ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಸ್‌ಆರ್‌ಟಿಸಿ’ ಟ್ರೇಡ್ ಮಾರ್ಕ್‌ ಬಳಸಲು ಕೇರಳಕ್ಕೆ ಮಾತ್ರ ಅವಕಾಶ

Last Updated 3 ಜೂನ್ 2021, 0:41 IST
ಅಕ್ಷರ ಗಾತ್ರ

ತಿರುವನಂತಪುರ: ಕರ್ನಾಟಕ ಮತ್ತು ಕೇರಳ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳೆರಡೂ ‘ಕೆಎಸ್‌ಆರ್‌ಟಿಸಿ’ ಎಂದು ತಮ್ಮ ಹೆಸರಿನ ಸಂಕ್ಷಿಪ್ತ ರೂಪವನ್ನು ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ‘ಕೆಎಸ್‌ಆರ್‌ಟಿಸಿ’ ಎಂಬುದನ್ನು ಬಳಸಲು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಅವಕಾಶ ಇದೆ.

‘ಆನ ವಂಡಿ’ ಎಂಬ ಹೆಸರನ್ನು ಕೂಡ ಇನ್ನು ಮುಂದೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಮಾತ್ರ ಬಳಸಲಿದೆ ಎಂದು ಕೇರಳದ ಸಾರಿಗೆ ಸಚಿವ ಆ್ಯಂಟನಿ ರಾಜು ಹೇಳಿದ್ದಾರೆ.

ಟ್ರೇಡ್ ಮಾರ್ಕ್‌ ರಿಜಿಸ್ಟ್ರಿ ಸಂಸ್ಥೆಯು ಟ್ರೇಡ್‌ಮಾರ್ಕ್‌ ಕಾಯ್ದೆ 1999ರ ಅನ್ವಯ ಕೆಎಸ್‌ಆರ್‌ಟಿಸಿ, ಅದರ ಲಾಂಛನ ಮತ್ತು ವ್ಯಾಪಕವಾಗಿ ಬಳಕೆಯಲ್ಲಿರುವ ‘ಆನ ವಂಡಿ’ ಎಂಬ ಹೆಸರನ್ನು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ನೀಡಿದೆ.

‘ಕೆಎಸ್‌ಆರ್‌ಟಿಸಿ’ಗಾಗಿ ಕರ್ನಾಟಕ ಮತ್ತು ಕೇರಳದ ನಡುವೆ 2014ರಿಂದಲೇ ವಿವಾದ ಇದೆ. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಬಳಸಬಾರದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ನೋಟಿಸ್‌ ನೀಡಿತ್ತು. ಹಾಗಾಗಿ, ಕೆಎಸ್‌ಆರ್‌ಟಿಸಿ ಪದ ಬಳಕೆಯ ಅವಕಾಶಕ್ಕಾಗಿ ಕೇರಳ ರಸ್ತೆ ಸಾರಿಗೆ ನಿಗಮವು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ ಅರ್ಜಿ ಕೊಟ್ಟಿತು. ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಕೇರಳಕ್ಕೆ ಸಿಕ್ಕಿದೆ ಎಂದು ಕೇರಳ ರಸ್ತೆ ಸಾರಿಗೆ ನಿಗಮವು ಹೇಳಿದೆ.

ಕೆಎಸ್‌ಆರ್‌ಟಿಸಿ ಹೆಸರನ್ನು ಬಳಸದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೋಟಿಸ್ ನೀಡಲಾಗುವುದು ಎಂದು ಕೇರಳ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಿಜು ಪ್ರಭಾಕರ್‌ ಹೇಳಿದ್ದಾರೆ.

ಕೇರಳ ರಸ್ತೆ ಸಾರಿಗೆ ಸಂಸ್ಥೆಯು 1965ರಲ್ಲಿ ಸೇವೆ ಆರಂಭಿಸಿತ್ತು. ಕರ್ನಾಟಕ ಸಾರಿಗೆ ಸಂಸ್ಥೆಯು 1974ರಲ್ಲಿ ಸೇವೆ ಆರಂಭಿಸಿತು. ಹೀಗಾಗಿ ‘ಕೆಎಸ್‌ಆರ್‌ಟಿಸಿ’ ಹೆಸರು ಕೇರಳಕ್ಕೆ ದೊರೆಯಿತು ಎಂದು ಮೂಲಗಳು ಹೇಳಿವೆ.

‘ಕಾನೂನು ಸಲಹೆ ಪಡೆದು ಮುಂದಿನ ಹೆಜ್ಜೆ’

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳೆರಡೂ ಕೆಎಸ್‌ಆರ್‌ಟಿಸಿ ಎಂದು ಬಳಕೆ ಮಾಡುತ್ತಿರುವ ಟ್ರೇಡ್‌ ಮಾರ್ಕ್ ವಿಷಯಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಕೇರಳ ಪರವಾಗಿ ಆದೇಶ ನೀಡಲಾಗಿದೆ ಎಂಬ ಮಾಹಿತಿ ಇದೆ. ಇನ್ನೂ ಅಧಿಕೃತವಾಗಿ ವಿಷಯ ಮುಟ್ಟಿಲ್ಲ. ಮೊದಲು ಮೈಸೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ) ಆಗಿತ್ತು. ಬಳಿಕ ಕೆಎಸ್‌ಆರ್‌ಟಿಸಿ ಎಂದು ಬದಲಿಸಿಕೊಳ್ಳಲಾಗಿದೆ. ಅದಕ್ಕೂ ಮೊದಲೇ ಕೇರಳದಲ್ಲಿ ಕೆಎಸ್‌ಆರ್‌ಟಿಸಿ ಎಂದು ಬಳಕೆಯಲ್ಲಿದ್ದ ಕಾರಣ ಅವರ ಪರವಾಗಿ ಆದೇಶ ನೀಡಿರಬಹುದು. ಅಧಿಕೃತವಾಗಿ ಆದೇಶ ತಲುಪಿದ ಬಳಿಕ ಕಾನೂನು ಅಭಿಪ್ರಾಯ ಪಡೆದುಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದುಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT