ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ನೆರೆ ಸಂತ್ರಸ್ತರ ಸಂಕಷ್ಟ: ವರ್ಷವಾಯಿತು, ಸಮಸ್ಯೆ ಉಳಿಯಿತು

ನಷ್ಟ ₹ 35,160 ಕೋಟಿ *ಕೇಂದ್ರ ಕೊಟ್ಟಿದ್ದು ₹ 1,869 ಕೋಟಿ!
Last Updated 15 ಆಗಸ್ಟ್ 2020, 21:19 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮಹಾ ಮಳೆ, ಪ್ರವಾಹಕ್ಕೆ ನೆಲಕಚ್ಚಿದ ಮನೆಗಳು, ಕುಸಿದ ಗುಡ್ಡಗಳು, ಮುಳುಗಿದ ಸೇತುವೆಗಳು, ಕಂಗಾಲಾದ ಸಂತ್ರಸ್ತರು, ಸಾಂತ್ವನ ಹೇಳುವ ಸಚಿವರು, ನಿಯಮಗಳನ್ನು ಮುಂದಿಡುವ ಅಧಿಕಾರಿಗಳು, ಕಂತುಗಳಲ್ಲಿ ಬಿಡುಗಡೆಯಾಗುವ ಅರ್ಧಂಬರ್ಧ ಪರಿಹಾರ.... ಇವೆಲ್ಲವೂ ನೆರೆ, ನಂತರದ ದಿನಗಳಲ್ಲಿ ಕಾಣಸಿಗುವ ಮಾಮೂಲಿ ಚಿತ್ರಣ ಎಂಬಂತಾಗಿದೆ.

ರಾಜ್ಯದ 12 ಜಿಲ್ಲೆಗಳಲ್ಲಿ ಇತ್ತೀಚಿನ ಮಳೆ ಮತ್ತು ಪ್ರವಾಹ, ಅವಾಂತರವನ್ನೇ ಉಂಟುಮಾಡಿದೆ. ಆದರೆ ವರ್ಷದ ಹಿಂದೆ, ಆಗಸ್ಟ್‌ ತಿಂಗಳಲ್ಲೇ ರಾಜ್ಯದ 22 ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿತ್ತು. ಆಗ ತೊಂದರೆ ಅನುಭವಿಸಿದ್ದ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಇನ್ನೂ
ಹೆಣಗಾಡುತ್ತಿದ್ದಾರೆ. ಸೂರು ಕಳೆದುಕೊಂಡವರಲ್ಲಿ ಹಲವು ಮಂದಿ ಈಗಲೂ ಸಮುದಾಯ ಭವನ, ಶಾಲೆ, ಶೆಡ್‌, ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ ಎಂಬುದು ಈ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಂಡುಬಂದ ನೋಟ.

‘ಪರಿಹಾರಕ್ಕಾಗಿ ಹಲವು ಸಲ ಅಧಿಕಾರಿಗಳನ್ನು ಭೇಟಿಯಾಗಿದ್ದರೂ ಪ್ರಯೋಜನವಾಗಿಲ್ಲ. ಈವರೆಗೂ ಶಾಲೆಯಲ್ಲಿಯೇ ವಾಸವಾಗಿದ್ದೇವೆ’ ಎನ್ನುತ್ತಾರೆ ಗೋಕಾಕ ಕಲಾರಕೊಪ್ಪದ ಯಲ್ಲವ್ವ ಕೃಷ್ಣಪ್ಪ ವಾಳಿ.

ಕೆಲವೆಡೆ ಸಂಕ, ಸೇತುವೆಗಳು ಪೂರ್ಣಗೊಂಡಿವೆ. ಶಾಲಾ ಕಟ್ಟಡಗಳಲ್ಲಿ ಕೆಲವಷ್ಟೇ ಪೂರ್ಣಗೊಂಡಿವೆ.

ಕಳೆದ ವರ್ಷದ ಮಹಾಮಳೆಯಿಂದ ₹ 35,160 ಕೋಟಿ ನಷ್ಟ ಅಂದಾಜಿಸಲಾಗಿತ್ತು. ರಾಜ್ಯ ವಿಪತ್ತು ಪರಿಹಾರ ನಿಧಿಯಡಿ (ಎಸ್‌ಡಿಆರ್‌ಎಫ್‌) ಮಾರ್ಗಸೂಚಿ ಅನ್ವಯ ₹ 3,891.80 ಕೋಟಿ ಪರಿಹಾರ ಕೇಳಲು ಅವಕಾಶ ಇತ್ತು. ಆದರೆ ನಷ್ಟವನ್ನು ಸಂಪೂರ್ಣ ಭರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯಕ್ಕೆ ತುರ್ತು ಪರಿಹಾರವಾಗಿ ಅಕ್ಟೋಬರ್‌ನಲ್ಲಿ ₹ 1,200 ಕೋಟಿ, ಎರಡನೇ ಬಾರಿ ₹ 669.95 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು.

ಅಕ್ರಮದ ದೂರು:ನೆರೆ ಪರಿಹಾರ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪಗಳಿವೆ. ಪರಿಹಾರ ಮೊತ್ತ ವಿತರಣೆಯಲ್ಲಿಯೂ ತಾರತಮ್ಯ ನಡೆದಿದೆ. ರಾಜಕೀಯ ಬೆಂಬಲ ಇರುವ ವ್ಯಕ್ತಿಗಳಿಗೆ ಹೆಚ್ಚು ಪರಿಹಾರ ಮೊದಲಾದ ದೂರುಗಳು ನೆರೆಪೀಡಿತ ಪ್ರದೇಶಗಳ ರೈತರದ್ದಾಗಿವೆ.

ಪ್ರವಾಹದಿಂದ ತೀವ್ರ ಹಾನಿಗೀಡಾದ ‘ಎ’ ಮತ್ತು ‘ಬಿ’ ವರ್ಗದ ಮನೆಗಳ ಪುನರ್‌ ನಿರ್ಮಾಣಕ್ಕೆ ಸರ್ಕಾರ ₹ 5 ಲಕ್ಷ ನೆರವು ಘೋಷಿಸಿದೆ. ಆದರೆ, ಈ ಮೊತ್ತದಲ್ಲಿ ₹ 1 ಲಕ್ಷ ನೆರೆ ಸಂತ್ರಸ್ತರ ಖಾತೆಗೆ ಜಮೆಗೊಂಡರೂ ಅದರಲ್ಲಿ ಅರ್ಧದಷ್ಟು ಸಂತ್ರಸ್ತರ ಖಾತೆಗೆ ಹಣ ಜಮೆ ಆಗಿಲ್ಲ. ಉಳಿದ ₹ 4 ಲಕ್ಷ ಅನುದಾನವನ್ನು ನಿರ್ಮಾಣವಾಗುತ್ತಿರುವ ಮನೆಗಳಿಗೆ, ನಿರ್ಮಾಣ ಹಂತದ ಜಿಪಿಎಸ್‌ ಛಾಯಾಚಿತ್ರಗಳ ಆಧಾರದ ಮೇಲೆಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.

ಈಗಾಗಲೇ ಶೇ 50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದು, ಇನ್ನುಳಿದ ಜನರು ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ ಎಂದೂ ತಿಳಿಸಿವೆ.

‘ನೆರೆಯಿಂದ ಹಾನಿಗೀಡಾದ ರೈತರ ಬೆಳೆಗೆ ಪರಿಹಾರವನ್ನು ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ನೀಡಲಾಗುವುದು’ ಎಂದು ಸರ್ಕಾರ ನಿಯಮ ರೂಪಿಸಿತ್ತು. ಒಣಭೂಮಿ ಪ್ರದೇಶಕ್ಕೆ ಪ್ರತಿ ಹೆಕ್ಟೇರ್‌ಗೆ ₹ 16,500, ನೀರಾವರಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ ₹ 23 ಸಾವಿರ, ತೋಟಗಾರಿಕಾ ಬೆಳೆಗೆಪ್ರತಿ ಹೆಕ್ಟೇರ್‌ಗೆ ₹ 25 ಸಾವಿರ. ಆದರೆ, ಅನೇಕ ಜಿಲ್ಲೆಗಳಲ್ಲಿ ಈ ಪರಿಹಾರ ಘೋಷಣೆಯಲ್ಲಷ್ಟೇ ಉಳಿದಿದೆ. ಸಂತ್ರಸ್ತರು ಪರಿಹಾರ ಪಡೆಯಲು ಕಚೇರಿಗಳಿಗೆ ಸುತ್ತಾಡಿದ್ದೇ ಬಂದಿದೆ.

₹ 10 ಸಾವಿರ ಆಸೆ– ಸಂತ್ರಸ್ತರ ಸಂಖ್ಯೆ ಇಮ್ಮಡಿ!
ನೆರೆ ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ಸರ್ಕಾರ ₹ 10 ಸಾವಿರ ಘೋಷಿಸಿತ್ತು. ಜಿಲ್ಲಾಡಳಿತ ಆಯಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಅಂಥ ಕುಟುಂಬಗಳ ಪಟ್ಟಿ ತಯಾರಿಸಿತ್ತು. ಆದರೆ, ಪರಿಹಾರ ಘೋಷಣೆ ಆಗುತ್ತಿದ್ದಂತೆ ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು. ಬೆಳಗಾವಿ, ಹಾವೇರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂತ್ರಸ್ತರಲ್ಲದವರ ಖಾತೆಗಳಿಗೂ ಹಣ ಸಂದಾಯವಾಗಿದೆ.

‘ಪಟ್ಟಿ ನೀಡುವಾಗ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸಂತ್ರಸ್ತ ಕುಟುಂಬಗಳ ಜೊತೆ ತಮ್ಮ ಹಿಂಬಾಲಕರ ಬ್ಯಾಂಕ್‌ ಖಾತೆ, ಮನೆಯ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಹೀಗಾಗಿ ಸಂತ್ರಸ್ತರ ಸಂಖ್ಯೆ ದ್ವಿಗುಣವಾಗಿ, ಹಣವೂ ಸಂದಾಯವಾಗಿತ್ತು. ಕೆಲವು ಕಡೆ ವಾಪಸ್ ಪಡೆಯಲಾಗಿದೆ’ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT