ಮಂಗಳವಾರ, ನವೆಂಬರ್ 29, 2022
29 °C

ಎರಡನೇ ಬಾರಿ ಸಂಘಟಿತ ದಾಳಿ: ಪಿಎಫ್‌ಐ, ಎಸ್‌ಡಿಪಿಐನ 80 ಕಾರ್ಯಕರ್ತರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ಮಂಗಳವಾರ ಎರಡನೇ ಬಾರಿ ಸಂಘಟಿತ ದಾಳಿ ನಡೆಸಿರುವ ಪೊಲೀಸರು, 80ಕ್ಕೂ ಹೆಚ್ಚು ಮಂದಿ ವಶಕ್ಕೆ ಪಡೆದಿದ್ದಾರೆ.

ಈ ಎರಡೂ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ, ಕೋಮು ಸಾಮರಸ್ಯ ಹಾಳುಗಡೆವಲು ಪ್ರಯತ್ನಿಸಿದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ತುಮಕೂರು, ಕೋಲಾರ, ರಾಯಚೂರು, ಗದಗ, ಮಂಗಳೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ರಾಮನಗರ, ಉಡುಪಿ, ಚಾಮರಾಜನಗರ, ಕಲಬುರಗಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದೆ.

ವಾರದ ಹಿಂದಷ್ಟೇ ಎನ್‌ಐಎ ಹಾಗೂ ರಾಜ್ಯ ಪೊಲೀಸರು ದಾಳಿ ನಡೆಸಿ, ಪಿಎಫ್‌ಐ, ಎಸ್‌ಡಿಪಿಐನ 20 ಮುಖಂಡರನ್ನು ಬಂಧಿಸಿದ್ದರು. 

ಕೆಲ ದಿನಗಳ ಹಿಂದೆ ನಡೆದಿದ್ದ ಎನ್ಐಎ ದಾಳಿ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದ, ಪ್ರತಿಭಟನೆ ಹಾಗೂ ಹೋರಾಟದ ಸಮಯದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೂ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. 

ಸತತ ಎಂಟು ಗಂಟೆಗಳ ಕಾರ್ಯಾಚರಣೆ ನಂತರ ಎಲ್ಲ ಬಂಧಿತರನ್ನೂ ಸ್ಥಳೀಯ ಮ್ಯಾಜಿಸ್ಟ್ರೇಟ್‌ಗಳ ಮುಂದೆ ಹಾಜರುಪಡಿಸಿ, ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಕೆಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಲ್ಲಿ ಕೆಲವರು ತೀವ್ರಗಾಮಿ ಇಸ್ಲಾಮಿಕ್‌ ಸದಸ್ಯರೂ ಆಗಿದ್ದಾರೆ. ಕಾರ್ಯಾಚರಣೆ ಸಮಯದಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಉನ್ನತ ಮೂಲಗಳು ತಿಳಿಸಿವೆ.

ಪೊಲೀಸರ ದಾಳಿ ಖಂಡಿಸಿ ಪ್ರತಿಭಟನೆ: 

ಪೊಲೀಸರ ದಾಳಿ ಖಂಡಿಸಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಕೆಲವೆಡೆ ಪ್ರತಿಭಟನೆ ನಡೆಸಿದರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿಯಲ್ಲಿ ಪೊಲೀಸ್ ಠಾಣೆಯ ಗೇಟು ಬಳಿ ಜಮಾಯಿಸಿದ ಕಾರ್ಯಕರ್ತರು,ಪೊಲೀಸ್ ವಾಹನ ಅಡ್ಡಗಟ್ಟಿ ಧಿಕ್ಕಾರ ಕೂಗಿದರು. ಕೆಲ ಸಮಯ ತಳ್ಳಾಟ, ನೂಕಾಟ ಸಹ ನಡೆಯಿತು. ರಾಯಚೂರಿನಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು