ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ: ಗರಿಗೆದರಿದ ರಾಜಕಾರಣ

Last Updated 3 ಏಪ್ರಿಲ್ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನ ಶಿಕ್ಷಕರ ಹಾಗೂ ಪದವೀಧರರ ತಲಾ ಎರಡು ಕ್ಷೇತ್ರಗಳು ಜೂನ್‌ಗೆ ತೆರವಾಗಲಿವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯರಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ಜೆಡಿಎಸ್‌ ತೊರೆದು ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿರುವುದರಿಂದ ಚುನಾವಣಾ ರಾಜಕಾರಣ ಮತ್ತಷ್ಟು ಗರಿಗೆದರಿದೆ.

ವಾಯವ್ಯ ಮತ್ತು ದಕ್ಷಿಣ ಪದವೀಧರ ಕ್ಷೇತ್ರಗಳು, ವಾಯವ್ಯ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳು ಜುಲೈ 4 ಕ್ಕೆ ತೆರವಾಗಲಿವೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಅರುಣ ಶಹಾಪುರ, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಹಣಮಂತ ಆರ್‌. ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ. ಶಿವಶಂಕರ್‌ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿತ್ತು.

ಬಸವರಾಜ ಹೊರಟ್ಟಿ ಬಿಜೆಪಿ ಸೇರಿ, ಮುಂದಿನ ಚುನಾವಣೆ ಎದುರಿಸಲು ಬಯಸಿದ್ದರು. ಈ ಕಾರಣಕ್ಕಾಗಿಯೇ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಪ್ರಕಟಿಸಿರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಬಿಜೆಪಿ ರಾಜ್ಯ ಪ್ರಮುಖರ ಸಮಿತಿ ಸಭೆಯಲ್ಲಿ ಹೊರಟ್ಟಿ ಸೇರ್ಪಡೆ ಕುರಿತು ಚರ್ಚೆ ನಡೆದಿದೆ.

ಅಮಿತ್‌ ಶಾ ಸೇರಿದಂತೆ ಬಿಜೆಪಿಯ ವರಿಷ್ಠರು ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ. ಆ ಬಳಿಕ ಹೊರಟ್ಟಿ ಅವರೇ ಬಿಜೆಪಿ ಸೇರ್ಪಡೆಯನ್ನು ಬಹಿರಂಗಪಡಿಸಿದ್ದಾರೆ.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ ಹಲವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದರು. ಏಳು ಬಾರಿ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು ಟಿಕೆಟ್‌ ನೀಡುವ ತೀರ್ಮಾನವನ್ನು ಬಿಜೆಪಿ ವರಿಷ್ಠರು ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎರಡು ಕ್ಷೇತ್ರ ಬಾಕಿ: ಕಾಂಗ್ರೆಸ್‌ ದಕ್ಷಿಣ ಪದವೀಧರ ಕ್ಷೇತ್ರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಉಳಿದ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಾಕಿ ಇದೆ.

ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಪರಿಷತ್‌ನ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಗುರಿಕಾರ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಭ್ಯರ್ಥಿಗಳ
ಆಯ್ಕೆಗೆ ಹಲವು ಸುತ್ತಿನ ಸಭೆ ನಡೆಸಿರುವ ಕೆಪಿಸಿಸಿ ಪ್ರಮುಖರು, ಸಂಭವನೀಯರ ಪಟ್ಟಿಯನ್ನು ಎಐಸಿಸಿಗೆ ಕಳುಹಿಸಿದ್ದಾರೆ.

ಜೆಡಿಎಸ್‌ ದಕ್ಷಿಣ ಪದವೀಧರ ಕ್ಷೇತ್ರದ ಹಾಲಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಬದಲಾಗಿ ಎಚ್‌.ಕೆ. ರಾಮು ಅವರಿಗೆ ಟಿಕೆಟ್‌ ಘೋಷಿಸಿದೆ. ಉಳಿದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.

ಅಲ್ಲದೆ, ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆ ಆಗಿರುವ ಆರ್‌.ಬಿ.ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ಎಸ್‌.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ, ಲೆಹರ್‌ ಸಿಂಗ್‌ ಸಿರೋಯಾ, ಎಚ್‌.ಎಂ.ರಮೇಶ್‌ ಗೌಡ ಮತ್ತು ಲಕ್ಷ್ಮಣ ಸವದಿ ಅವರ ಅವಧಿ ಜೂನ್‌ 14 ಕ್ಕೆ ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT