ಸೋಮವಾರ, ಮೇ 10, 2021
26 °C
ಸಂಘಟನೆಗಳ ಮಧ್ಯೆ ಆರೋಪ–ಪ್ರತ್ಯಾರೋಪ ತಾರಕ

ಹೆಚ್ಚುತ್ತಿರುವ ಬಸ್‌ಗಳ ಸಂಚಾರ; ಒಂದೇ ದಿನ 2,443 ಬಿಎಂಟಿಸಿ ಸಿಬ್ಬಂದಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಆರಂಭವಾಗಿ 11 ದಿನ ಕಳೆದಿದ್ದು, ರಸ್ತೆಗಿಳಿಯುವ ಬಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದ್ದು ಮುಷ್ಕರ ತೀವ್ರತೆ ಕಳೆದುಕೊಳ್ಳುತ್ತಿದೆ. ಇನ್ನೊಂದೆಡೆ ಬಿಎಂಟಿಸಿ ನೌಕರರನ್ನೇ ಸರ್ಕಾರ ಗುರಿಯಾಗಿಸಿಕೊಂಡಿದ್ದು, ಶನಿವಾರ ಒಂದೇ ದಿನ 2,443 ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದೆ.

ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಕೂಟದಲ್ಲಿ ಬಿಎಂಟಿಸಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈವರೆಗೆ 820 ಜನರನ್ನು ಬಿಎಂಟಿಸಿ ವಜಾಗೊಳಿಸಿದೆ. ಇದರಲ್ಲಿ ತರಬೇತಿ, ಪ್ರೊಬೇಷನರಿ ಅವಧಿಯ 580 ಸಿಬ್ಬಂದಿಯೂ ಇದ್ದಾರೆ. ಶನಿವಾರಕ್ಕೆ ಅಮಾನತುಗೊಂಡ ನೌಕರರ ಸಂಖ್ಯೆ 3,170ಕ್ಕೆ ಏರಿಕೆಯಾಗಿದೆ. ಎಲ್ಲಾ ನೌಕರರ ವಿರುದ್ಧ ದೋಷಾರೋಪ ಕೂಡ ಸಿದ್ಧವಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೆಲ್ಲದರ ನಡುವೆ, ಮುಷ್ಕರದ ವೈಫಲ್ಯ ಆಗುತ್ತಿರುವುದಕ್ಕೆ ಯಾರು ಹೊಣೆ ಎಂಬುದರ ಕುರಿತು ಸಂಘಟನೆಗಳ ನಡುವೆಯೇ ಆರೋಪ–ಪ್ರತ್ಯಾರೋಪಗಳು ಶನಿವಾರ ತಾರಕಕ್ಕೆ ಏರಿದೆ.

ಶನಿವಾರ ಸಂಜೆ ವೇಳೆಗೆ ನಾಲ್ಕು ನಿಗಮಗಳ 6,836 ಬಸ್‌ಗಳು ರಸ್ತೆಗೆ ಇಳಿದಿವೆ ಎಂಬ ಮಾಹಿತಿಯನ್ನು ಕೆಎಸ್‌ಆರ್‌ಟಿಸಿ ನೀಡಿದೆ. ಈ ನಡುವೆ ನೌಕರರನ್ನು ಮಾತುಕತೆಗೆ ಕರೆಯುವ ಯಾವುದೇ ಲಕ್ಷಣಗಳು ಸರ್ಕಾರದ ಕಡೆಯಿಂದ ಕಾಣಿಸುತ್ತಿಲ್ಲ. ಬದಲಾಗಿ ದಿನೇ ದಿನ ನೌಕರರ ವಜಾ ಮತ್ತು ಅಮಾನತು ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ಹೆದರಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ವಿಡಿಯೊ ಒಂದನ್ನು ಹರಿಬಿಟ್ಟಿದ್ದಾರೆ. ನೌಕರರ ಮುಷ್ಕರ ದಾರಿ ತಪ್ಪಲು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಮತ್ತು ಸಾರಿಗೆ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್. ಶರ್ಮ  ಕಾರಣ ಎಂದು ಹರಿಹಾಯ್ದಿದ್ದಾರೆ.

‘ಮುಷ್ಕರಸೋಲಿಸಬೇಕು ಎಂದು ಈ ಇಬ್ಬರು ಮಹಾನಾಯಕರೇ ಪಿತೂರಿ ಮಾಡಿದ್ದಾರೆ. ನಾಯಕತ್ವ ಬದಲಾಗಿರುವುದನ್ನು ಸಹಿಸಿಕೊಳ್ಳಲು ಆಗದೆ ಬಸ್‌ಗಳ ಕಾರ್ಯಾಚರಣೆಗೆ ಕುಮ್ಮಕ್ಕು ನೀಡಿದ್ದಾರೆ. ನೌಕರರಿಗೆ ಅನ್ಯಾಯವಾದರೆ ಅದಕ್ಕೆ ಈ ಇಬ್ಬರೇ ಹೊಣೆ. ನೌಕರರಿಗೆ ನ್ಯಾಯ ಕೊಡಿಸಲು ಯಾವ ಹಂತಕ್ಕಾದರೂ ಹೋಗಲು ನಾವು ಸಿದ್ಧರಿದ್ದೇವೆ’ ಎಂದಿದ್ದಾರೆ.

ಇದರಿಂದ ಕುಪಿತಗೊಂಡಿರುವ ಫೆಡರೇಷನ್ ಮತ್ತು ಮಹಾಮಂಡಳದ ಪದಾಧಿಕಾರಿಗಳು, ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಆಡಿಯೊ ಕೂಡ ಹರಿದಾಡುತ್ತಿದೆ. ‘ದಿನಗೂಲಿ ನೌಕರರು, ಸಾರಿಗೆ ನೌಕರರ ಪರವಾಗಿ 50 ವರ್ಷಗಳ ಸುಧೀರ್ಘ ಹೋರಾಟ ನಡೆಸಿರುವ ಕೆ.ಎಸ್.ಶರ್ಮ ವಿರುದ್ಧ ಮಾತನಾಡಿರುವುದು ಅಕ್ಷಮ್ಯ. ನೌಕರರನ್ನು ದಿಕ್ಕುತಪ್ಪಿಸಿ ಬೀದಿಗೆ ತಳ್ಳುವ ಪ್ರಯತ್ನವನ್ನು ನೀವು ಮಾಡಿದ್ದೀರಿ. ಇನ್ನು ಮುಂದೆ ಬಹಿರಂಗವಾಗಿಯೇ ಮುಷ್ಕರದ ವಿರುದ್ಧ ಮಾತನಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಾರಿಗೆ ಸಂಸ್ಥೆಗಳ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ ಎಲ್ಲರ ಸಹಿ ಪಡೆದು ಮುಷ್ಕರಕ್ಕೆ ನೋಟಿಸ್ ನೀಡಿದ್ದರೆ ಚಂದ್ರಶೇಖರ್ ಅವರ ಮಾತಿಗೆ ಬೆಲೆ ಇರುತ್ತಿತ್ತು. ಎಲ್ಲಾ ಸಂಘಟನೆಗಳನ್ನು ತಿರಸ್ಕಾರ ಮಾಡಿ ಈಗ ಬೇರೆಯವರನ್ನು ದೂರುವುದು ಸರಿಯಲ್ಲ. ಸಾರಿಗೆ ನಿಗಮಗಳು ಮತ್ತು ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಆಗಬಹುದಾದ ಎಲ್ಲಾ ಪರಿಣಾಮಗಳ ಹೊಣೆಯನ್ನು ಅವರೇ ಹೊರಬೇಕು’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.

ಸೋಮವಾರದ ಗಡುವು

‘ಸಾರಿಗೆ ನೌಕರರ ಬಗ್ಗೆ ಸರ್ಕಾರ ತಿರಸ್ಕಾರ ಭಾವನೆ ತೋರಿಸುತ್ತಿದ್ದು, ನೌಕರರ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಸೋಮವಾರದ ತನಕ ಗಡುವು ನೀಡಲಾಗಿದೆ’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

‘ಸರ್ಕಾರ ಇದೇ ರೀತಿ ತಾತ್ಸಾರ ಮುಂದುವರಿಸಿದರೆ ಸೋಮವಾರದ ನಂತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. 1 ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಜೈಲ್‌ ಭರೋ ಚಳವಳಿ ಆರಂಭಿಸಲಾಗುವುದು’ ಎಂದು ಎಚ್ಚರಿಸಿದರು.

ನೌಕರರ ಕೂಟವೇ ಹೊಣೆ: ಅನಂತಸುಬ್ಬರಾವ್

‘ನೌಕರರ ಕೂಟದ ನೇತೃತ್ವದಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಮುಷ್ಕರದಿಂದ ಆಗುತ್ತಿರುವ ಪರಿಣಾಮಗಳಿಗೆ ನಾವು ಹೇಗೆ ಹೊಣೆಯಾಗುತ್ತೇವೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಪ್ರಶ್ನಿಸಿದರು.

‘ಕೂಟದ ಅಧ್ಯಕ್ಷ ಚಂದ್ರಶೇಖರ್ ಮತ್ತು ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನಂಬಿ ಅಮಾಯಕ ನೌಕರರು ಬಲಿಪಶು ಆಗುತ್ತಿದ್ದಾರೆ’ ಎಂದರು.

‘ಮುಂದಿನ ಎಲ್ಲಾ ಆಗುಹೋಗುಗಳಿಗೆ ಅವರೇ ಹೊಣೆಯೇ ಹೊರತು, ನಾನಾಗಲೀ, ಶರ್ಮ ಅವರಾಗಲಿ ಅಲ್ಲ. ಸರ್ಕಾರ ಮಾತುಕತೆ ನಡೆಸಲಿದೆ ಎಂಬ ಭ್ರಮೆಯನ್ನು ನೌಕರರು ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಕಾನೂನು ಬಾಹಿರ ಮುಷ್ಕರ ಎಂದು ಘೋಷಿಸಿದ ಮುಷ್ಕರದಲ್ಲಿ ಭಾಗವಹಿಸಿ ಒಮ್ಮೆ ವಜಾಗೊಂಡರೆ ಅಥವಾ ಅಮಾನತುಗೊಂಡರೆ ವಾಪಸ್ ಬರುವ ಮಾರ್ಗ ಸುಲಭ ಇಲ್ಲ. ಈಗ ವಜಾಗೊಂಡಿರುವ ನೌಕರರಿಗೆ ಗ್ರಾಚುಯಿಟಿ ಹಣವೂ ಸಿಗುವುದಿಲ್ಲ’ ಎಂದು ಹೇಳಿದರು.

ಶನಿವಾರ ರಸ್ತೆಗಿಳಿದ ಬಸ್‌ಗಳು

ಕೆಎಸ್‌ಆರ್‌ಟಿಸಿ; 3,206

ಬಿಎಂಟಿಸಿ; 1,152

ಎನ್‌ಇಕೆಆರ್‌ಟಿಸಿ; 1,308

ಎನ್‌ಡಬ್ಲ್ಯುಕೆಆರ್‌ಟಿಸಿ; 1,170

ಒಟ್ಟು; 6,836

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು