ಗುರುವಾರ , ಡಿಸೆಂಬರ್ 3, 2020
18 °C

ನವೆಂಬರ್ 17ರಿಂದ ಕಾಲೇಜುಗಳು ಪುನರಾರಂಭ: ಸರ್ಕಾರದ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಸಂದರ್ಭದಲ್ಲಿ ಮುಚ್ಚಿದ್ದ ಪದವಿ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನು ನವೆಂಬರ್‌ 17ರಿಂದ ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕಾಲೇಜು ಆರಂಭವಾದ ಬಳಿಕ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ನಿಯಮ ಕಡ್ಡಾಯ ಇರುವುದಿಲ್ಲ. ಆನ್‌ಲೈನ್‌ ಮೂಲಕವೂ ತರಗತಿಗಳಿಗೆ ಹಾಜರಾಗಬಹುದು. ಆಫ್‌ಲೈನ್‌ ಅಥವಾ ಆನ್‌ಲೈನ್‌ ಎರಡರಲ್ಲಿ ಯಾವುದನ್ನು ಬೇಕಾದರೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ನಿರ್ಧಾರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಿಟ್ಟಿದ್ದು ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರದ ಅನ್‌ಲಾಕ್‌ ಮಾರ್ಗಸೂಚಿ ಮತ್ತು ಯುಜಿಸಿ ಸೂಚನೆಯ ಮೇರೆಗೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾಲೇಜುಗಳ ಆರಂಭಕ್ಕೆ ಮೊದಲು ಕಾಲೇಜುಗಳಲ್ಲಿ ಅನುಸರಿಸಬೇಕಾದ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು. ಯಾವುದೇ ವಿದ್ಯಾರ್ಥಿಗೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ತರಗತಿ ಎಷ್ಟು ಸಮಯ ನಡೆಸಬೇಕು, ಹಂತ ಹಂತವಾಗಿ ನಡೆಸಬೇಕೆ ಮೊದಲಾದ ವಿಚಾರಗಳ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು. ಮೊದಲ ಹಂತದಲ್ಲಿ ಪ್ರಾಕ್ಟಿಕಲ್ಸ್‌ ಆರಂಭಿಸಲಾಗುವುದು. ಕಾಲೇಜಿಗೆ ಹೋಗಲೇಬೇಕು ಎಂಬ ಒತ್ತಡವನ್ನು ಸರ್ಕಾರವೂ ಹಾಕುವುದಿಲ್ಲ. ಶಿಕ್ಷಣ ಸಂಸ್ಥೆಗಳೂ ಒತ್ತಡ ಹೇರುವಂತಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಸರ್ಕಾರವು ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಿದ್ದು, ಪೋಷಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಕಾಲೇಜುಗಳು ಕೋವಿಡ್‌ ಮಾರ್ಗಸೂಚಿ ಅಳವಡಿಸಿಕೊಳ್ಳಲು ಕಾಲೇಜು ಮಟ್ಟದಲ್ಲಿ ಕಾರ್ಯಪಡೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುವುದು. ಜಿಲ್ಲಾಧಿಕಾರಿಗಳು ಇದರ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸ್ಟಲ್‌ಗಳಲ್ಲೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಯಾವುದೇ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಕಲಿಕಾ ನಿರ್ವಹಣೆ ಪೋರ್ಟಲ್‌: ನ.17 ರಂದು ಕಲಿಕಾ ನಿರ್ವಹಣೆ ಆನ್‌ಲೈನ್‌ ಪೋರ್ಟಲ್‌ಗೆ ಚಾಲನೆ ನೀಡಲಾಗುವುದು. ಇಂತಹದ್ದೊಂದು ವ್ಯವಸ್ಥೆ ದೇಶದಲ್ಲೇ ಪ್ರಥಮ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದಕ್ಕೆ ಚಾಲನೆ ನೀಡುವರು ಎಂದು ಅಶ್ವತ್ಥನಾರಾಯಣ ಹೇಳಿದರು.

ಸುಮಾರು 5 ಲಕ್ಷ ವಿದ್ಯಾರ್ಥಿಗಳು ಈ ಪೋರ್ಟಲ್‌ನ ಪ್ರಯೋಜನ ಪಡೆಯಲಿದ್ದಾರೆ. ಶಿಕ್ಷಕರ ಬೋಧನಾ ಮಟ್ಟ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟ ಇದರಿಂದ ಹೆಚ್ಚಲಿದೆ ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು