ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಪ್ರಕರಣ: ಮತ್ತೆ ಆರು ಕಡೆ ಎಸಿಬಿ ದಾಳಿ, ಶೋಧ

Last Updated 24 ನವೆಂಬರ್ 2020, 19:40 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಕೆಎಎಸ್‌ ಅಧಿಕಾರಿ ಡಾ.ಬಿ. ಸುಧಾ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು, ಮಂಗಳವಾರ ಆರು ಮಧ್ಯವರ್ತಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ತನಿಖಾ ತಂಡ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದ ಮೂವರ ಮನೆಗಳು ಹಾಗೂ ಮಲ್ಲತ್ತಹಳ್ಳಿಯ ಎನ್‌ಜಿಇಎಫ್‌ ಬಡಾವಣೆ, ಸೂಲಿಕೆರೆ ಸಮೀಪದ ರಾಮಸಂದ್ರ ಹಾಗೂ ಕೆ.ಕೆ. ಬಡಾವಣೆಯಲ್ಲಿ ತಲಾ ಒಬ್ಬರ ಮನೆಗಳಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಸುಧಾ ಅವರು ದೀರ್ಘ ಕಾಲ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು. ಆಗ ಈ ಆರು ಮಂದಿ ಮಧ್ಯವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು. ಸುಧಾ ಮತ್ತು ಈ ಮಧ್ಯವರ್ತಿಗಳ ನಡುವೆ ವ್ಯಾವಹಾರಿಕ ನಂಟು ಇರುವುದಕ್ಕೆ ಪೂರಕವಾದ ದಾಖಲೆಗಳು ಪತ್ತೆಯಾಗಿದ್ದವು. ಈ ಆಧಾರದಲ್ಲಿ ಮಧ್ಯವರ್ತಿಗಳ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ದಾಖಲೆಗಳು ವಶಕ್ಕೆ: ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದಲ್ಲಿ ಆರು ಸ್ಥಳಗಳಲ್ಲಿ ಶೋಧ ನಡೆದಿದೆ. ಎಲ್ಲರ ಮನೆಗಳಲ್ಲೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿಗೊಳಗಾದ ವ್ಯಕ್ತಿಗಳು ಸರ್ಕಾರ ಅಧಿಕಾರಿಗಳ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳು ಲಭಿಸಿವೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಜೂನ್‌ 18ರಂದು ಖಾಸಗಿ ದೂರು ಸಲ್ಲಿಸಿದ್ದರು. ಆರೋಪಗಳ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಎಸಿಬಿಗೆ ಆದೇಶಿಸಿತ್ತು. ಆಗಸ್ಟ್‌ 27 ರಂದು ಎಫ್‌ಐಆರ್‌ ದಾಖಲಿಸಿದ್ದ ಎಸಿಬಿ ಅಧಿಕಾರಿಗಳು, ನವೆಂಬರ್‌ 7ರಂದು ಸುಧಾ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಸುಧಾ ಮತ್ತು ಅವರ ಪ್ರಮುಖ ಬೇನಾಮಿ ಎಂದು ಶಂಕಿಸಲಾಗಿರುವ ರೇಣುಕಾ ಚಂದ್ರಶೇಖರ್‌ ಅವರ ಮನೆಗಳಲ್ಲಿ ದೊರೆತ ದಾಖಲೆಗಳ ಪರಿಶೀಲನೆ ವೇಳೆ ಮಧ್ಯವರ್ತಿಗಳ ಮಾಹಿತಿ ಲಭಿಸಿದೆ. ಆ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT