ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಮತ ಕ್ರೋಡೀಕರಣ: ಕಾಂಗ್ರೆಸ್‌ಗೆ ಮತ್ತೆ ಅಧಿಕಾರಕ್ಕೇರುವ ಭರವಸೆ

1999ರ ಪರಿಸ್ಥಿತಿ ಮರುಕಳಿಸುವತ್ತ ಡಿಕೆಶಿ ನೋಟ
Last Updated 20 ಡಿಸೆಂಬರ್ 2021, 1:05 IST
ಅಕ್ಷರ ಗಾತ್ರ

ಬೆಳಗಾವಿ: ಮೇಲ್ಮನೆ ಚುನಾವಣೆಯಲ್ಲಿ ಒಗ್ಗಟ್ಟಿನ ಬಲದಿಂದ ಜೆಡಿಎಸ್‌ ಮತ್ತು ಬಿಜೆಪಿ ಭದ್ರಕೋಟೆಯನ್ನು ಶಿಥಿಲಗೊಳಿಸಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ ನಾಯಕರ ವಿಶ್ವಾಸವನ್ನು ಹೆಚ್ಚಿಸಿದೆ. ಎದುರಾಳಿ ಪಕ್ಷಗಳ ಆಂತರಿಕ ವಿಘಟನೆಯ ಲಾಭ ಪಡೆಯುವ ಅವಕಾಶದ ಬಗ್ಗೆ ಪಕ್ಷದೊಳಗೆ ಚರ್ಚೆ ಆರಂಭವಾಗಿದೆ.

1999ರಲ್ಲಿ ಪಾಂಚಜನ್ಯಯಾತ್ರೆ ನಡೆಸಿದ ಅಂದಿನ ಕೆಪಿಸಿಸಿ ಅಧ್ಯಕ್ಷ ಎಸ್.ಎಂ. ಕೃಷ್ಣ ಕಾಂಗ್ರೆಸ್‌ ಅನ್ನು ಪೂರ್ಣಬಲದಲ್ಲಿ ಅಧಿಕಾರಕ್ಕೆ ತಂದಿದ್ದರು. ಅದಕ್ಕೆ ಹಿಂದಿನ ಜನತಾದಳ ಸರ್ಕಾರದಲ್ಲಿ ನಾಯಕತ್ವದ ಜಗಳ, ಒಕ್ಕಲಿಗರ ಮತಗಳು ಒಗ್ಗಟ್ಟಿನಿಂದ ಕೈ ಹಿಡಿದಿದ್ದು ಅನುಕೂಲಕಾರಿಯಾಗಿ ಪರಿಣಮಿಸಿತ್ತು. ಅದಾದ ಬಳಿಕ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. 2008ರಲ್ಲಿ ಅಧಿಕಾರ ಹಿಡಿದ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿತ್ತು. ಭ್ರಷ್ಟಾಚಾರದ ಹಗರಣ, ಮುಖ್ಯಮಂತ್ರಿಯಾಗಿದ್ದವರೇ ಜೈಲಿಗೆ ಹೋಗಿದ್ದು, ಸಚಿವರ ಸರಣಿ ರಾಜೀನಾಮೆಗಳು ಕಾಂಗ್ರೆಸ್‌ಗೆ ಗೆಲುವಿನ ದಾರಿ ತೋರಿಸಿದ್ದವು. ಪರಮೇಶ್ವರ–ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಹಿಡಿದಿತ್ತು. ಅದೇ ಪರಿಸ್ಥಿತಿ ಮರುಕಳಿಸಬಹುದು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಎಂದು ಆ ಪಕ್ಷದ ನಾಯಕರೊಬ್ಬರು ಹೇಳಿದರು.

ಈ ಅವಧಿಯಲ್ಲಿ ಬಿಜೆಪಿ ಸರ್ಕಾರ ಎರಡು ಮುಖ್ಯಮಂತ್ರಿಗಳನ್ನು ಕಂಡಿದೆ. ‘ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ’ ಎಂದು ಆ ಪಕ್ಷದ ವರಿಷ್ಠ, ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಹೇಳಿದ್ದಾರೆ. ಆದರೆ, ಆ ಮಾತಿನಲ್ಲಿ ಬಿಜೆಪಿ ನಾಯಕರಿಗೆ ವಿಶ್ವಾಸವಿಲ್ಲ. ಹಾಗಿದ್ದರೂ 2013ರ ಚುನಾವಣೆಯಲ್ಲಾದ ಪರಿಣಾಮವೇ ಈಗಲೂ ಆದೀತೆಂಬ ಆತಂಕದಲ್ಲಿ ಮುಖ್ಯಮಂತ್ರಿ ಬದಲಾಯಿಸುವ ಸಾಧ್ಯತೆ ತೀರಾ ಕಡಿಮೆ ಎಂಬ ಚರ್ಚೆಗಳು ಬಿಜೆಪಿ ಪಡಸಾಲೆಯಲ್ಲಿ ಶುರುವಾಗಿವೆ.

ಮೇಲ್ಮನೆ ಗೆಲುವಿನ ಲೆಕ್ಕ: ‘ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ತಳಮಟ್ಟದಲ್ಲಿ ಬಿಜೆಪಿಗೆ ಇರುವ ಸಂಘಟನಾತ್ಮಕ ಬಲ ಕಂಡು ಅಧಿಕಾರಕ್ಕೆ ಬರುವ ವಿಶ್ವಾಸ ಕಳೆದುಕೊಂಡಿದ್ದೆವು. ಮೇಲ್ಮನೆ ಚುನಾವಣೆ ಹಾಗೂ ಹಾನಗಲ್‌ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಭರವಸೆಯ ಬೆಳಕನ್ನು ತೋರಿಸಿದೆ’ ಎಂಬ ಮಾತುಗಳು ಬೆಳಗಾವಿಯ ಅಧಿವೇಶನದ ವೇಳೆ ಮೊಗಸಾಲೆಯ ಚರ್ಚೆಯ ಕೇಂದ್ರ ಬಿಂದುವಾಗಿದ್ದವು.

1999ರಲ್ಲಿ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಸಿಗಬಹುದೆಂಬ ಕಾರಣಕ್ಕೆ, ಜೆಡಿಎಸ್‌ನ ಮತಬ್ಯಾಂಕ್ ಆಗಿದ್ದ ಈ ಸಮುದಾಯದವರು ತಮ್ಮ ಚಿತ್ತವನ್ನು ಒಮ್ಮುಖವಾಗಿ ಬದಲಿಸಿದ್ದರು. ಅಲ್ಲದೇ ಆಯ್ದ ಕ್ಷೇತ್ರಗಳಲ್ಲಿ ಲಿಂಗಾಯತ, ಹಿಂದುಳಿದ, ಪರಿಶಿಷ್ಟ ಜಾತಿಯ ಮತಗಳು ಕೈಹಿಡಿದಿದ್ದವು. ಮುಸ್ಲಿಮರ ಮತ್ತು ಕ್ರೈಸ್ತರ ಮತಗಳು ಸಿಕ್ಕಿದ್ದವು.

ಮೇಲ್ಮನೆಯ ಚುನಾವಣೆಯ ಫಲಿತಾಂಶ ನೋಡಿದರೆ ಜೆಡಿಎಸ್‌ ಭದ್ರಕೋಟೆಯಾಗಿರುವ ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದರಲ್ಲೂ ಮಂಡ್ಯದಲ್ಲಿ ಒಬ್ಬ ಶಾಸಕರೂ ಇಲ್ಲದಿದ್ದರೂ, ಬಿಜೆಪಿಯ ಸಚಿವರಿದ್ದರೂ ಕಾಂಗ್ರೆಸ್ ಗೆದ್ದಿರುವುದು ಈ ಬದಲಾವಣೆಯ ಸಂಕೇತ. ಅದಲ್ಲದೇ ತುಮಕೂರು, ಕೋಲಾರ–ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮೈಸೂರಿನಲ್ಲಿ ಕೂಡ ಇದೇ ರೀತಿಯ ಫಲಿತಾಂಶ ಸಿಕ್ಕಿದೆ. ಕೊಡಗಿನಲ್ಲಿ ಸಂಸದರು ಹಾಗೂ ಶಾಸಕರು ಬಿಜೆಪಿಯವರೇ ಇದ್ದರೂ ಪಕ್ಕದ ಜಿಲ್ಲೆಯವರಾದ ಮಂಥರ್‌ಗೌಡ ಅವರನ್ನು ಕೊನೆಗಳಿಗೆಯಲ್ಲಿ ಕಣಕ್ಕೆ ಇಳಿಸಿದರೂ ತೀವ್ರ ಪೈಪೋಟಿ ಒಡ್ಡಲು ಸಾಧ್ಯವಾಯಿತು. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದು, ಸಿದ್ದರಾಮಯ್ಯ ಪ್ರಭಾವ, ಪಕ್ಷದ ಶಾಸಕರು–ಹಿಂದಿನ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿರುವುದು ಇವೆಲ್ಲವೂ ಕಾರಣ. ಮುಂದಿನ ಫಲಿತಾಂಶಕ್ಕೆ ಇದು ದಿಕ್ಸೂಚಿಯಾಗಿದೆ ಎಂದು ಆ ಪಕ್ಷದ ನಾಯಕರೊಬ್ಬರು ಹೇಳಿದರು.

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಪಕ್ಷದ ಸಾಧನೆ, ಮುಖ್ಯಮಂತ್ರಿ ತವರು ಜಿಲ್ಲೆಯ ಹಾನಗಲ್ ಉಪಚುನಾವಣೆಯಲ್ಲಿ ಗೆಲುವು ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಕಡೆಗೆ ಒಲವು ಹರಿಯುತ್ತಿರುವುದರ ಸೂಚನೆ. ಈ ಸಾಧನೆಯನ್ನು ಮತ್ತೊಂದು ಹೆಜ್ಜೆಯತ್ತ ಕೊಂಡೊಯ್ಯಬೇಕೆಂಬ ಚರ್ಚೆ ಶುರುವಾಗಿದೆ ಎಂದರು.

ಆತ್ಮಾವಲೋಕನದತ್ತ ಬಿಜೆಪಿ
ಪಕ್ಷ ಅಧಿಕಾರದಲ್ಲಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲಾಗದಿರುವುದು, ಬೆಳಗಾವಿಯಲ್ಲಿ ಅಧಿಕೃತ ಅಭ್ಯರ್ಥಿಯ ಸೋಲು, ಮೈಸೂರು, ಮಂಡ್ಯದ ತೀವ್ರ ಹಿನ್ನಡೆ, ಕೊಡಗಿನಲ್ಲಿ ಎದುರಾಳಿಯ ಸಾಧನೆಗಳು ಆತ್ಮಾವಲೋಕನಕ್ಕೆ ಸಕಾಲ ಎಂಬ ಸೂಚನೆಯನ್ನು ನೀಡಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ಆರಂಭವಾಗಿವೆ.

ಬೆಳಗಾವಿಯಲ್ಲಿ ಬಿಜೆಪಿ 13 ಶಾಸಕರು, ಮೂವರು ಸಂಸದರು, ಇಬ್ಬರು ಸಚಿವರು ಇದ್ದು ಸಂಘಟನೆ ಬಲಿಷ್ಠವಾಗಿದೆ. ಇಬ್ಬರು ಬಿಜೆಪಿ ಶಾಸಕರೇ ಮುಂದೆ ನಿಂತು ತಮ್ಮನನ್ನು ಗೆಲ್ಲಿಸಿಕೊಂಡಿರುವುದು, ಅದಕ್ಕೆ ಪಕ್ಷದ ಕೆಲವರು ಕೈಜೋಡಿಸಿರುವುದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಪರಿಷತ್ತಿನಲ್ಲಿ ಆಡಳಿತ ಪಕ್ಷದ ಮುಖ್ಯಸಚೇತಕರಾಗಿರುವ ಮಹಾಂತೇಶ ಕವಟಗಿಮಠ ಸೋಲು ಅನಿರೀಕ್ಷಿತ ಆಘಾತ. ಈ ಬಗ್ಗೆ ಪರಾಮರ್ಶೆ ಮಾಡಲೇಬೇಕು ಎಂಬ ಒತ್ತಾಯವೂ ಶುರುವಾಗಿದೆ.

ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಪದೇ ಪದೇ ನೀಡುತ್ತಿರುವ ಹೇಳಿಕೆಯು ಪಕ್ಷದ ಕಾರ್ಯಕರ್ತರಲ್ಲಿನ ವಿಶ್ವಾಸವನ್ನು ಕುಗ್ಗಿಸಲಿದೆ. ಜತೆಗೆ ಪಕ್ಷದ ನಾಯಕರು ಮೈಚಳಿ ಬಿಟ್ಟು ದುಡಿದಿದ್ದರೆ ಮೇಲ್ಮನೆಯಲ್ಲಿ ಇನ್ನಷ್ಟು ಸ್ಥಾನಗಳಲ್ಲಿ ಗೆಲುವು ಕಷ್ಟವಾಗುತ್ತಿರಲಿಲ್ಲ. ಸದ್ಯವೇ ನಡೆಯಲಿರುವ ಪ್ರಮುಖರ ಸಮಿತಿಯಲ್ಲಿ ಇದನ್ನು ಪ್ರಸ್ತಾಪಿಸಲಾಗುವುದು ಎಂದು ನಾಯಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT