ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯತ್ತ ತಜ್ಞ ವೈದ್ಯರ ನಿರಾಸಕ್ತಿ

692ರಲ್ಲಿ 364 ಮಾತ್ರ ಹಾಜರು!
Last Updated 18 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ತಜ್ಞ ವೈದ್ಯರು ಹಿಂದೇಟು ಹಾಕುತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (ಜಿಡಿಎಂಒ) ಹುದ್ದೆಗೆ ಆಯ್ಕೆಯಾದವರು ಕೂಡಾ ಸೇವೆಗೆ ಸೇರಲು ಹಿಂಜರಿಯುತ್ತಿದ್ದಾರೆ.

ಕೋವಿಡ್‌ ಎರಡನೇ ಅಲೆ ಮತ್ತು ಸಂಭವನೀಯ ಮೂರನೇ ಅಲೆಯ ಆತಂಕದ ಮಧ್ಯೆ, ಮೇ– ಜೂನ್‌ ತಿಂಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ 692 ತಜ್ಞ ವೈದ್ಯರನ್ನು ಆರೋಗ್ಯ ಇಲಾಖೆ ನೇರ ನೇಮಕಾತಿ ಮಾಡಿಕೊಂಡಿತ್ತು. ಈ ವೈದ್ಯರಿಗೆ ಕರ್ತವ್ಯಕ್ಕೆ ಹಾಜರಾಗಲು ಜೂನ್‌ 16 ಕೊನೆಯ ದಿನ ಆಗಿತ್ತು. ಆದರೆ, ನೇಮಕಾತಿ ಆದೇಶ ಪಡೆದುಕೊಂಡವರ ಪೈಕಿ ಅರ್ಧಕ್ಕೂ ಹೆಚ್ಚು ವೈದ್ಯರು (364) ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ.

ಸ್ಥಳೀಯಮಟ್ಟದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸಬೇಕೆಂಬ ಉದ್ದೇಶದಿಂದ, ತಜ್ಞ ವೈದ್ಯರ ಜೊತೆಗೆ 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕೂಡಾ ನೇಮಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ಪೈಕಿ, 850 ವೈದ್ಯರು ಮಾತ್ರ ಕೆಲಸಕ್ಕೆ ಸೇರಿದ್ದಾರೆ.

ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ವದಂತಿಗಳ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞ ವೈದ್ಯರ ಕೊರತೆ ಉಂಟಾಗಬಾರದೆಂದು 153 ಮಕ್ಕಳ ತಜ್ಞರನ್ನು ಆರೋಗ್ಯ ಇಲಾಖೆ ನೇಮಿಸಿಕೊಂಡಿತ್ತು. ಆದರೆ, ಈ ಪೈಕಿ, 80 ವೈದ್ಯರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

‘ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ತಜ್ಞ ವೈದ್ಯರ ಪೈಕಿ, 17 ಮಂದಿ (ಐವರು ಮಕ್ಕಳ ತಜ್ಞರು, ತಲಾ ಒಬ್ಬರು ನೇತ್ರ ಮತ್ತು ಚರ್ಮ ರೋಗ ತಜ್ಞರು, ನಾಲ್ವರು ಅರವಳಿಕೆ ತಜ್ಞರು, ಆರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು) ಕರ್ತವ್ಯಕ್ಕೆ ಹಾಜರಾಗಲು ನಿಗಪಡಿಸಿದ್ದ ಕೊನೆ ದಿನ (ಜೂನ್‌ 16) ವಿಸ್ತರಿಸಿ, ಇನ್ನಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 35 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಕೂಡಾ ಕರ್ತವ್ಯಕ್ಕೆ ಹಾಜರಾಗಲು ಸಮಯ ಕೇಳಿ ಕೋರಿಕೆ ಸಲ್ಲಿಸಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಏಕೆ ಹಿಂದೇಟು? ‘ಅಂಕಗಳ ಅರ್ಹತೆ (ಮೆರಿಟ್‌) ಆಧಾರದಲ್ಲಿ ತಜ್ಞ ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದೆ. ಆದರೆ, ಕೌನ್ಸೆಲಿಂಗ್‌ ಮೂಲಕ ಸ್ಥಳ ಯೋಜನೆ ಮಾಡಿಲ್ಲ. ಆಯ್ಕೆಯಾದ ಬಹುತೇಕ ವೈದ್ಯರು ತಮಗೆ ಅನುಕೂಲ ಇರುವ ಸ್ಥಳಕ್ಕೆ ನೇಮಕ ಆಗಿಲ್ಲ ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾಗಿಲ್ಲ’ ಎಂದು ತಜ್ಞ ವೈದ್ಯರೊಬ್ಬರು ತಿಳಿಸಿದರು.

‘ಖಾಲಿ ಹುದ್ದೆಗಳಿರುವ ಸ್ಥಳ ತೋರಿಸಿ, ಮಹಿಳೆ, ಪತಿ– ಪತ್ನಿ ಪ್ರಕರಣಗಳಿಗೆ ಆದ್ಯತೆ ನೀಡಿ ಕೌನ್ಸೆಲಿಂಗ್‌ ಮೂಲಕ ಪಾರದರ್ಶಕವಾಗಿ ಸ್ಥಳ ನಿಯೋಜನೆ ಮಾಡುತ್ತಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ತಜ್ಞ ವೈದ್ಯರು ಸರ್ಕಾರಿ ಸೇವೆಗೆ ಸೇರಲು ಮನಸ್ಸು ಮಾಡುತ್ತಿದ್ದರು. ರಾಯಚೂರು, ಬೀದರ್‌ ಭಾಗದವರನ್ನು ಹಾಸನ, ಮಂಡ್ಯದ ಆಸ್ಪತ್ರೆಗಳಿಗೆ ನೇಮಿಸಲಾಗಿದೆ. ಆ ಪೈಕಿ ಅನೇಕರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ’ ಎಂದೂ ಹೇಳಿದರು.

‘ಹುದ್ದೆಗೆ ಸೇರಿದ ನಂತರ ಆರು ತಿಂಗಳು ಕಡ್ಡಾಯವಾಗಿ ಕರ್ತವ್ಯ ಸಲ್ಲಿಸಲೇಬೇಕು ಎಂದು ಆರೋಗ್ಯ ಇಲಾಖೆ ಷರತ್ತು ವಿಧಿಸಿತ್ತು. ಅದಕ್ಕೂ ಮೊದಲೇ ಹುದ್ದೆ ತ್ಯಜಿಸಿದರೆ, ‘ತಜ್ಞ ವೈದ್ಯರು ₹ 10 ಲಕ್ಷ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ₹ 5 ಲಕ್ಷ ದಂಡ ಕಟ್ಟಲು ಸಿದ್ಧ’ ಎಂದು ನೇಮಕಾತಿ ಸಂದರ್ಭದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಈ ಷರತ್ತು ಕೂಡಾ ಕೆಲವರು ಕರ್ತವ್ಯಕ್ಕೆ ಹಾಜರಾಗದೇ ಇರಲು ಕಾರಣ’ ಎಂದೂ ಅವರು ತಿಳಿಸಿದರು.

‘ಎಂಬಿಬಿಎಸ್‌ ವಿದ್ಯಾರ್ಥಿಗಳಿಂದ ಕಡ್ಡಾಯ ಗ್ರಾಮೀಣ ಸೇವೆ’

‘ಇಲಾಖೆಗೆ ನೇರವಾಗಿ ನೇಮಕ ಮಾಡಿಕೊಂಡಿರುವ ತಜ್ಞ ವೈದ್ಯರಲ್ಲಿ ಸುಮಾರು 300 ವೈದ್ಯರು ವರದಿ ಮಾಡಿಕೊಂಡಿದ್ದಾರೆ. ಕೆಲವರು ಸಮಯ ಕೇಳಿದ್ದಾರೆ. ಶಾಶ್ವತ ನೇಮಕಾತಿಗೆ ವೈದ್ಯರು ಬಾರದಿದ್ದರೂ 2020–21ನೇ ಸಾಲಿನಲ್ಲಿ ಎಂಬಿಬಿಎಸ್ ಮುಗಿಸಿದ ವಿದ್ಯಾರ್ಥಿಗಳು ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ ನೀಡಬೇಕೆಂಬ ವಿಷಯದಲ್ಲಿ ರಾಜ್ಯದ ನಿಲವುವನ್ನು ಇತ್ತೀಚೆಗೆ ಹೈಕೋರ್ಟ್‌ ಎತ್ತಿ ಹಿಡಿದಿರುವುದರಿಂದ 1,600 ವೈದ್ಯರು ಕರ್ತವ್ಯಕ್ಕೆ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.

ವೈದ್ಯರ ನೇರ ನೇಮಕಾತಿ 2020-21 (ತಜ್ಞರು; ನೇಮಕ; ಕರ್ತವ್ಯಕ್ಕೆ ಹಾಜರು)

ರೇಡಿಯಾಲಜಿ; 17; 6
ಜನರಲ್‌ ಮೆಡಿಸಿನ್‌, 69; 27
ಜನರಲ್‌ ಸರ್ಜರಿ; 40; 17
ಕಿವಿ, ಮೂಗು, ಗಂಟಲು; 40; 28
ಮಕ್ಕಳ ತಜ್ಞರು; 153; 80
ನೇತ್ರ ಚಿಕಿತ್ಸೆ; 51; 22
ಅರವಳಿಕೆ; 142; 66
ಪ್ರಸೂತಿ ಮತ್ತು ಸ್ತ್ರೀ ರೋಗ; 145; 69
ಚರ್ಮ ರೋಗ; 35; 17
ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ; 1,048; 850

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT