ಭಾನುವಾರ, ಜುಲೈ 3, 2022
27 °C
ಸಿಬ್ಬಂದಿಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ ಕಾರಣಕ್ಕೆ ಕ್ರಮ

ಕೆಪಿಎಸ್‌ಸಿ: ಇನ್ನು ಶೇ50 ನಿಯೋಜನೆ ಸಿಬ್ಬಂದಿ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ತನ್ನ ಸಿಬ್ಬಂದಿಯಿಂದಲೇ ಸೋರಿಕೆಯಾಗಿದ್ದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಇನ್ನು ಮುಂದೆ ಶೇ 50ರಷ್ಟು ಸಿಬ್ಬಂದಿಯನ್ನು ನಿಯೋಜನೆ ಮೇಲೆ ನೇಮಿಸಿಕೊಳ್ಳಲು ಮುಂದಾಗಿದೆ.

ಆ ಮೂಲಕ, ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಮುಕ್ತ, ನಿಷ್ಪಕ್ಷಪಾತ ಮತ್ತು ಅರ್ಹತೆ ಆಧಾರಿತ ಆಯ್ಕೆಗೆ ಕೆಪಿಎಸ್‌ಸಿಯಲ್ಲಿನ ವ್ಯವಸ್ಥೆಯನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ರಚಿಸಿದ್ದ ಪಿ.ಸಿ. ಹೋಟಾ ಸಮಿತಿ ನೀಡಿದ್ದ ಪ್ರಮುಖ ಶಿಫಾರಸ್ಸೊಂದನ್ನು ಏಳು ವರ್ಷಗಳ ಬಳಿಕ ಜಾರಿಗೆ ತರಲು ಪ್ರಕ್ರಿಯೆ  ತ್ವರಿತಗೊಳಿಸಿದೆ.

ಇದಕ್ಕಾಗಿ, ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್‌) ನಿಯಮವನ್ನು ಸಮಗ್ರವಾಗಿ ಬದಲಿಸಲು ಕೆಪಿಎಸ್‌ಸಿ ಪ್ರಸ್ತಾವ ಸಲ್ಲಿಸಿದೆ. ಸಿಬ್ಬಂದಿಯನ್ನು ಇತರ ಇಲಾಖೆಗಳಿಂದ ಸೀಮಿತ ಅವಧಿಗೆ ನಿಯೋಜನೆ ಮೇಲೆ ನೇಮಿಸಿಕೊಳ್ಳುವ ಜೊತೆಗೆ ಅಂಥ ಸಿಬ್ಬಂದಿ, ಕೆಪಿಎಸ್‌ಸಿಯಲ್ಲಿ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಅವರು ಮತ್ತು ಅವರ ಸಂಬಂಧಿಕರು ನೇಮಕಾತಿ ಪರೀಕ್ಷೆಗಳಿಗೆ ಬರೆಯದಂತೆ ನಿರ್ಬಂಧ ಹೇರಲು ಕೂಡಾ ನಿರ್ಧರಿಸಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಗೌಪ್ಯತೆ ಕಾಪಾಡಲು ಮತ್ತು ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ಈ ಕ್ರಮ ಅಗತ್ಯವಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸದ್ಯ, ಕೆಪಿಎಸ್‌ಸಿಯಲ್ಲಿ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕ ಹುದ್ದೆಗೆ ಮೂರು ವರ್ಷ ಅವಧಿಗೆ ನಿಯೋಜನೆ ಮೇಲೆ ರಾಜ್ಯ ಸರ್ಕಾರ ನೇಮಿಸುತ್ತದೆ. ಬಳಿಕ ಬೇರೆಯವರ ನಿಯೋಜನೆ ನಡೆಯುತ್ತದೆ. ಉಳಿದಂತೆ, ಎಸ್‌ಡಿಎ, ಎಫ್‌ಡಿಎ, ಟೈಪಿಸ್ಟ್‌ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಕೆಪಿಎಸ್‌ಸಿಯೇ ನೇಮಕಾತಿ ಮಾಡಿಕೊಳ್ಳುತ್ತಿದೆ. ಹೀಗೆ ನೇಮಕಗೊಂಡ ನೌಕರರು ಬಡ್ತಿ ಪಡೆದು ರಹಸ್ಯ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳುತ್ತಿದ್ದಾರೆ.

‘ಸುಮಾರು 350 ಸಿಬ್ಬಂದಿಯಲ್ಲಿ ಸದ್ಯ 131 ಮಾತ್ರ ಇದ್ದು, ನಿಯೋಜನೆ ಮೇಲೆ ನೇಮಿಸಿಕೊಳ್ಳಲು ಅವಕಾಶ ಇಲ್ಲದೇ ಇರುವುದರಿಂದ ಅವರೇ ಎಲ್ಲ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ’ ಎಂದೂ ಅಧಿಕಾರಿ ಹೇಳಿದರು.

ಹೋಟಾ ಸಮಿತಿ 2013ರಲ್ಲೇ ಹೇಳಿತ್ತು!
ಕೆಪಿಎಸ್‌ಸಿಯಲ್ಲಿರುವ ಆಯೋಗದ ನೌಕರರ ಪೈಕಿ, ಕನಿಷ್ಠ ಶೇ 50ರಷ್ಟು ಮಂದಿಯನ್ನು ನಿಯೋಜನೆಯಲ್ಲಿ ಕಳುಹಿಸಿ, ರಾಜ್ಯ ಸರ್ಕಾರದ ಇತರ ಸಂಸ್ಥೆಗಳಲ್ಲಿರುವ ಸಿಬ್ಬಂದಿಯಿಂದ ಬದಲಾಯಿಸಬೇಕು ಎಂದು 2013ರಲ್ಲಿ ಹೋಟಾ ಸಮಿತಿ ಶಿಫಾರಸು ಮಾಡಿತ್ತು. ರಹಸ್ಯ ಮಾಹಿತಿಯನ್ನು ನಿರ್ವಹಿಸುವ ಗಣಕ ಶಾಖೆಯಲ್ಲಿ ಈ ಬದಲಾವಣೆಯನ್ನು ತ್ವರಿತವಾಗಿ ಜಾರಿಗೆ ತರಬೇಕು ಎಂದೂ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು