ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿಷೇಧ?

ಕರ್ನಾಟಕ ರಾಜ್ಯ ನಾಗರಿಕ ಸೇವೆ (ನಡವಳಿಕೆ) ನಿಯಮ-2020 ಕರಡು ಪ್ರಕಟಿಸಿದ ಸರ್ಕಾರ
Last Updated 30 ಅಕ್ಟೋಬರ್ 2020, 10:56 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆ (ನಡವಳಿಕೆ) ನಿಯಮ-2020 ಕರಡನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದೆ. ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿಷೇಧ ಹೇರುವ ಪ್ರಸ್ತಾಪವನ್ನು ಕರಡುವಿನಲ್ಲಿ ಮಾಡಲಾಗಿದೆ.

ಸರ್ಕಾರಿ ಸೇವೆಯಲ್ಲಿರುವವರು ಏನು ಮಾಡಲು ಮುಕ್ತರು, ಏನು ಮಾಡಬಾರದು ಎಂಬುದರ ಬಗ್ಗೆ ಕರಡುವಿನಲ್ಲಿ ವಿವರಣೆಯನ್ನೂ ನೀಡಲಾಗಿದೆ.

ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟವಾಗಿರುವ ಕರಡುವಿನ ಅಂಶಗಳ ಬಗೆಗಿನ ಸಲಹೆ ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವಕಾಶವನ್ನೂ ನೀಡಿದೆ. ಇದರ ನಂತರ ಕರಡು ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಕರಡು ನಿಯಮಗಳ ಗಮನಾರ್ಹ ಅಂಶಗಳು ಇಲ್ಲಿವೆ.

'ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದ ಹೊರತು ಸರ್ಕಾರಿ ಸೇವೆಯಲ್ಲಿರುವ ಯಾವುದೇ ವ್ಯಕ್ತಿ ನೌಕರರು ಚಲನಚಿತ್ರಗಳು ಮತ್ತು ಟೆಲಿವಿಷನ್ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ' ಎಂದು ಕರಡುವಿನಲ್ಲಿ ಹೇಳಲಾಗಿದೆ.

ಸರ್ಕಾರಿ ನೌಕರರು ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಇಲ್ಲದೆ ಪತ್ರಿಕೆ ಅಥವಾ ನಿಯತಕಾಲಿಕಗಳ ಪ್ರಕಟಣೆ, ಸಂಪಾದನೆ, ನಿರ್ವಹಣೆಯಲ್ಲಿ ತೊಡಗುವಂತೆಯೂ ಇಲ್ಲ. ರೇಡಿಯೋ, ಟೆಲಿವಿಷನ್ ಸೇರಿದಂತೆ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಮಾಧ್ಯಮದಲ್ಲಿನ ಹೊರಗಿನಿಂದ ನಿರ್ಮಾಣಗೊಂಡ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತಿಲ್ಲ.

ಕರಡು ನಿಯಮವನ್ನು ಅಂತಿಮಗೊಳಿಸಿದ ನಂತರ ಯಾವುದೇ ಪುಸ್ತಕವನ್ನು ಪ್ರಕಟಿಸುವುದು ಅಥವಾ ಯಾವುದೇ ರೀತಿಯ ಸಾಹಿತ್ಯಿಕ ಅಥವಾ ಕಲಾತ್ಮಕ ಅಥವಾ ವೈಜ್ಞಾನಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗುತ್ತದೆ. ಆದರೆ, ಸಾಂದರ್ಭಿಕವಾಗಿ ಸಾಹಿತ್ಯ, ನಾಟಕ, ಪ್ರಬಂಧಗಳು, ಕವನ, ಸಣ್ಣ ಕಥೆಗಳು, ಕಾದಂಬರಿಗಳನ್ನು ಪೂರ್ವಾನುಮತಿ ಪಡೆಯದೆಯೇ ಬರೆಯಲು ಅವಕಾಶವಿರಲಿದೆ.

ಅಂತಹ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವಾಗ, ಅಧಿಕಾರಿ ತನ್ನ ಸಮಯ ಮತ್ತು ಅಧಿಕೃತ ಸ್ಥಾನವನ್ನು ಬಳಕೆ ಮಾಡಿಕೊಳ್ಳುವಂತಿಲ್ಲ. ಯಾರ ಮೇಲೂ ಪ್ರಭಾವವನ್ನೂ ಬೀರುವಂತಿಲ್ಲ. ಅಂತಹ ಪ್ರಕಟಣೆಯಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯಗಳಿರಬಾರದು ಮತ್ತು ಸರ್ಕಾರದ ನೀತಿಗಳನ್ನು ಟೀಕಿಸುವ ಅಂಶಗಳಿರಬಾರದು.

ಉಡುಗೊರೆಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಕೆಲಸದಲ್ಲಿರುವವರು ಯಾವುದೇ ಉಡುಗೊರೆಗಳನ್ನು ಪಡೆಯುವಂತಿಲ್ಲ. ಅಲ್ಲದೆ, ತನ್ನ ಕುಟುಂಬಸ್ತರು ಉಡುಗೊರೆಗಳನ್ನು ಪಡೆಯುವಂತಿಲ್ಲ.

ಸರ್ಕಾರದ ಅಧಿಕೃತ ವ್ಯವಹಾರಗಳನ್ನು ನಿಭಾಹಿಸುವ ಹೊತ್ತಿನಲ್ಲಿ ಯಾವುದೇ ಹೊರಗಿನ ವ್ಯಕ್ತಿಯಿಂದ ಅದ್ದೂರಿ ಆತಿಥ್ಯವನ್ನೂ ಸ್ವೀಕರಿಸುವಂತಿಲ್ಲ ಎಂದು ಹೊಸ ಕಾನೂನಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT