ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನತ್ತ ಕಾಗಿನೆಲೆಶ್ರೀ ಪಾದಯಾತ್ರೆ

Last Updated 27 ಜನವರಿ 2021, 17:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ತೆರಳುತ್ತಿರುವ ಪಾದಯಾತ್ರೆ ಬುಧವಾರ ತುಮಕೂರು ಜಿಲ್ಲೆಯ ಗಡಿ ತಲುಪಿದೆ.

13ನೇ ದಿನದ ಪಾದಯಾತ್ರೆ 220 ಕಿ.ಮೀ ಕ್ರಮಿಸಿದೆ. ದಿನ ಕಳೆದಂತೆ ಹೋರಾಟಕ್ಕೆ ಬೆಂಬಲ ಹೆಚ್ಚಾಗುತ್ತಿದ್ದು, ಸ್ವಾಮೀಜಿಯೊಂದಿಗೆ ಹೆಜ್ಜೆ ಹಾಕುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕುರುಬ ಸಮುದಾಯದ ಪ್ರತಿನಿಧಿಗಳು ಬುಧವಾರ ಜೊತೆಯಾದರು.

ಜ. 22ರಂದು ಪಾದಯಾತ್ರೆ ಚಿತ್ರ ದುರ್ಗ ಜಿಲ್ಲೆಯನ್ನು ಪ್ರವೇಶಿಸಿತ್ತು. ಜ.26ರಂದು ವಿಶ್ರಾಂತಿ ಪಡೆದಿದ್ದು, ಐದು ದಿನವೂ ನಿರಂತರವಾಗಿ ಸಾಗಿದೆ. ಇದರೊಂದಿಗೆ ಹಾಲುಮತದ ಸಂಸ್ಕೃತಿಯ ದರ್ಶನ, ಧಾರ್ಮಿಕ ಜಾಗೃತಿ ಸಭೆಗಳು ನಡೆಯುತ್ತಿವೆ.

ಹಿರಿಯೂರಿನಿಂದ ಬುಧವಾರ ನಸುಕಿನ 5.30ಕ್ಕೆ ಆರಂಭವಾದ ಪಾದಯಾತ್ರೆ, ಬೆಳಿಗ್ಗೆ 9.30ಕ್ಕೆ ಕಸ್ತೂರಿ ರಂಗಪ್ಪನಹಳ್ಳಿ ತಲುಪಿತು. ಅಲ್ಲಿಂದ ಸಂಜೆ ಹೊರಟು
ಜೆ.ಜಿ.ಹಳ್ಳಿಯಲ್ಲಿ ವಾಸ್ತವ್ಯ ಹೂಡಿತು. ಗುರುವಾರ ಬೆಳಿಗ್ಗೆ ಶಿರಾ ತಾಲ್ಲೂಕು ಪ್ರವೇಶಿಸಲಿದೆ.

‘ರಾಯಣ್ಣ ಬ್ರಿಗೇಡ್ ಎಲ್ಲಿ ಬಿಸಾಡಿದರು?’

ಶಿವಮೊಗ್ಗ: ‘ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಕಟ್ಟಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಿಸಾಡಿದ್ದಾರೆ. ಈಗ ಅವರದೇ ಸರ್ಕಾರದ ವಿರುದ್ಧ ಕುರುಬರ ಪರ ಹೋರಾಟಕ್ಕೆ ಇಳಿದಿದ್ದಾರೆ. ಇದು ಕುರುಬ ಸಮಾಜ ವಿಭಜಿಸುವ ಪಿತೂರಿ’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಹರಿಹಾಯ್ದರು.

‘ಕುರುಬರಿಗೆ ಎಸ್‌ಟಿ ಮೀಸಲಾತಿ ಸಿಗಬೇಕು ಎನ್ನುವ ವಿಷಯದಲ್ಲಿ ನನ್ನದೂ ಸಹಮತವಿದೆ. ಅದಕ್ಕಾಗಿಯೇ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಿದ್ದೆ. ವರದಿ ಬಂದ ನಂತರ ಮುಂದಿನ ನಿರ್ಧಾರ ಪ್ರಕಟಿಸುವೆ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ಗೆ ಬುದ್ಧಿ ಕಮ್ಮಿ. ಅವರ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT