ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಸ್ಮಾರಕಗಳಲ್ಲಿ ಮೂಲಸೌಲಭ್ಯ ಕೊರತೆ!

ಭಾರತೀಯ ಪುರಾತತ್ವ ಇಲಾಖೆ ಅಡಿಯಲ್ಲಿ 506 ಐತಿಹಾಸಿಕ, ಸಾಂಸ್ಕೃತಿಕ ತಾಣಗಳು
Last Updated 8 ಆಗಸ್ಟ್ 2021, 20:24 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಪುರಾತತ್ವವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಡಿ ಬರುವ ರಾಜ್ಯದ 506 ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಸ್ಮಾರಕಗಳಿರುವ ತಾಣದಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಕುಡಿಯುವ ನೀರು, ಶೌಚಾಲಯದಂಥ ಮೂಲಸೌಲಭ್ಯಗಳಿರುವ ಸ್ಮಾರಕಗಳ ಪ್ರಮಾಣ ಶೇ 15ಕ್ಕಿಂತಲೂ ಕಡಿಮೆ!

ಕೇಂದ್ರ ಸರ್ಕಾರದ ಸಂರಕ್ಷಣೆಯಲ್ಲಿರುವ ಅತೀ ಹೆಚ್ಚು ಸ್ಮಾರಕಗಳಿರುವ ರಾಜ್ಯಗಳ ಸಾಲಿನಲ್ಲಿ ಉತ್ತರ ಪ್ರದೇಶ (743) ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ ಕರ್ನಾಟಕದ್ದು. ಅಲ್ಲದೆ, ವೈಫೈ ಸೌಲಭ್ಯ ಇರುವ ಸ್ಮಾರಕಗಳು ಅತೀ ಹೆಚ್ಚು (22) ರಾಜ್ಯದಲ್ಲಿದೆ. ತಂತ್ರಜ್ಞಾನದ ವಿಚಾರದಲ್ಲಿ ರಾಜ್ಯದ ಸ್ಮಾರಕಗಳು ಮುಂಚೂಣಿಯಲ್ಲಿದ್ದರೂ, ಮೂಲಸೌಲಭ್ಯದ ಕೊರತೆ ಅವುಗಳ ಪಾಲಿಗೆ ಕಪ್ಪು ಚುಕ್ಕೆಯಾಗಿವೆ.

ರಾಜ್ಯದ 506 ಸ್ಮಾರಕಗಳ ಪೈಕಿ 53 ರಲ್ಲಿ (ಶೇ 10.5) ಮಾತ್ರ ಶೌಚಾಲಯ ವ್ಯವಸ್ಥೆಯಿದೆ. ಕೇವಲ 69 ರಲ್ಲಿ (ಶೇ 13.6) ಕುಡಿಯುವ ನೀರಿನ ಸೌಲಭ್ಯವಿದೆ. 100ರಲ್ಲಿ (ಶೇ 20) ಮಾತ್ರ ಕುಳಿತುಕೊಳ್ಳಲು ಬೆಂಚುಗಳಿವೆ. 249 ಸ್ಮಾರಕಗಳಲ್ಲಿ ಮಾತ್ರ ಸ್ಥಳದ ಇತಿಹಾಸ ಪರಿಚಯಿಸುವ ಫಲಕಗಳಿವೆ. 160 ತಾಣಗಳಿಗೆ ತೆರಳಲು ಸಮರ್ಪಕ ಸಂಪರ್ಕ ರಸ್ತೆಗಳೇ ಇಲ್ಲ.

ಈ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇಲಾಖೆಯ ಪುರಾತತ್ವ ಶಾಸ್ತ್ರಜ್ಞ ಶಿವಕಾಂತ ಬಾಜಪೇಯಿ, ‘ಸ್ಮಾರಕಗಳಲ್ಲಿ ಮೂಲಸೌಲಭ್ಯ ಒದಗಿಸುವುದು ನಿರಂತರ ಪ್ರಕ್ರಿಯೆ. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಅಗತ್ಯವಾದ ಸಹಕಾರ ಸಿಗುತ್ತಿದೆ. ಹೆಚ್ಚಿನ ಸ್ಮಾರಕಗಳಿಗೆ ಸದ್ಯದಲ್ಲೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.

‘ಭಾರತೀಯ ಪುರಾತತ್ವ ವ ಸರ್ವೇಕ್ಷಣಾ ಇಲಾಖೆ ರಾಜ್ಯದ ಪುರಾತತ್ವ ಇಲಾಖೆಯನ್ನು ನಂಬುವುದಿಲ್ಲ. 200 ವರ್ಷ ಹಳೆಯ ವಸ್ತುವೊಂದನ್ನು ಪತ್ತೆ ಹಚ್ಚಿದರೂ ಅದನ್ನು ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಅಧೀನಕ್ಕೆ ತರುತ್ತಿದೆ. ಹೀಗಾಗಿ, ಎಎಸ್‌ಐಗೆ ಹೋಲಿಸಿದರೆ, ಪುರಾತತ್ವ ವಸ್ತುಗಳ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರ ಬಹಳ ಹಿಂದಿದೆ. ಸ್ಮಾರಕಗಳ ಸಂರಕ್ಷಣೆ ಮತ್ತು ಭದ್ರತೆ ವಿಷಯವನ್ನು ಎಎಸ್‌ಐಗೆ ಬಿಟ್ಟು ಮೂಲಸೌಲಭ್ಯ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಈ ಕ್ಷೇತ್ರದ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಲಭ್ಯ ಮಾಹಿತಿ ಪ್ರಕಾರ, ಇಲಾಖೆಯ ಅಡಿಯಲ್ಲಿ ಕರ್ನಾಟಕದಲ್ಲಿರುವ ಮೂರು ವೃತ್ತಗಳಲ್ಲಿರುವ (ಬೆಂಗಳೂರು, ಹಂಪಿ, ಧಾರವಾಡ) ಸ್ಮಾರಕಗಳ ಸಂರಕ್ಷಣೆ ಮತ್ತು ಭದ್ರತೆಗೆ ಎಎಸ್‌ಐ ಕಳೆದ 5 ವರ್ಷಗಳಲ್ಲಿ ವಾರ್ಷಿಕ ಕನಿಷ್ಠ ₹ 21 ಕೋಟಿಯಿಂದ ₹ 28.55 ಕೋಟಿ ವರೆಗೂ ವೆಚ್ಚ ಮಾಡಿದೆ.

12 ಸ್ಮಾರಕಗಳಲ್ಲಿ ಎಎಸ್‌ಐ ಪ್ರವೇಶ ಶುಲ್ಕ ಸಂಗ್ರಹಿಸುತ್ತಿದೆ. ಅಂದರೆ, ಎಎಸ್‌ಐಗೆ ಸೀಮಿತ ವರಮಾನ ಮಾತ್ರ ಬರುತ್ತಿದೆ. ಹೀಗಾಗಿ, ಹೆಚ್ಚಿನ ಅನುದಾನ ಬಳಕೆಗೆ ಅವಕಾಶ ಇರುವ ರಾಜ್ಯ ಪ್ರವಾಸೋದ್ಯಮ ಇಲಾಖೆ, ಈ ಸ್ಮಾರಕಗಳಿಗೆ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ತಜ್ಞರು ಹೇಳಿದರು.

ಪುರಾತತ್ವ ಸ್ಮಾರಕಗಳ ಪರಿಣತರೊಬ್ಬರು ಮಾತನಾಡಿ, ‘ಎಎಸ್‌ಐ ಅಡಿಯಲ್ಲಿರುವ ಎಲ್ಲ ಸ್ಮಾರಕಗಳಲ್ಲಿ ಶೌಚಾಲಯ ಕಡ್ಡಾಯವಾಗಿ ಬೇಕೆಂದೇನೂ ಇಲ್ಲ. ಬಹುತೇಕ ಸ್ಮಾರಕಗಳು ಪಟ್ಟಣ ಅಥವಾ ಗ್ರಾಮಗಳಲ್ಲಿವೆ. ಹಾಸನ ಜಿಲ್ಲೆಯ ಹುಲಿಕೆರೆಯಲ್ಲಿರುವ ಕಲ್ಯಾಣಿ ಅಂಥವುಗಳಲ್ಲಿ ಒಂದು. ಸ್ಥಳೀಯ ಪಂಚಾಯಿತಿಗಳಿಗೆ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಿ, ಅಂಥ ಸ್ಮಾರಕಗಳಿಗೆ ಮೂಲ
ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT