ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ: ಬೆಳಕಿನ ಹಬ್ಬದ ಪ್ರಯಾಣ ದುಬಾರಿ

ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆ
Last Updated 9 ನವೆಂಬರ್ 2020, 22:32 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆಗಾಗಿ ನಗರದಲ್ಲಿ ನೆಲೆಸಿರುವ ಅನೇಕ ಮಂದಿ ತಮ್ಮೂರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಲಾಗಿದ್ದು, ಹಬ್ಬದ ಪ್ರಯಾಣವೂ ದುಬಾರಿ ಆಗಲಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಘೋಷಿಸಿದ್ದ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದ್ದು, ಖಾಸಗಿ ಬಸ್‌ಗಳ ಬಳಕೆ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹಬ್ಬದ ಮುನ್ನಾದಿನ ಬಸ್ಸಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಈಗಾಗಲೇ ಸೀಟು ಕಾಯ್ದಿರಿಸಿದ್ದಾರೆ.

ನಗರದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ನಿತ್ಯವೂ ಖಾಸಗಿ ಬಸ್‌ಗಳು ಸಂಚರಿಸಲಿವೆ. ನವೆಂಬರ್ 13ರಿಂದ 15ರವರೆಗೆ ಸಂಚರಿಸುವ ಬಸ್‌ಗಳ ಪ್ರಯಾಣ ದರವನ್ನೂ ಮಾತ್ರ ದುಪ್ಪಟ್ಟು ಮಾಡಲಾಗಿದೆ.

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬಸ್‌ ಓಡಿಸಲಾಗುತ್ತಿದೆ. ಹೀಗಾಗಿ, ಸದ್ಯ ಬಸ್‌ಗಳ ಸಂಖ್ಯೆಯೂ ಕಡಿಮೆ ಇದೆ.

‘ಲಾಕ್‌ಡೌನ್‌ ತೆರವುಗೊಂಡ ಬಳಿಕ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ಈಗ ಹಬ್ಬಕ್ಕೆ ಕುಟುಂಬ ಸಮೇತ ಊರಿಗೆ ಹೋಗಬೇಕು. ಪ್ರಯಾಣ ದರ ದುಬಾರಿಯಾದರೂ ಖಾಸಗಿ ಬಸ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದೇವೆ’ ಎಂದು ಪೀಣ್ಯದ ಆಹಾರ ತಯಾರಿಕಾ ಕಂಪನಿಯೊಂದರ ಉದ್ಯೋಗಿ ರಘುನಾಥ್‌ ಹೇಳಿದರು.

ರಾಜಾಜಿನಗರದ ಲೋಕೇಶ್, ‘ಹವಾನಿಯಂತ್ರಿತ ಸ್ಲೀಪರ್‌, ನಾನ್‌ ಎ.ಸಿ ಸ್ಲೀಪರ್‌, ಎ.ಸಿ ಸೀಟರ್‌ ಹಾಗೂ ನಾನ್‌ ಎ.ಸಿ ಸೀಟರ್‌ ಬಸ್‌ಗಳ ಪ್ರಯಾಣ ದರವನ್ನು ಕಂಪನಿಗಳು ದುಪ್ಪಟ್ಟು ಮಾಡಿವೆ. ಪ್ರತಿ ವರ್ಷವೂ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಕಂಪನಿಗಳ ಬೆಲೆಗಳಿಗೆ ಕಡಿವಾಣ ಹಾಕಲು ಸರ್ಕಾರವೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯೊಂದರ ಮಾಲೀಕ, ‘ಲಾಕ್‌ಡೌನ್‌ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಸಾಮಾನ್ಯ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ. ಈಗ ಹಬ್ಬದ ದಿನದಂದು ಬಸ್‌ಗಳಿಗೆ ಬೇಡಿಕೆ ಬಂದಿದೆ. ಇದೇ ಕಾರಣಕ್ಕೆ ದರ ಏರಿಕೆ ಮಾಡಲಾಗಿದ್ದು, ಬಹುತೇಕ ಸೀಟುಗಳು ಈಗಾಗಲೇ ಬುಕ್ಕಿಂಗ್ ಆಗಿವೆ’ ಎಂದರು.

ಕೆಎಸ್‌ಆರ್‌ಟಿಸಿ ನಿಗಮದ ಬಸ್‌ಗಳ ಪ್ರಯಾಣ ದರವನ್ನು ಹಬ್ಬದ ಮುನ್ನಾದಿನ ಹಾಗೂ ಹಬ್ಬದ ದಿನದಂದು ಶೇ 5ರಿಂದ 15ರಷ್ಟು ಹೆಚ್ಚಳ ಮಾಡಲಾಗಿದೆ. ನಿಗಮದ ಜಾಲತಾಣದಲ್ಲಿ ಸೀಟುಗಳ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಖಾಸಗಿ ಬಸ್‌ ಕಂಪನಿಗಳಿಗೆ ಹೋಲಿಸಿದರೆ, ಸಾರಿಗೆ ನಿಗಮದ ಪ್ರಯಾಣದ ದರ ಕಡಿಮೆ ಇದೆ.

ಬೆಂಗಳೂರಿನಿಂದ ಬೇರೆ ನಗರಗಳಿಗೆ ಖಾಸಗಿ ಬಸ್ ಪ್ರಯಾಣ ದರ (ಕನಿಷ್ಠ/ಗರಿಷ್ಠ ₹ಗಳಲ್ಲಿ)

ಎಲ್ಲಿಗೆ;ನ.9;ನ.13; ನ.14; ನ.15

ಹುಬ್ಬಳ್ಳಿಗೆ;370/5000; 749/6000; 600/5000; 449/6000

ಬೆಳಗಾವಿಗೆ; 450/5000; 1188/6000; 600/5000; 500/6000

ಮಂಗಳೂರಿಗೆ; 400/1800; 750/2010; 599/1900; 400;1800

ಕಲಬುರ್ಗಿಗೆ; 560/2550; 999/2749; 960/2949; 560; 2949

ಮುಂಬೈಗೆ; 1000/5000; 1300/6000; 1105/5000; 1100/6000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT