ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವ ಶುಲ್ಕ ಪಾವತಿಸಿದರೂ ಮತದಾರರ ಪಟ್ಟಿಯಲ್ಲಿಲ್ಲ ಹೆಸರು!

ಶಿಕ್ಷಕರ ಸಂಘದ ಚುನಾವಣೆಗೆ ತಡೆ
Last Updated 28 ನವೆಂಬರ್ 2020, 11:09 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2020–25ನೇ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆಗೆ ನಿಗದಿಪಡಿಸಿದ್ದ ಚುನಾವಣೆಯನ್ನು ಜಿಲ್ಲಾ ನೋಂದಣಾಧಿಕಾರಿಯವರ ನಿರ್ದೇಶನದ ಅನ್ವಯ ರಾಜ್ಯ ಚುನಾವಣಾಧಿಕಾರಿ ತಡೆ ಹಿಡಿದಿದ್ದಾರೆ. ಮುಂದಿನ ಆದೇಶದವರೆಗೆ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿ ಅವರು ಆದೇಶ ಹೊರಡಿಸಿದ್ದಾರೆ.

ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿಗೆ ನ. 26ರಿಂದ ಡಿ. 6ರವರೆಗೆ ಹಾಗೂ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಡಿ.9ರಿಂದ 20ರವರೆಗೆ ಚುನಾವಣೆ ನಿಗದಿಯಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಸಿ.ಬಿ. ಜಯರಂಗ ಅವರನ್ನು ರಾಜ್ಯ ಚುನಾವಣಾಧಿಕಾರಿಯಾಗಿ ನೇಮಿಸಲಾಗಿತ್ತು.

ಚುನಾವಣೆ ತಡೆಗೆ ಕಾರಣವೇನು?: ‘ಕರಡು ಮತದಾರರ ಪಟ್ಟಿಯನ್ನು ಈವರೆಗೂ ಪ್ರಕಟಿಸದೆ ಚುನಾವಣಾ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರತಿವರ್ಷ ಸದಸ್ಯತ್ವ ಶುಲ್ಕ ಪಾವತಿಸಿದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೆ ಅರ್ಹ ಮತದಾರರಿಗೆ ಅನ್ಯಾಯ ಮಾಡಲಾಗಿದೆ. ವರ್ಗಾವಣೆ, ನಿವೃತ್ತ, ಮರಣ ಹೊಂದಿದ ಮತ್ತು ಮುಂಬಡ್ತಿ ಹೊಂದಿದ ಸದಸ್ಯರ ಹೆಸರು ಪಟ್ಟಿಯಲ್ಲಿದೆ ಎಂದು ದೂರಲಾಗಿದೆ.

‘ಅಲ್ಲದೆ, ರಾಜ್ಯ ಸರ್ಕಾರದ ಘೋಷಿಸಿದ ಹೊಸ ತಾಲ್ಲೂಕುಗಳಲ್ಲಿ ಕೆಲವು ಕಡೆ ಹೊಸ ತಾಲ್ಲೂಕುಗಳನ್ನು ಮಾತ್ರ ವಿಭಜಿಸಿದ್ದು, ಕೆಲವು ಕಡೆ ವಿಭಜಿಸಿಲ್ಲ. ಎಲ್ಲ ತಾಲ್ಲೂಕು, ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಇನ್ನೂ ಚುನಾವಣಾ ಪ್ರಕ್ರಿಯೆ ಆರಂಭಿಸಿಲ್ಲ. ನಿವೃತ್ತ ಹಾಗೂ ಖಾಸಗಿ ವ್ಯಕ್ತಿಗಳಿಂದ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ಸ್ಥಳ ಮತ್ತು ಚುನಾವಣಾ ಆಧಿಕಾರಿಗಳು ಯಾರೆಂದು ಗೊತ್ತಾಗದೆ ಗೊಂದಲ ಉಂಟಾಗಿದೆ. ಸಾಮಾನ್ಯ ಚುನಾವಣಾ ಪ್ರಕ್ರಿಯೆಯ ನಿಯಮಗಳನ್ನೂ ಅನುಸರಿಸಿಲ್ಲ. ಒಟ್ಟಿನಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿಲ್ಲ’ ಎಂಬ ಕಾರಣಕ್ಕೆ ಚುನಾವಣೆ ತಡೆಹಿಡಿಯಲಾಗಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT