Karantaka Elections 2023 | ಬಿಜೆಪಿ ಹಿಂದುತ್ವಕ್ಕೆ ಬಲಿಯಾಗಬೇಡಿ: ಸಿದ್ದರಾಮಯ್ಯ

ಉಡುಪಿ: ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಕರಾವಳಿ ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಇನ್ನಾದರೂ ಬಿಜೆಪಿ ಷಡ್ಯಂತ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕರಾವಳಿಯಲ್ಲಿ ಹಿಂದುತ್ವಕ್ಕಾಗಿ ಕೊಲೆಯಾದವರು, ಕೊಲೆ ಮಾಡಿ ಜೈಲಿಗೆ ಹೋದವರೆಲ್ಲ ಹಿಂದುಳಿದ ಜಾತಿಗೆ ಸೇರಿದವರು.
ಆರ್‌ಎಸ್‌ಎಸ್ ಮುಖಂಡನ ಮಗನಾಗಲಿ, ಶಾಸಕನ ಮಗನಾಗಲಿ ಹಿಂದುತ್ವಕ್ಕಾಗಿ ಕೊಲೆಯಾದ ನಿದರ್ಶನಗಳು ಕರಾವಳಿಯಲ್ಲಿ ಸಿಗುವುದಿಲ್ಲ. ಕಾಂಗ್ರೆಸ್ ಹಿಂದುತ್ವ ಹಾಗೂ ಮನುವಾದದ ವಿರುದ್ಧವಾಗಿದೆಯೇ ಹೊರತು ಹಿಂದೂ ಹಾಗೂ ಹಿಂದೂ ಧರ್ಮದ ವಿರುದ್ಧವಾಗಿಲ್ಲ. ಬಿಜೆಪಿಯ ಹಿಂದುತ್ವಕ್ಕೆ ಜನತೆ ಮರುಳಾಗಬಾರದು ಎಂದರು ಕರೆ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ಬಿಜೆಪಿ ಅಪಪ್ರಚಾರ ಮಾಡಿತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಪರೇಶ್ ಮೇಸ್ತನದ್ದು ಸಹಜ ಸಾವು ಎಂದು ವರದಿ ನೀಡಿದೆ.
ನಾರಾಯಣ ಗುರು, ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ಕುದ್ಮಲ್ ರಂಗರಾಯರ ತತ್ವಗಳ ಮೇಲೆ ನಂಬಿಕೆ ಇಟ್ಟು ಜೀವಪರವಾಗಿ ಬದುಕೋಣ. ಮನುಷ್ಯರ ಮಧ್ಯೆ ಪ್ರೀತಿ, ಸೌಹಾರ್ದ ನೆಲೆಸಬೇಕು. ಯಾವ ಧರ್ಮವೂ ಕೊಲ್ಲಲು, ಹಿಂಸೆ ಮಾಡಲು ಪ್ರಚೋದಿಸುವುದಿಲ್ಲ ಎಂದರು.
ಕಾಂಗ್ರೆಸ್ ಬಡವರಿಗಾಗಿ ಕೃಷಿ ಭಾಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯ, ಶಾದಿಭಾಗ್ಯ, ಹಸಿರು ಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದರೆ ಬಿಜೆಪಿ ಲೂಟಿ ಹೊಡೆಯುವುದರಲ್ಲಿ ಮಗ್ನವಾಗಿದೆ. ವರ್ಗಾವಣೆ, ಬಡ್ತಿ, ಗುತ್ತಿಗೆ ಕಾಮಗಾರಿಗಳಲ್ಲಿ ಕಮಿಷನ್ ದಂಧೆಗಿಳಿದಿದೆ. ವಿಧಾನಸೌಧದ ಗೋಡೆಗಳಿಗೆ ಕಿವಿಗೊಟ್ಟರೆ ಲಂಚ ಪಿಸುಗುಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳು ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಲು ಮುಂದಾಗಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಕರಾವಳಿಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಇಲ್ಲಿನ ಶಾಸಕರು, ಸಚಿವರು, ಸಂಸದರು ಜನತೆಗೆ ತಿಳಿಸಬೇಕು.
ಕೋಮುಗಲಭೆ, ದ್ವೇಷ ರಾಜಕಾರಣ, ಜನರ ಭಾವನೆಗಳ ಜತೆ ಸರ್ಕಾರ ಆಟವಾಡುತ್ತಿರುವ ಪರಿಣಾಮ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬಂದಿಲ್ಲ. ಹೊರ ಜಿಲ್ಲೆ ರಾಜ್ಯಗಳ ವಿದ್ಯಾರ್ಥಿಗಳು ಕೂಡ ಕರಾವಳಿಗೆ ವಿದ್ಯಾಭ್ಯಾಸಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅತಿ ಹೆಚ್ಚು ವಿದ್ಯಾವಂತರು, ಬುದ್ದಿವಂತರು, ದೇಶಕ್ಕೆ ಆರ್ಥಿಕ ಶಕ್ತಿ ತುಂಬಿದ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿಂದೆ ಪ್ರಬಲವಾಗಿತ್ತು. ಪ್ರಸ್ತುತ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಓರ್ವ ಶಾಸಕರು ಮಾತ್ರ ಇರುವುದು ಬೇಸರ ತಂದಿದೆ.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಕರಾವಳಿಯ ಮೀನುಗಾರರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ನಾಡದೋಣಿ ಮೀನುಗಾರರಿಗೆ ಕೇವಲ 75 ಲೀಟರ್ ಸೀಮೆಎಣ್ಣೆ ನೀಡುತ್ತಿದೆ. ಅಮಾಯಕ ಅಲ್ಪಸಂಖ್ಯಾತರು, ಬಿಜೆಪಿಗೆ ದುಡಿದ ಕಾರ್ಯಕರ್ತರು ಕರಾವಳಿಯಲ್ಲಿ ಕೊಲೆಯಾಗುತ್ತಿದ್ದಾರೆ. ಬಿಜೆಪಿ ನಾಯಕರ ಮಕ್ಕಳು ಯಾಕೆ ಪಕ್ಷ ಸಂಘಟನೆಗೆ ತ್ರಿಶೂಲ, ದೊಣ್ಣೆ ಹಿಡಿದು ಮುಂದೆ ಬರುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರಿಗೆ ಅಧಿಕಾರ ಸಿಕ್ಕಂತಾಗುತ್ತದೆ. ಮುಂದೆ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಕರಾವಳಿಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬೆಂಗಳೂರು ಹೊರತುಪಡಿಸಿದರೆ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ನೀಡುತ್ತಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಸ್ವಂತ ಬಲದಿಂದ ಮೇಲೆ ಬಂದಿದ್ದಾರೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಸದಾ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುತ್ತಿದ್ದ ಉಭಯ ಜಿಲ್ಲೆಗಳು ಕಳೆದ ವರ್ಷ ತೀರಾ ಕಳಪೆ ಫಲಿತಾಂಶ ದಾಖಲಿಸಿವೆ. ಇದಕ್ಕೆ ಬಿಜೆಪಿಯ ಸಂಸದರು, ಶಾಸಕರು, ಸಚಿವರು ನೇರ ಹೊಣೆ. ಕರಾವಳಿಯ ಮಕ್ಕಳ ಕೈಗೆ ಪೆನ್, ಪೇಪರ್ ಬೇಕಾ ಅಥವಾ ತ್ರಿಶೂಲಾ, ಮಾರಕಾಸ್ತ್ರಗಳು ಸಿಗಬೇಕಾ ನಿರ್ಧರಿಸಿ ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ನಾಯಕರು, ಜನಪ್ರತಿನಿಧಿಗಳು ಅಕ್ರಮ ಮರಳು ಗಣಿಗಾರಿಕೆ, ಕಲ್ಲುಕ್ವಾರಿಗಳನ್ನು ನಡೆಸುತ್ತಿದ್ದಾರೆ. ಮಲ್ಪೆ ಬಂದರಿನಲ್ಲಿ ಹೂಳೆತ್ತದ ಪರಿಣಾಮ 100ಕ್ಕೂ ಹೆಚ್ಚು ಮೀನುಗಾರರು ಬಲಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಕರಾವಳಿಯ 9 ಲಕ್ಷ ಗೇಣಿದಾರರಿಗೆ, 15 ಲಕ್ಷ ಭೂಕಾರ್ಮಿಕರಿಗೆ ಭೂಮಿ, ಪುತ್ತಿಗೆ ಮಠದ ಭಗವದ್ಗೀತಾ ಮಂದಿರಕ್ಕೆ, ಶೃಂಗೇರಿ ಮಠದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ, ಅತ್ತೂರು ಚರ್ಚ್ ಗೋಪುರ ಪುನರ್ ನಿರ್ಮಾಣಕ್ಕೆ, ಶಂಕರಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು, ಮೀನುಗಾರರಿಗೆ ಸಾಗರ ದೀಪ ಯೋಜನೆ ಮೂಲಕ ಸಾವಿರಾರು ಪರ್ಸಿನ್ ಬೋಟ್‌ಗಳನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸಾಧನೆಗಳನ್ನು ಜನರಿಗೆ ತಿಳಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ‘ಆಸ್ಕರ್ ಫೆರ್ನಾಂಡಿಸ್ ಶ್ರಮದಿಂದ ಆರಂಭವಾದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಾಂಗ್ರೆಸ್ ಸರ್ಕಾರ ಹಿಂದೆ ₹ 12.5 ಕೋಟಿ ಅನುದಾನ ನೀಡಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಕಾರ್ಖಾನೆ ಹರಾಜು ಹಾಕುವ ಪರಿಸ್ಥಿತಿ ಬಂದಿದೆ. ಕರಾವಳಿಯ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ್ ಪೂಜಾರಿ, ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮುಖಂಡರಾದ ಪ್ರತಾಪ್‌ಚಂದ್ರ ಶೆಟ್ಟಿ, ಜಿ.ಸಿ.ಚಂದ್ರಶೇಖರ್, ಪ್ರತಾಪ್ ಶೆಟ್ಟಿ, ಗಾಯತ್ರಿ ಶಾಂತಗೌಡ, ನಿವೇದಿತಾ ಆಳ್ವ, ಎಂ.ಎ.ಗಫೂರ್, ರಮೇಶ್ ಕಾಂಚನ್ ಇದ್ದರು.
ಡಾ.ಸುನಿತಾ ಶೆಟ್ಟಿ ಹಾಗೂ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
‘ಮಧ್ವರಾಜ್‌ಗೆ ಪಾಠ ಕಲಿಸಿ’
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಕಾಂಗ್ರೆಸ್‌ಗೆ ಕೈಕೊಟ್ಟು ಹೋದ ಪ್ರಮೋದ್ ಮಧ್ವರಾಜ್ ಸೋತ ಬಳಿಕ ಮತ್ತೆ ಕಾಂಗ್ರೆಸ್‌ಗೆ ಬಂದರು. ಈಗ ಮತ್ತೆ ಬಿಜೆಪಿಗೆ ಹಾರಿದ್ದಾರೆ. ಆರ್‌ಎಸ್‌ಎಸ್ ಮುಖಂಡರು ಕೂಡ ಹೊಗಳದಷ್ಟು ನರೇಂದ್ರ ಮೋದಿಯನ್ನು ಹೊಗಳುತ್ತಿರುವ ಪ್ರಮೋದ್ ಮಧ್ವರಾಜ್‌ರನ್ನು ಚುನಾವಣೆಯಲ್ಲಿ ಸೋಲಿಸಿ.
–ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
‘ಸುಳ್ಳು ಹೇಳುವ ಬಿಜೆಪಿ’
ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಮಂದಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಕೋರಿ ಹಿಂದೆ ಗೃಹ ಸಚಿವರಾಗಿದ್ದ ಬೊಮ್ಮಾಯಿ ಅವರಿಗೆ ಪತ್ರ ಬರೆಯಲಾಗಿತ್ತು. ಅವರ ಉತ್ತರದಲ್ಲಿ ಬಿದ್ಯಾರ್ಥಿಗಳು, ದಲಿತರು, ರೈತರು, ದಲಿತ ರೈತ ಸಂಘಟನೆಗಳ ಹೆಸರು ಮಾತ್ರ ಇದ್ದವು. ಇಷ್ಟಾದರೂ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು
‘ಭ್ರಷ್ಟಾಚಾರ, ಕೋಮವಾದ ಬಿಜೆಪಿ ಸಾಧನೆ’
ಪ್ರಜಾಧ್ವನಿ ಕಾಂಗ್ರೆಸ್ ಯಾತ್ರೆಯಲ್ಲ; ರಾಜ್ಯದ ಜನರ ಧ್ವನಿ. ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಮಾಜ ಒಡೆಯುವ ಷಡ್ಯಂತ್ರದ ವಿರುದ್ಧದ ಯಾತ್ರೆಯಾಗಿದೆ. ಭ್ರಷ್ಟಾಚಾರ, ಕೋಮುವಾದ, ಕಮಿಷನ್ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯಾಗಿದೆ. 40 ಪರ್ಸೆಂಟ್ ಕಮಿಷನ್ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆಯಲು ಪ್ರಜಾಧ್ವನಿ ಸಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.