ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ ಸಾಧ್ಯತೆ: ಎಂಟು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’

Last Updated 15 ಆಗಸ್ಟ್ 2020, 19:32 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ ಯಾದಗಿರಿ, ವಿಜಯಪುರ, ಕಲಬುರ್ಗಿ, ಬೀದರ್, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆ.16ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಆ.16ರಿಂದ 20ರವರೆಗೆ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಐದೂ ದಿನ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.

ಮಳೆ-ಎಲ್ಲಿ,ಎಷ್ಟು?: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ 8 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕೊಟ್ಟಿಗೆಹಾರ 7, ಭಾಗಮಂಡಲ, ಕೊಡಗು 4, ಬೆಳ್ತಂಗಡಿ, ಹೊಸನಗರ, ಆಗುಂಬೆ, ಮಡಿಕೇರಿ 3,ರಾಯಚೂರು, ವಿರಾಜಪೇಟೆ 2, ಮೂಡುಬಿದರೆ, ಪುತ್ತೂರು, ಮಂಗಳೂರು, ಅಂಕೋಲಾ, ಭಟ್ಕಳ, ಬೆಳಗಾವಿ, ಹಾಸನ, ಶೃಂಗೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಉತ್ತಮ ಮಳೆ: ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಕಳೆದೆರಡು ದಿನಗಳಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ ಶನಿವಾರ ಜೋರಾಗಿ ಸುರಿದಿದೆ.

ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿ ಉತ್ತಮ ಮಳೆಯಾಗಿದೆ. ಸವದತ್ತಿ ತಾಲ್ಲೂಕಿನ ಮಲಪ್ರಭಾ (ನವಿಲುತೀರ್ಥ) ಜಲಾಶಯ ಶೇ 82ರಷ್ಟು ಭರ್ತಿಯಾಗಿದ್ದು, ನದಿಗೆ ನೀರು ಬಿಡುಗಡೆ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಲಾಗುವುದು ಎಂದು ನೀರಾವರಿ ನಿಗಮದ
ಅಧಿಕಾರಿ ತಿಳಿಸಿದ್ದಾರೆ. ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಸೇರುವ ನೀರಿನ ಪ್ರಮಾಣ ಕೊಂಚ ಜಾಸ್ತಿಯಾಗಿದೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಪರಿಸರದಲ್ಲಿ ಶನಿವಾರ ಬೆಳಿಗ್ಗೆ ಲಘು ಭೂಕಂಪದ ವರದಿಯಾಗಿದೆ.

ಶಿವಮೊಗ್ಗ ತಾಲ್ಲೂಕು, ಹೊಸನಗರ ಭಾಗದಲ್ಲಿ ಉತ್ತಮ ಮಳೆಯಾಗಿದೆ.ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದೆ.

ರವಿಕಿರಣ್‌ ಭಟ್‌ ಮೃತದೇಹ ಪತ್ತೆ
ಮಡಿಕೇರಿ: ತಲಕಾವೇರಿಯಲ್ಲಿ ಬೆಟ್ಟ ಕುಸಿದ ಸ್ಥಳದಲ್ಲಿ ಶನಿವಾರ ಮತ್ತೊಂದು ಮೃತದೇಹ ಪತ್ತೆಯಾಗಿದೆ.

ಸಹಾಯಕ ಅರ್ಚಕ ರವಿಕಿರಣ್‌ ಭಟ್‌ (28) ಅವರ ಮೃತದೇಹ ಎಂದು ಗುರುತಿಸಲಾಗಿದೆ.

ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಅವರ ಮೃತದೇಹ ಪತ್ತೆಯಾದ ಸ್ಥಳದಿಂದ 1 ಕಿ.ಮೀ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರಂತ ನಡೆದು 10 ದಿನಗಳಾಗಿದ್ದು, ಇದುವರೆಗೆ ಮೂವರ ಮೃತದೇಹ ಸಿಕ್ಕಿದೆ. ಉಳಿದ ಇಬ್ಬರಿಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರಾಮಕೃಷ್ಣ ರಾವ್‌, ರೇಣುಕಾ ದಂಪತಿಯ ಪುತ್ರ ರವಿಕಿರಣ್‌. ಎರಡು ವರ್ಷಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.

ಪರಿಹಾರ ವಿತರಣೆ: ಭಾಗಮಂಡಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ನಾರಾಯಣ ಆಚಾರ್‌ ಪುತ್ರಿಯರಾದ ನಮಿತಾ, ಶಾರದಾ ಅವರಿಗೆ ಎಸ್‌ಡಿಆರ್‌ಎಫ್‌ನಿಂದ ತಲಾ ₹ 2.5 ಲಕ್ಷ ಮೊತ್ತದ ಚೆಕ್‌ ವಿತರಿಸಿದರು. ಆನಂದ ತೀರ್ಥ ಅವರ ಪರಿಹಾರವಾದ ₹ 5 ಲಕ್ಷದ ಚೆಕ್‌ ಅನ್ನು ಅವರ ಸಹೋದರಿ ಸುಶೀಲಾ ಅವರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT