ಶುಕ್ರವಾರ, ಆಗಸ್ಟ್ 12, 2022
21 °C

ಸಾರಿಗೆ ನೌಕರರ ಹಲವು ಬೇಡಿಕೆಗಳಿಗೆ ಒಪ್ಪಿಗೆ; ಮುಷ್ಕರ ಕೈಬಿಡುವ ಘೋಷಣೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ–ಸಾಂದರ್ಭಿಕ ಚಿತ್ರ

ಬೆಂಗಳೂರು: ವೇತನ ಪರಿಷ್ಕರಣೆ, ಕಿರುಕುಳ ತಡೆ, ಭತ್ಯೆ ಪುನರಾರಂಭ, ಆರೋಗ್ಯ ವಿಮೆ ಸೇರಿದಂತೆ ಸಾರಿಗೆ ನಿಗಮಗಳ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ನೌಕರರು ಮುಷ್ಕರ ಕೊನೆಗೊಳಿಸುವ ಸಂಬಂಧ ಕೆಲ‌ವೇ ಕ್ಷಣಗಳಲ್ಲಿ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಆರ್.ಅಶೋಕ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಭಾನುವಾರ ಕಾರ್ಮಿಕ ಮುಖಂಡರ ಜತೆ ಮೂರು ಸುತ್ತಿನ ಮಾತುಕತೆ ನಡೆಯಿತು. ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ.

ಸಂಧಾನ ಸಭೆ ಅಂತ್ಯಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್, 'ನಮ್ಮ ಬಹುತೇಕ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಸೌಹಾರ್ದಯುತ ತೀರ್ಮಾನ ಆಗಿದೆ. ಮುಂದಿನ ನಿರ್ಧಾರವನ್ನು ಸ್ವಾತಂತ್ರ್ಯ ಉದ್ಯಾನದ ಪ್ರತಿಭಟನಾ ಸ್ಥಳದಲ್ಲಿ ಪ್ರಕಟಿಸಲಾಗುವುದು' ಎಂದರು.


ಬೆಂಗಳೂರಿನ ಸ್ಯಾಟಿಲೈಟ್‌ ಬಸ್‌ ನಿಲ್ದಾಣದಿಂದ ಮೈಸೂರಿನತ್ತ ಪ್ರಯಾಣಿಸಿದ ಕೆಎಸ್‌ಆರ್‌ಟಿಸಿ ಬಸ್‌

ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ, ಆರೋಗ್ಯ ವಿಮೆ, ಕಿರುಕುಳ ತಡೆ ವ್ಯವಸ್ಥೆ, ತರಬೇತಿ ಅವಧಿ ಕಡಿತ, ಭತ್ಯೆ ಪುನರಾರಂಭ ಮತ್ತು ಕೋವಿಡ್‌ನಿಂದ ಮೃತರಾದ ನೌಕರರ ಕುಟುಂಬದವರಿಗೆ ತಲಾ ₹30 ಲಕ್ಷ ಪರಿಹಾರ ನೀಡುವ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು