ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಪರಿಸ್ಥಿತಿ | ಹೆಚ್ಚಿದ ಹರಿವು, ಮುಂದುವರಿದ ಕೃಷ್ಣಾ ಅಬ್ಬರ

ಮಲಪ್ರಭಾ, ಘಟಪ್ರಭಾ, ತುಂಗಭದ್ರಾ ನದಿಗಳ ಹರಿವು ಕಡಿಮೆ
Last Updated 20 ಆಗಸ್ಟ್ 2020, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕೃಷ್ಣಾ ನದಿಯಲ್ಲಿ ಗುರುವಾರ ನೀರಿನ ಅಬ್ಬರ ಕಡಿಮೆಯಾಗಿದ್ದರೆ, ಮಲಪ್ರಭಾ, ತುಂಗಭದ್ರಾ ಸೇರಿ ಇತರೆ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ.ತುಂಗಭದ್ರಾ, ನವಿಲುತೀರ್ಥ ಜಲಾಶಯದಿಂದ ನದಿಗೆ ನೀರುಬಿಡಲಾಗಿದೆ.

ನದಿಪಾತ್ರಗಳ ಜನರನ್ನು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದ್ದು, ಇದರ ಪರಿಣಾಮ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ 23 ಪೈಕಿ 5 ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಅಬ್ಬರ ಮುಂದುವರಿದಿದೆ. ಆದರೆಮಲಪ್ರಭಾ, ಘಟಪ್ರಭಾ ನದಿಗಳ ಹರಿವು ಕಡಿಮೆ ಆಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಗುರುವಾರ ಇಳಿಮುಖವಾಗಿರುವುದರಿಂದ ಪ್ರವಾಹದ ಭೀತಿ ದೂರವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.98 ಲಕ್ಷ ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 33 ಸಾವಿರ ಕ್ಯುಸೆಕ್‌ ನೀರು ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾಗೆ ಸೇರಿಕೊಳ್ಳುತ್ತಿದೆ. 2.32 ಲಕ್ಷ ಕ್ಯುಸೆಕ್‌ ಒಳಹರಿವು ಇದೆ.

ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವೂ ಇಳಿಕೆಯಾಗಿದೆ. ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ಹಳ್ಳಿಗಳಿಗೆ ನುಗ್ಗಿದ್ದ ನೀರು ನಿಧಾನವಾಗಿ ಹಿಂದಕ್ಕೆ ಸರಿಯುತ್ತಿದೆ. ಗೋಕಾಕ ನಗರದೊಳಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟು ಮಾಡಿರುವ ಘಟಪ್ರಭಾ ಪೂರ ಇಳಿಮುಖವಾಗಿದೆ.

ಹೊಸಪೇಟೆಯಲ್ಲಿ ಹಂಪಿಯ ರಾಮ ಲಕ್ಷ್ಮಣ ದೇವಸ್ಥಾನದ, ಅದಕ್ಕೆ ಹೊಂದಿಕೊಂಡಿರುವ ಮಂಟಪಗಳಿಗೆ ನುಗ್ಗಿದ್ದ ನೀರು ತಗ್ಗಿದೆ. ತುಂಗಭದ್ರಾ ಅಣೆಕಟ್ಟೆಯ 20 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ 46,698 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಗುರುವಾರ 3964 ಕ್ಯುಸೆಕ್ ನೀರು ಬಿಡಲಾಗಿದೆ. ಬಾಗಲಕೋಟೆಯಲ್ಲಿ ಗದಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಗದಗ ಜಿಲ್ಲೆ ಕೊಣ್ಣೂರು ಹಾಗೂ ಬಾಗಲಕೋಟೆ ಜಿಲ್ಲೆ ಗೋವನಕೊಪ್ಪ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚಾರ ಆರಂಭವಾಗಿಲ್ಲ.

ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಆರು ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹಿಪ್ಪರಗಿ ಜಲಾಶಯಕ್ಕೆ ಒಳಹರಿವು 2.20 ಲಕ್ಷ ಕ್ಯುಸೆಕ್ ಇದೆ.

ಮುಧೋಳ ನಗರ ಹಾಗೂ ಬಾಗಲಕೋಟೆ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿಯಲ್ಲಿನ ಚಿಂಚಖಂಡಿ ಸೇತುವೆ ಮೇಲೆ ಘಟಪ್ರಭಾ ನದಿ ನೀರು ಹರಿಯುತ್ತಿದೆ.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕೆಲವೆಡೆ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಗ್ರಾಮದ ನರೇಕಳದಲ್ಲಿ ಮನೆ ಕುಸಿದಿದ್ದು, ಮನೆಯಲ್ಲಿದ್ದ ಎಂಟು ಮಂದಿ ಹೊರ ಓಡಿ ಪಾರಾಗಿದ್ದಾರೆ. ಮಹಿಳೆಯ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಗರಿಷ್ಠ 2.2 ಸೆಂ.ಮೀ. ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಆಗಾಗ್ಗೆ ಸಾಧಾರಣ ಮಳೆ ಸುರಿಯಿತು.

ಕುಂದಾಪುರ ತಾಲ್ಲೂಕಿನ ಕೋಣಿಯಲ್ಲಿ ಗರಿಷ್ಠ 8.3 ಸೆಂ.ಮೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಕೆಲವೆಡೆ ಗುರುವಾರ ಮಳೆಯಾಗಿದೆ. ಚಿಕ್ಕಮಗಳೂರು, ಕೊಪ್ಪ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಶೃಂಗೇರಿ ಭಾಗದಲ್ಲಿ ತುಂತುರು ಮಳೆಯಾಗಿದೆ. ಕಿಗ್ಗಾದಲ್ಲಿ 1.5, ಬಸರೀಕಟ್ಟೆಯಲ್ಲಿ 1.4 ಸೆಂ.ಮೀ ಮಳೆಯಾಗಿದೆ.

ತೆಪ್ಪ ದುರಂತ, ಶವ ಪತ್ತೆ:ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಗಡಿ ಪ್ರದೇಶದ ಜುರಾಲಾ ಅಣೆಕಟ್ಟು ಬಳಿ ಗುರುವಾರ ನರಸಮ್ಮ (40) ಎಂಬವರ ಶವ ಪತ್ತೆಯಾಗಿದೆ.

ಇದೇ ಪ್ರಕರಣದಲ್ಲಿ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ. ಆಗಸ್ಟ್ 17ರಂದು ತೆಪ್ಪ ಮುಳುಗಿದ್ದು, ಈವರೆಗೆ ಮೂವರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ.

ಕೆಆರ್‌ಎಸ್‌, ಕಬಿನಿಗೆ ಬಾಗಿನ ಇಂದು
ಮೈಸೂರು: ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ ಮತ್ತು ಮೈಸೂರು ಜಿಲ್ಲೆಯ ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಬಾಗಿನ ಅರ್ಪಿಸಲಿದ್ದಾರೆ.

ಬೆಳಿಗ್ಗೆ 11.50ಕ್ಕೆ ಕೆಆರ್‌ಎಸ್ ಹೆಲಿಪ್ಯಾಡ್‌ಗೆ ಬಂದಿಳಿಯಲಿರುವ ಮುಖ್ಯಮಂತ್ರಿ, ಮಧ್ಯಾಹ್ನ 12.05ಕ್ಕೆ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸುವರು. ನಂತರ ಮೈಸೂರು ಜಿಲ್ಲೆಗೆ ತೆರಳಲಿದ್ದು, ಮಧ್ಯಾಹ್ನ 1.15ಕ್ಕೆ ಕಬಿನಿ ಜಲಾಶಯದಲ್ಲಿ ಬಾಗಿನ ಅರ್ಪಿಸುವರು.

ಯಾದಗಿರಿ: ಪ್ರವಾಹ ಭೀತಿ, ಆತಂಕ
ಕಲಬುರ್ಗಿ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ಇದರಿಂದ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ 23 ಪೈಕಿ 5 ಗ್ರಾಮಗಳಲ್ಲಿ ಪ್ರವಾಹ ಭೀತಿ ಇದೆ. ಯಕ್ಷಂತಿ, ಗೌಡೂರು, ಚೆನ್ನೂರು, ಗೊಂದೆನೂರು ಮತ್ತು ಕೊಡಾಲ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.

ಸುರಪುರ ತಾಲ್ಲೂಕಿನ ದೇವಪುರದಲ್ಲಿ ಹಿರೇಹಳ್ಳ ತುಂಬಿ ಹರಿಯುತ್ತಿದ್ದು ನೂರಾರು ಹೆಕ್ಟರ್ ಜಮೀನು ಜಲಾವೃತವಾಗಿದೆ. ಬತ್ತ, ತೊಗರಿ, ಹತ್ತಿ ಬೆಳೆ ಕೊಳೆಯುತ್ತಿವೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿ ಗ್ರಾಮದ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾದ ಸೇತುವೆ 5 ದಿನಗಳಿಂದ ಮುಳುಗಡೆಯಾಗಿದ್ದು, ವಾಹನಗಳು ಸುಮಾರು 70ಕಿ.ಮೀ ದೂರ ಸುತ್ತುವರೆದು ಸಂಚರಿಸುತ್ತಿವೆ. ಇದು ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗೆ ಮುಖ್ಯ ಸಂಪರ್ಕ ಸೇತುವೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT