ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಿವಾರ ಧರಿಸದವರೆಲ್ಲಾ ಶೂದ್ರರು: ಕೆ.ಎಸ್‌.ಭಗವಾನ್

Last Updated 11 ಏಪ್ರಿಲ್ 2021, 14:18 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಿವಾರ ಧರಿಸದವರೆಲ್ಲರೂ ಶೂದ್ರರು. ಶೂದ್ರ ಎಂದರೆ ಗುಲಾಮ, ಅಪ್ಪನಿಗೆ ಹುಟ್ಟಿದವನಲ್ಲ ಎಂದರ್ಥ. ಮನುಸ್ಮೃತಿಯಲ್ಲೂ ‘ದಾಸಿ ಪುತ್ರರು’ ಎಂಬ ಉಲ್ಲೇಖವಿದೆ’ ಎಂದು ಹಿರಿಯ ವಿಚಾರವಾದಿ ಕೆ.ಎಸ್‌.ಭಗವಾನ್‌ ಹೇಳಿದರು.

ದಲಿತ ಸಂಘರ್ಷ ಸಮಿತಿಯ (ಸಮತಾವಾದ) ರಾಜ್ಯ ಘಟಕ ಜ್ಯೋತಿಬಾ ಪೂಲೆ ಅವರ 194ನೇ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ಜ್ಞಾನ ಪ್ರಸಾರ ಐಕ್ಯತಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ಲಕ್ಷ ಜನರ ಪೈಕಿ ಒಬ್ಬರಿಗೂ ಹಿಂದೂ ಧರ್ಮದ ಬಗ್ಗೆ ಅರಿವಿಲ್ಲ. ಶೇ 4ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣರು ಈ ದೇಶ ಆಳುತ್ತಿರುವುದು ದುರ್ದೈವ.‌ ಪೂಲೆ ಬ್ರಾಹ್ಮಣ ವಿರೋಧಿಯಲ್ಲ. ಮೇಲು ಕೀಳಿನ ವಿರೋಧಿ. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಅವರ ಬಗ್ಗೆ ಗೌರವವಿದೆ. ಆದರೆ ಅವರು ಒಪ್ಪಿಕೊಂಡ ಸಿದ್ಧಾಂತಗಳು ಅಪಾಯಕಾರಿಯಾಗಿದ್ದವು. ಹಿಂದೂ ಧರ್ಮದ ಪ್ರಕಾರ ಎಲ್ಲಾ ಶೂದ್ರರೂ ಗುಲಾಮರು. ಹೀಗಾಗಿಯೇ ಅಂಬೇಡ್ಕರ್‌ ಮತ್ತು ಪೆರಿಯಾರ್‌ ಮನುಸ್ಮೃತಿ ಸುಟ್ಟುಹಾಕಿದ್ದರು. ನೀವು ನಿಮ್ಮ ಮನಸ್ಸಿನಲ್ಲೇ ಅದನ್ನು ಸುಟ್ಟುಹಾಕಬೇಕು. ನಮ್ಮ ದೇಶದಲ್ಲಿ ಎರಡು ಬಗೆಯ ಗುಲಾಮಗಿರಿ ಇದೆ. ಈ ಪೈಕಿ ಆಂತರಿಕ ಗುಲಾಮಗಿರಿ ಅತ್ಯಂತ ಅಪಾಯಕಾರಿ’ ಎಂದು ಹೇಳಿದರು.

‘ವಿವೇಕಾನಂದರು ಹಿಂದೂ ಧರ್ಮವನ್ನು ಎತ್ತಿಹಿಡಿದಿದ್ದಾಗಿ ಅನೇಕರು ಹೇಳುತ್ತಾರೆ. ಅವರಷ್ಟು ಕಟುವಾಗಿ ಹಿಂದೂ ಧರ್ಮ ಟೀಕಿಸಿದವರು ಮತ್ತೊಬ್ಬರಿಲ್ಲ. ಶೂದ್ರನಾದ ಶಂಭೂಕ ತಪಸ್ಸು ಮಾಡಿದ ಎಂಬ ಕಾರಣಕ್ಕೆ ರಾಮನು ಆತನ ತಲೆ ಕತ್ತರಿಸುತ್ತಾನೆ ಎಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ರಾಮನನ್ನು ದೇವರೆಂದು ಪೂಜಿಸಬೇಕೆ. ರಾಮ, ಕೃಷ್ಣರೆಲ್ಲಾ ಚಾತುರ್ವರ್ಣದ ಪ್ರತಿಪಾದಕರು. ಇಂತಹ ದೇವರನ್ನೆಲ್ಲಾ ತಿರಸ್ಕರಿಸಬೇಕು’ ಎಂದು ತಿಳಿಸಿದರು.

‘ಕೊರೊನಾ ಸಂದರ್ಭದಲ್ಲಿ ಮಂದಿರ, ಮಸೀದಿ ಹಾಗೂ ಚರ್ಚ್‌ಗಳನ್ನೆಲ್ಲಾ ಮುಚ್ಚಿದರು. ಒಂದೊಮ್ಮೆ ದೇವರು ಇದ್ದಿದ್ದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮನ್ನೇಕೆ ಕಾಪಾಡಲಿಲ್ಲ. ಆಳುವವರು ನಮ್ಮಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ. ದೇವಸ್ಥಾನಗಳನ್ನು ಕಟ್ಟಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಓದುವ ಹವ್ಯಾಸ ಮೈಗೂಡಿಸಿಕೊಂಡಾಗ ಮಾತ್ರ ಇಂತಹ ಹುನ್ನಾರಗಳನ್ನು ಅರಿಯಲು, ಪ್ರತಿರೋಧಿಸಲು ಸಾಧ್ಯ’ ಎಂದರು.

ಪೆರಿಯಾರ್‌ ವಿಚಾರವಾದಿ ಕಲೈಸೆಲ್ವಿ ‘ಪೂಲೆ ಹಾಗೂ ಪೆರಿಯಾರ್‌ ಅವರ ಚಳವಳಿಯಿಂದ ಹೆಚ್ಚು ಅನುಕೂಲವಾಗಿದ್ದು ಬ್ರಾಹ್ಮಣ ಹೆಣ್ಣು ಮಕ್ಕಳಿಗೆ. ಅವರು ಈ ಮಹಾನ್‌ ಚೇತನರನ್ನು ಸ್ಮರಿಸದಿರುವುದು ವಿಪರ್ಯಾಸ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ಮಾರಪ್ಪ, ಗೌರವಾಧ್ಯಕ್ಷ ಕೆ.ತಮ್ಮಯ್ಯ ಇದ್ದರು.

ಪೂಲೆ ದಂಪತಿಗೆ ‘ಭಾರತ ರತ್ನ’ ನೀಡಲಿ

‘ಜ್ಯೋತಿಬಾ ಪೂಲೆ ಭಾರತದ ಪುನರುಜ್ಜೀವನದ ಪಿತಾಮಹ. ಅವರ ಪತ್ನಿ ಸಾವಿತ್ರಿಬಾಯಿ ಪೂಲೆ ದೇಶದ ಮೊದಲ ಶಿಕ್ಷಕಿ. ಜಾತಿ ವ್ಯವಸ್ಥೆಯ ವಿರುದ್ಧ ಮೊದಲು ದನಿ ಎತ್ತಿದವರು ಮಹಾತ್ಮ ಪೂಲೆ. ಹೀಗಾಗಿ ಈ ದಂಪತಿಗೆ ಕೇಂದ್ರ ಸರ್ಕಾರವು ‘ಭಾರತ ರತ್ನ’ ನೀಡಿ ಗೌರವಿಸಬೇಕು. ಈ ವಿಚಾರವಾಗಿ ನಾವೆಲ್ಲಾ ಒಟ್ಟಾಗಿ ಹೋರಾಡಬೇಕು’ ಎಂದು ಭಗವಾನ್‌ ಹೇಳಿದರು.

‘ಸಾವಿತ್ರಿಬಾಯಿ ಶಾಲೆಗೆ ಹೋಗುವಾಗ ಬ್ರಾಹ್ಮಣರು ಅವರ ಮೇಲೆ ಕಲ್ಲೆಸೆಯುತ್ತಿದ್ದರು. ಸಗಣಿಯಿಂದ ಹೊಡೆಯುತ್ತಿದ್ದರು. ಬ್ರಿಟಿಷರು ಪೂಲೆ ಅವರಿಗೆ ರಕ್ಷಣೆ ನೀಡಿದರು. ಒಂದೊಮ್ಮೆ ಬ್ರಿಟಿಷರು ಇರದಿದ್ದರೆ ಈ ದಂಪತಿ ಸಮಾಜದಲ್ಲಿ ಬದುಕುವುದೇ ಕಷ್ಟವಿತ್ತು. ಡಾ.ಬಿ.ಆರ್‌.ಅಂಬೇಡ್ಕರ್‌, ಪೂಲೆ ಅವರಿಂದ ಪ‍್ರಭಾವಿತರಾಗಿದ್ದರು. ಪೂಲೆ ಅವರನ್ನು ಗುರುವೆಂದೇ ಸ್ವೀಕರಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT