ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ತಗ್ಗದ ಮಳೆ, ತಪ್ಪದ ಆತಂಕ | ಗುಡ್ಡ ಕುಸಿತ, ಸಂಚಾರ ಬಂದ್‌

ಹೊಳೆಗೆ ಕಾರು ಉರುಳಿ ಇಬ್ಬರು ನಾಪತ್ತೆ
Last Updated 11 ಜುಲೈ 2022, 19:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮಲೆನಾಡು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದರೆ, ಕರಾವಳಿ ಜಿಲ್ಲೆಗಳಲ್ಲಿ ತುಸು ಕಡಿಮೆಯಾಗಿದೆ. ಆದರೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡ್ಡ ಕುಸಿದಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಕಾರುಚಿಕ್ಕಮಗಳೂರು ಜಿಲ್ಲೆಯ ಗೌರಿ ಹೊಳೆಗೆ ಉರುಳಿ ಚಾಲಕ ಸೇರಿ ಇಬ್ಬರು ನಾಪತ್ತೆ ಆಗಿದ್ದಾರೆ. ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 24 ಮನೆಗಳು ಭಾಗಶಃ ಕುಸಿದಿದ್ದರೆ, ಗಡಿ ಜಿಲ್ಲೆ ಬೀದರ್‌ನಲ್ಲಿ 12 ಮನೆಗಳು ಕುಸಿದಿವೆ.

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಕಲ್ಮಕ್ಕಿ ಬಳಿ ನೀರೋಡಿ ಹೊಳೆಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲ್ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. ಸೇತುವೆಯು ಕುಸಿಯುವ ಭೀತಿ ಎದುರಾಗಿದ್ದು, ರಸ್ತೆ ಸಂಪರ್ಕ ಕಡಿದುಹೋಗಿದೆ.ಬಂಟ್ವಾಳ ತಾಲ್ಲೂಕಿನ ಸೂರಿಕುಮೇರು ಬಳಿಯೂ ಗುಡ್ಡ ಕುಸಿದಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರೆನೂರು ಮತ್ತು ಸದಾಶಿವಗಡ ಬಳಿ ಗುಡ್ಡ ಕುಸಿದಿದೆ. ಇದರಿಂದಾಗಿ ಸದಾಶಿವಗಡ–ಬೆಳಗಾವಿ ಸಂಪರ್ಕ ಕಡಿತವಾಗಿದೆ. ಇತ್ತ, ಹಾಸನ ಜಿಲ್ಲೆಯಲ್ಲಿ ದ್ವಾರಸಮುದ್ರ ಕೆರೆಯು ಕೋಡಿ ಬಿದ್ದಿದ್ದು, ಕೊಣನೂರು–ರಾಮನಾಥಪುರ ನಡುವಿನ ಸಂಪರ್ಕ ಬಂದ್‌ ಆಗಿತ್ತು. ಸಕಲೇಶಪುರ ತಾಲ್ಲೂಕು ದೋಣಿಗಲ್‌ ಬಳಿ ಸೋಮವಾರವೂ ಹೆದ್ದಾರಿ ಬದಿ ಭೂಕುಸಿತವಾಗಿದ್ದು,ಸಂಚಾರ ಸ್ಥಗಿತವಾಗಿದೆ.

ದೋಣಿಗಲ್‌ ಬಳಿ ಭೂಕುಸಿತವಾಗಿದ್ದ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸೋಮವಾರ ಭೇಟಿ
ನೀಡಿ ಪರಿಶೀಲಿಸಿ, ತ್ವರಿತ ದುರಸ್ತಿಗೆ ಸೂಚಿಸಿದರು. ‘ಹಾಸನ –ಶಿರಾಡಿಘಾಟಿ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡುವುದಿಲ್ಲ’ ಎಂದು ಹೇಳಿದರು.

ಕಾವೇರಿ ನದಿಪಾತ್ರದಲ್ಲಿ ಆತಂಕ: ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯದಿಂದ ನದಿಗೆ ಸೋಮವಾರ 72 ಸಾವಿರ ಕ್ಯುಸೆಕ್‌ ನೀರು ಹರಿಸಿದ್ದು ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಪಶ್ಚಿಮವಾಹಿನಿ ದೇಗುಲ, ಮಂಟಪ ಸಂಪೂರ್ಣ, ರಂಗನತಿಟ್ಟು ಪಕ್ಷಿಧಾಮ ಭಾಗಶಃ ಮುಳುಗಿವೆ.

ಜಲಾಶಯದ ಒಳಹರಿವು ಹೆಚ್ಚಿದೆ. ಕ್ರಮೇಣ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ಹೊರಬಿಡಲಿದ್ದು, ನದಿಪಾತ್ರ ಜನರು ಹಾಗೂಅಪಾಯ ಸ್ಥಿತಿ 59 ಗ್ರಾಮಗಳ ನಿವಾಸಿಗಳಿಗೆ ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಡಳಿತವು ಕಟ್ಟೆಚ್ಚಕೆ ನೀಡಿದೆ.

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ಭಾಗದಲ್ಲಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಯಲ್ಲಿ ನೀರಿನ ರಭಸ ಗಣನೀಯವಾಗಿ ಹೆಚ್ಚಿದ್ದು, ನದಿಪಾತ್ರದಲ್ಲಿ ಆತಂಕದ ಸ್ಥಿತಿ ಮುಂದುವರಿದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿಯೂ ವರ್ಷಧಾರೆ ಮುಂದುವರಿದಿದೆ. ಇದರಿಂದಾಗಿ ತುಂಗಾ, ಭದ್ರಾ, ಶರಾವತಿ ಹಾಗೂ ಕುಮುದ್ವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT