ಬುಧವಾರ, ಆಗಸ್ಟ್ 10, 2022
20 °C
ಕೋವಿಡ್‌–19ರ ಸಮೀಕ್ಷೆಗೆ ಪದವಿ ಕಾಲೇಜುಗಳ ಬೋಧಕರು, ಬೋಧಕೇತರರ ಬಳಕೆ

PV Web Exclusive | ಪರೀಕ್ಷಾ ಕಾರ್ಯಕ್ಕೆ ಕಾಡುತ್ತಿರುವ ಸಿಬ್ಬಂದಿ ಕೊರತೆ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಸುಪ್ರೀಂಕೋರ್ಟ್‌ ನಿರ್ದೇಶನಗಳಿಗೆ ಅನ್ವಯವಾಗಿ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ಪದವಿ ಕೋರ್ಸ್‌ಗಳ ಪರೀಕ್ಷೆಯನ್ನು ಸೆಪ್ಟೆಂಬರ್‌ನಲ್ಲೇ ನಡೆಸಲು ದಿನಾಂಕ ನಿಗದಿಪಡಿಸಿವೆ. ಆದರೆ ಈ ಪರೀಕ್ಷಾ ಕಾರ್ಯಗಳನ್ನು ಮಾಡಬೇಕಾದ ಬಹುತೇಕ ಸಿಬ್ಬಂದಿ ಕಾಲೇಜುಗಳಲ್ಲಿ ಲಭ್ಯವಿಲ್ಲ!

ಪರೀಕ್ಷಾ ಕಾರ್ಯಗಳಲ್ಲಿ ತೊಡಗಬೇಕಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅನುದಾನಿತ ಪದವಿ ಕಾಲೇಜುಗಳ ಶೇ 75ರಷ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೋವಿಡ್‌–19ರ ಕಾರ್ಯಗಳಲ್ಲಿ ತೊಡಗಿದ್ದಾರೆ. ಇದರಿಂದ ಪರೀಕ್ಷಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಎದುರಾಗಿದೆ. 

ಅಲ್ಲದೆ, ರಾಜ್ಯದಾದ್ಯಂತ ಸೆಪ್ಟೆಂಬರ್‌ನಲ್ಲಿಯೇ ಪದವಿ ಕಾಲೇಜುಗಳಲ್ಲಿ ‘ಆನ್‌ಲೈನ್‌’ ತರಗತಿಗಳು ಆರಂಭವಾಗಬೇಕು ಎಂದು ಈಗಾಗಲೇ ಸರ್ಕಾರ ನಿರ್ದೇಶಿಸಿದೆ. ಅದರ ಜತೆಗೆ, ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ‘ಆಫ್‌ಲೈನ್‌’ ಮೂಲಕ ವಿದ್ಯಾರ್ಥಿಗಳಿಗೆ ಪುನರ್‌ಮನನ ತರಗತಿಗಳನ್ನೂ ಸೆ. 1ರಿಂದಲೇ ತೆಗೆದುಕೊಳ್ಳಬೇಕಿದೆ. ಆದರೆ ಈ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಬೋಧಕರ ಕೊರತೆ ಕಾಡುತ್ತಿದೆ.

ಕೋವಿಡ್‌–19ರ ಕೆಲಸವನ್ನು ತುರ್ತು ಕರ್ತವ್ಯ ಎಂದು ಪರಿಗಣಿಸಲಾಗಿದೆ. ಈ ಕರ್ತವ್ಯಕ್ಕೆ ಗೈರಾದರೆ ಸಾಂಕ್ರಾಮಿಕ ರೋಗಗಳ ಕಾಯ್ದೆ–1897 ಅಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರವೇ ಎಚ್ಚರಿಕೆ ನೀಡಿದೆ.

ಅದರಂತೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಬಹುತೇಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕೋವಿಡ್‌ –19ರ ಮನೆ ಮನೆ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಕೋವಿಡ್‌ ಸೋಂಕಿತರು, ಸೋಂಕಿತರ ಸಮೀಪ ವರ್ತಿಗಳನ್ನು, ಅವರ ಮನೆ, ಪ್ರದೇಶವನ್ನು ಪತ್ತೆ ಹಚ್ಚುವ ಹಾಗೂ ಅವರುಗಳ ಆರೋಗ್ಯದ ಕುರಿತು ಮಾಹಿತಿ ಪಡೆಯುವ ಕಾರ್ಯಕ್ಕೆ ಇವರನ್ನು ನಿಯೋಜಿಸಲಾಗಿದೆ.

‘ಪರೀಕ್ಷಾ ಕಾರ್ಯವೂ ತುರ್ತು ಕರ್ತವ್ಯವೇ ಆಗಿದೆ. ಆದರೆ ಎರಡೂ ತುರ್ತು ಕರ್ತವ್ಯವನ್ನು ಒಮ್ಮೆಲೆ ಹೇಗೆ ನಿಭಾಯಿಸಲು ಸಾಧ್ಯ. ಒಂದೊಮ್ಮೆ ಕೋವಿಡ್‌ ಕರ್ತವ್ಯದಿಂದ ವಿನಾಯಿತಿ ದೊರೆತರೆ ಪರೀಕ್ಷಾ ಕಾರ್ಯ ಮಾಡಬಹುದು’ ಎಂದು ಹೇಳುತ್ತಾರೆ ಕೋವಿಡ್‌ ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಬೋಧಕರು.

ಅಧ್ಯಾಪಕರ ಸಂಘದ ಮನವಿ

‘ಕೋವಿಡ್‌ ಸಂದರ್ಭದಲ್ಲಿ ಪರೀಕ್ಷಾ ಕಾರ್ಯ ನಿರ್ವಹಣೆ ಸವಾಲಿನ ಕೆಲಸ. ಬಹುತೇಕ ಕಾಲೇಜಿನ ಶೇ 75ರಷ್ಟು ಸಿಬ್ಬಂದಿ ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಶೇ 25ರಷ್ಟು ಸಿಬ್ಬಂದಿ ಮಾತ್ರ ಲಭ್ಯರಿದ್ದಾರೆ. ಅವರಿಂದಲೇ ಆನ್‌ಲೈನ್‌, ಆಫ್‌ಲೈನ್‌ ತರಗತಿಗಳ ಜತೆಗೆ ಪರೀಕ್ಷಾ ಕಾರ್ಯಗಳನ್ನು ಮಾಡಿಸುವುದು ಕಷ್ಟ ಸಾಧ್ಯವಾಗಿದೆ’ ಎನ್ನುತ್ತಾರೆ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಟಿ.ಎನ್‌. ಮಂಜುನಾಥ್. 

‘ಈ ಕಾರ್ಯಗಳ ಜತೆಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ, ನ್ಯಾಕ್‌ ಕರ್ತವ್ಯಗಳನ್ನೂ ಕಾಲೇಜಿನಲ್ಲಿ ಬೋಧಕರು ನಿರ್ವಹಿಸಬೇಕಿದೆ. ಹಾಗಾಗಿ ಕೋವಿಡ್‌ ಕರ್ತವ್ಯದಲ್ಲಿ ಇರುವ ಬೋಧಕರನ್ನು ತ್ವರಿತವಾಗಿ ಬಿಡುಗಡೆಗೊಳಿಸಿ, ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು’ ಎಂದು ಸಂಘವು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು. 

ಆಯುಕ್ತರಿಂದಲೂ ಪತ್ರ

ಪದವಿಯ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳು ಹಾಗೂ 2020–21ನೇ ಸಾಲಿನ ತರಗತಿಗಳ ದಿನಾಂಕಗಳನ್ನು ವಿಶ್ವವಿದ್ಯಾಲಯಗಳು ನಿಗದಿಪಡಿಸಿವೆ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿದೃಷ್ಟಿಯಿಂದ ಮತ್ತು ಬೋಧನಾ ಹಾಗೂ ಆಡಳಿತಾತ್ಮಕ ಕಾರ್ಯ ನಿರ್ವಹಿಸಲು ಬೋಧಕ ಮತ್ತು ಬೋಧಕೇತರ ನೌಕರರು ಕಾಲೇಜಿನ ಕರ್ತವ್ಯಕ್ಕೆ ಹಾಜರಾಗಬೇಕಿರುವುದು ಅತೀ ಅವಶ್ಯಕವಾಗಿದೆ. ಆದ್ದರಿಂದ ಕೋವಿಡ್‌ 19 ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಯನ್ನು ತುರ್ತಾಗಿ ಆ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಪಿ. ಪ್ರದೀಪ್‌ ಅವರು ಬಿಬಿಎಂಪಿ ಆಯುಕ್ತರು ಹಾಗೂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೋಮವಾರ ಪತ್ರ ಬರೆದು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು