ಸಾರಿಗೆ ಸಂಘಟನೆಗಳ ಧರಣಿ : ಬಸ್ ವ್ಯತ್ಯಯ ಇಲ್ಲ

ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ವಿವಿಧ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಆದರೆಕ, ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
‘ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಘಟನೆಗಳ ಮುಖಂಡರು, ಸ್ವಯಂಸೇವಕರು ಧರಣಿ ನಡೆಸಲು ನಿರ್ಧರಿಸಿದ್ದೇವೆ. ಎಲ್ಲ ವಿಭಾಗೀಯ ಕಚೇರಿಗಳ ಎದುರು ಸಂಘಟನೆಗಳ ಪ್ರತಿನಿಧಿಗಳು ಧರಣಿ ನಡೆಸಲಿದ್ದಾರೆ. ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿ ಸಾರ್ವನಿಕರಿಗೆ ತೊಂದರೆ ನೀಡುವ ಉದ್ದೇಶ ಇಲ್ಲ. ಮೊದಲ ಹಂತದಲ್ಲಿ ಸಾಂಕೇತಿಕ ಧರಣಿಯನ್ನಷ್ಟೇ ನಡೆಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ‘ಪ‍್ರಜಾವಾಣಿ’ಗೆ ತಿಳಿಸಿದರು.
‘14 ಬೇಡಿಕೆಗಳನ್ನು ಮುಂದಿಟ್ಟು ಆರು ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಈ ಹೋರಾಟ ನಡೆಸುತ್ತಿದ್ದೇವೆ. ವೇತನ ಹೆಚ್ಚಳ ಒಪ್ಪಂದ 2020ರ ಜ.1ರಿಂದ ಬಾಕಿ ಉಳಿದಿದೆ. ಮೂರು ವರ್ಷಗಳಿಂದ ಸರ್ಕಾರ ವೇತನ ಹೆಚ್ಚಳ ಮಾಡಿಲ್ಲ. ಕುಟುಂಬ ನಿರ್ವಹಣೆ ಸಾಧ್ಯವಾಗದೆ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಗಮನಕ್ಕೆ ತರಲಾಗಿದೆ. ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಧರಣಿ ನಡೆಸಲು ಮುಂದಾಗಿದ್ದೇವೆ’ ಎಂದು ಹೇಳಿದರು.
‘ಪ್ರತಿಭಟನೆಯಿಂದ ಬಸ್‌ಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಎಂದಿನಂತೆ ಸಂಚಾರಿಸಲಿವೆ’ ಎಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸ್ಪಷ್ಟಪಡಿಸಿವೆ.
***
ವೇತನ ಪರಿಷ್ಕರಣೆ ಸೇರಿದಂತೆ ನೌಕರರ ಬೇಡಿಕೆಗಳನ್ನು ಸಿ.ಎಂ ಜತೆ ಚರ್ಚಿಸಿ ಈಡೇರಿಸಲಾಗುವುದು. ಹೀಗಾಗಿ ಮುಷ್ಕರ ಕೈಬಿಡಿ
– ಎಂ.ಚಂದ್ರಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.