ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಪಕ್ಷ ತೊರೆಯುವವರ ಬಗ್ಗೆ ನನಗೆ ಮಾಹಿತಿ ಇದೆ, ಆತಂಕವಿಲ್ಲ: ಕುಮಾರಸ್ವಾಮಿ

Last Updated 26 ಜನವರಿ 2022, 15:52 IST
ಅಕ್ಷರ ಗಾತ್ರ

ಬೆಂಗಳೂರು: ಯಾರೆಲ್ಲಾ ಜೆಡಿಎಸ್‌ನಿಂದ ಹೊರಹೋಗಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ತಮಗೆ ಇದೆ. ಪಕ್ಷ ತೊರೆಯುವವರ ಬಗ್ಗೆ ತಮಗೇನೂ ಆತಂಕವಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿದೆ. ಶಾಸಕರು ತಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡುತ್ತಾರೆ. ಕೆಲವು ಶಾಸಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರಿಂದ ಅನುದಾನ ಪಡೆದು ಗೆದ್ದು ಬಂದಿದ್ದಾರೆ. ಅಂಥಹವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಾರೆ. ಎಲ್ಲ ಶಾಸಕರನ್ನೂ ಅನುಮಾನದಿಂದ ನೋಡಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

‘ನಮ್ಮ ಪಕ್ಷದ ಕೆಲವು ಶಾಸಕರು ಸಿದ್ದರಾಮಯ್ಯ ಅವರಿಂದ ಗೆದ್ದು ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅವರ ಗೆಲುವಿಗಾಗಿ ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಅವರಿಂದ ಗೆದ್ದವರಿಗೆ 2023ರ ಚುನಾವಣೆಯಲ್ಲಿ ಗೊತ್ತಾಗುತ್ತದೆ’ ಎಂದರು.

ಬಿಜೆಪಿಯ ಕೆಲವು ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಅವರು ಯಾವ ಪಕ್ಷದ ಬಾಲಂಗೋಚಿ ಎಂಬುದು ಈಗ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಕೆಲವರು ಜೆಡಿಎಸ್‌ಗೂ ಅರ್ಜಿ ಹಾಕಿಕೊಂಡಿದ್ದಾರೆ. ಆ ಪಕ್ಷಗಳ ಸಣ್ಣಪುಟ್ಟ ಮುಖಂಡರು, ಹೊಸಬರು ಜೆಡಿಎಸ್‌ಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

‘ತಾವು ಜೆಡಿಎಸ್‌ ಅಧ್ಯಕ್ಷರಾಗಿದ್ದಾಗ ಕುಮಾರಸ್ವಾಮಿ ಎಲ್ಲಿದ್ದರು ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಪಕ್ಷಕ್ಕೆ ನನ್ನ ಕೊಡುಗೆಯೂ ಇದೆ. ಅವರ ಕೊಡುಗೆ ಏನೂ ಇಲ್ಲ. ಇಲ್ಲಿ ಅಧಿಕಾರ ಅನುಭವಿಸಿ ಬೇರೆ ಕಡೆ ಹೋದರು. ಅವರಿಗೆ ಸಿದ್ಧಾಂತವೇ ಇಲ್ಲ. ಅಧಿಕಾರವೇ ಅವರ ಸಿದ್ಧಾಂತ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಪರೇಷನ್‌ ಕಮಲದಿಂದ ಬಿಜೆಪಿ ಸೇರಿದವರ ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಸೋಲಿಸಲು ಸಿದ್ದರಾಮಯ್ಯ ಹಣ ಪಡೆದಿದ್ದರು. ಹಣ ತೆಗೆದುಕೊಂಡವರೇ ನನ್ನ ಬಳಿ ಹೇಳಿದ್ದಾರೆ. ಈಗ ಸತ್ಯ ಹರೀಶ್ಚಂದ್ರರಂತೆ ಸಿದ್ಧಾಂತ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್‌ ಶಾಸಕರನ್ನು ಸೆಳೆಯುವುದಿಲ್ಲ ಎಂಬ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಮೇಲೆ ಅಷ್ಟಾದರೂ ಕನಿಕರ, ಗೌರವ ಇಟ್ಟಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT