ರುವರಿ 2023, 7:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜನವರಿ ಅಂತ್ಯದವರೆಗೆ ರಾಜಸ್ವ ಸಂಗ್ರಹಣೆಯಲ್ಲಿ ಶೇಕಡ 91ರಷ್ಟು ಗುರಿ ಸಾಧನೆ ಮಾಡಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ವಿಧಾನಮಂಡಲದ‌ ಜಂಟಿ ಅಧಿವೇಶನದಲ್ಲಿ ತಿಳಿಸಿದರು.

ಶುಕ್ರವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 21ರಷ್ಟು ಹೆಚ್ಚಳವಾಗಿದೆ. ಬಜೆಟ್ ಅಂದಾಜಿನ ಶೇಕಡ 75ರಷ್ಟು ಮೊತ್ತವನ್ನು ಈವರೆಗೆ ವೆಚ್ಚ ಮಾಡಲಾಗಿದೆ ಎಂದರು.

2022ರ ಜನವರಿ ಅಂತ್ಯಕ್ಕೆ ರಾಜ್ಯ ಸರ್ಕಾರದ ಬಂಡವಾಳ ವೆಚ್ಚವು ₹ 26,915 ಕೋಟಿಯಷ್ಟಿತ್ತು. 2023ರ ಜನವರಿ ಅಂತ್ಯಕ್ಮೆ ಬಂಡವಾಳ ವೆಚ್ಚದ ಪ್ರಮಾಣವು ₹ 33,991 ಕೋಟಿಯಷ್ಟಿದ್ದು, ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಶ್ಲಾಘಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ‌ ಮೀಸಲಾತಿಯನ್ನು ಹೆಚ್ಚಿಸುವ ಐತಿಹಾಸಿಕ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ₹29,000 ಕೋಟಿ ವೆಚ್ಚ ಮಾಡಲಾಗಿದೆ ಎಂದರು.


ಸುಲಲಿತ ವ್ಯವಹಾರದ ವಿಷಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ರಫ್ತು ವಹಿವಾಟಿಗೆ ರಾಜ್ಯವು 25.87 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಕೊಡುಗೆ ನೀಡಿದೆ. ಇದು ಈವರೆಗಿನ ಅತ್ಯಧಿಕ‌ ಮೊತ್ತವಾಗಿದೆ ಎಂದು ತಿಳಿಸಿದರು.

2022ರ ನವೆಂಬರ್ ತಿಂಗಳಲ್ಲಿ ನಡೆದ ಹೂಡಿಕೆದಾರರ ಸಮಾವೇಶವು ₹9.81 ಲಕ್ಷ ಕೋಟಿಗಳಷ್ಟು ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸಿದೆ. ಇನ್ನಷ್ಟು ಹೂಡಿಕೆ ಆಕರ್ಷಿಸಲು ಏರೋಸ್ಪೇಸ್ ಮತ್ತು ರಕ್ಷಣಾ ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ ರೂಪಿಸಲಾಗಿದೆ ಎಂದರು.

ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ 31 ತ್ವರಿತ ನ್ಯಾಯಾಲಯಗಳನ್ನು ಆರಂಭಿಸಲು ಮಂಜೂರಾತಿ ನೀಡಲಾಗಿದೆ. ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

2022-23ನೇ ಸಾಲಿನಲ್ಲಿ 58,588 ದಶಲಕ್ಷ ಯೂನಿಟ್ ಉತ್ಪಾದಿಸಲಾಗಿದೆ. ಹೆಚ್ಚುವರಿಯಾಗಿ ಲಭ್ಯವಿದ್ದ 4,326.45 ದಶಲಕ್ಷ ಗ ಯೂನಿಟ್ ವಿದ್ಯುತ್ ಮಾರಾಟ ಮಾಡಿದ್ದು, ,₹ 2,500 ಕೋಟಿ ಗಳಿಸಲಾಗಿದೆ ಎಂದು ವಿವರ ನೀಡಿದರು.

ಬೆಳಕು ಯೋಜನೆಯಡಿ 2.35 ಲಕ್ಷ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ₹124 ಕೋಟಿ ವ್ಯಯಿಸಲಾಗಿದೆ ಎಂದರು.

1,475 ತಾಂಡಾ, ಗೊಲ್ಲರಹಟ್ಟಿ, ಕುರುಬರಹಟ್ಟಿ ಮತ್ತು ಇತರ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಕಲಬುರಗಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ 52,000 ಫಲಾ‌ನುಭವಿಗಳಿಗೆ ಹಕ್ಕುಪತ್ರ ವಿವರಿಸಲಾಗಿದೆ. ಇದು ವಿಶ್ವದಾಖಲೆ ಎಂದು ಹೇಳಿದರು.

ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ 7.73 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕೈಬಿಡಲಾಗಿದೆ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT