ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ–1 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

Last Updated 24 ಆಗಸ್ಟ್ 2022, 12:17 IST
ಅಕ್ಷರ ಗಾತ್ರ

ಪ್ರಪಂಚದ ಎಲ್ಲದೇಶಗಳು ಮಾನವ ಕಲ್ಯಾಣ ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ನಂಬಿರುವ ಪ್ರಮುಖ ಆದಾಯವೇ ತೆರಿಗೆಗಳು. ಭಾರತ ದೇಶವು ಕೂಡ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳನ್ನು ಸಂರ್ಪೂಣವಾಗಿ ನಂಬಿಕೊಂಡಿದೆ. ಅದರಲ್ಲೂ ಜಿಎಸ್‌ಟಿ ಮತ್ತು ವೈಯಕ್ತಿಕ ಆದಾಯ ತೆರಿಗೆಗಳು ದೇಶದ ಆದಾಯದ ಪ್ರಮುಖ ಮೂಲಗಳು. ತೆರಿಗೆ ಅಥವಾ ಕಂದಾಯ ಎಂಬುದು ಪ್ರಾಚಿನ ಕಾಲದಿಂದಲೂ, ರಾಜಾಡಳಿತದಿಂದಲೂ, ಪರಕೀಯರ ಆಳ್ವಿಕೆಯ ಸಂದರ್ಭದಲ್ಲೂ ಮತ್ತು ಬ್ರಿಟನ್ನಿನ ಈಸ್ಟ್ ಇಂಡಿಯಾ ಕಂಪನಿ ಮತ್ತು ತದನಂತರ ಬ್ರಿಟನ್ನಿನ ರಾಜಾಡಳಿತದ ಅಧಿಕಾರದ ಅವಧಿಯಲ್ಲಿ ಪ್ರಮುಖವಾಗಿ ಕಂದಾಯವು ಎಲ್ಲಾ ಆದಾಯಗಳ ಮೂಲವಾಗಿತ್ತು.

ಬ್ರಿಟಿಷರು ಭಾರತದಲ್ಲಿನ ಖನಿಜ ಸಂಪತ್ತು ಮತ್ತು ಮಸಾಲೆ ಪದಾರ್ಥಗಳ ನಿರಂತರ ಲೂಟಿ ಮಾಡಿದ ನಂತರವೂ ಸಾರ್ವಜನಿಕರಿಗೆ ತೆರಿಗೆ ವಿಧಿಸಿ, ಬರುವ ಆದಾಯದಲ್ಲಿ ಸ್ಥಳೀಯ ಅಭಿವೃದ್ಧಿ ಮತ್ತು ಆದಾಯದ ಹೆಚ್ಚಿನ ಭಾಗವನ್ನು ಬ್ರಿಟನ್‌ಗೆ ವರ್ಗಾಯಿಸುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಮುಖ ತೆರಿಗೆಯೆ ಭೂ ಕಂದಾಯ ತೆರಿಗೆ.

ಹರೀಶ್ ನಾಯ್ಕ
ಹರೀಶ್ ನಾಯ್ಕ

ಈ ಹಿಂದೆ ರಾಜಾಡಳಿತ ಕಾಲದಲ್ಲಿ ಅವೈಜ್ಞಾನಿಕವಾಗಿದ್ದ ತೆರಿಗೆ ಪದ್ಧತಿಯ ಬದಲಾಗಿ ಬ್ರಿಟಿಷರು ಕೃಷಿ ಜಮೀನನ್ನು ಅಳತೆ ಮಾಡಿ, ಸರ್ವೆ ನಂಬರ್ ನೀಡಿ, ವ್ಯವಸಾಯದ ಬೆಳೆಗಳ ಆಧಾರದ ಮೇಲೆ ಭೂ ಕಂದಾಯ ವಿಧಿಸಿ ಅದನ್ನು ಅತ್ಯಂತ ವ್ಯವ್ಯಸ್ಥಿತವಾಗಿ ಜಿಲ್ಲಾ ಕಲೆಕ್ಟರ್, ಸಬ್‌ ಕಲೆಕ್ಟರ್. ಅಮಾಲ್ದಾರ/ ತಹಶೀಲ್ದಾರ್, ಶ್ಯಾನುಬೋಗ ಮತ್ತು ಪೋಲಿಸ್ ಹವಾಲ್ದಾರ್‌ಗಳ ಮುಖಾಂತರ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಈ ಹುದ್ದೆಯಲ್ಲಿದ್ದವರು ತಮ್ಮ ದೈನಂದಿನ ಆಡಳಿತ ನಿರ್ವಹಣೆ ಅಲ್ಲದೆ ತೆರಿಗೆಗಳನ್ನು ಸಂಗ್ರಹಿಸುವುದನ್ನೂ ಮಾಡಬೇಕಿತ್ತು. ಸ್ವಾತಂತ್ರ ಪೂರ್ವದಲ್ಲಿ ಭೂ ಕಂದಾಯ ಅತ್ಯಂತ ಪ್ರಮುಖ ಆದಾಯವೂ ಆಗಿತ್ತು.

ಭೂಮಿಗೊಂದು ದಾಖಲೆ

ಸಾಂಪ್ರದಾಯಿಕ ಕೃಷಿ ವ್ಯವಸ್ಥೆ ಮತ್ತು ಪ್ರಾಚೀನ ಪದ್ಧತಿಯಲ್ಲಿದ್ದ ಅನ್ನದಾತನಿಗೆ ತನ್ನದೆ ಜಮೀನು ಯಾವ ಊರು, ಸರ್ವೆ ನಂಬರ್, ವಿಸ್ತೀರ್ಣ, ಯಾವ ಪೋಡು ಮತ್ತು ಕಂದಾಯ ದಾಖಲೆಗಳಲ್ಲಿ ಏನು ಇದೆ ಎಂಬ ಅರಿವು ಮೂಡಿದ್ದೇ 90ರ ದಶಕದಲ್ಲಿ. ಅದಾಗಲೇ ದೇಶದಲ್ಲಿ ಆರ್ಥಿಕ ಉದಾರಿಕರಣದಿಂದ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, ಬೃಹತ್ ವಿಮಾನ ನಿಲ್ದಾಣಗಳು, ಕೇಂದ್ರ ಮತ್ತು ರಾಜ್ಯಗಳ ನೂರಾರು ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ಭೂಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕಂದಾಯ ದಾಖಲೆಗಳನ್ನು ಪರಿಶಿಲಿಸಿದಾಗ ಶೇ 75ರಷ್ಟು ರೈತರ ಜಮೀನುಗಳ ಕಂದಾಯ ದಾಖಲೆಗಳು ಅಪೂರ್ಣ ಮತ್ತು ತಪ್ಪಾಗಿ ದಾಖಲೆಯಾಗಿದ್ದವು.

ಏನೇನು ಲೋಪಗಳು?

ಪಹಣಿ ಪತ್ರಿಕೆಯಲ್ಲಿ ನೂರಾರು ವರ್ಷಗಳಿಂದ ವಂಶಸ್ಥರು ಮೃತಪಟ್ಟಿದ್ದರು. ಸತ್ತವರ ಹೆಸರಿನಲ್ಲಿ ಖಾತೆಯಿದ್ದು, ಈಗಿನ ವಾರಸುದಾರರ ಹೆಸರಿಗೆ ಹಕ್ಕು ಬದಲಾಗದಿರುವುದು, ಕಾಲಂ 9ರಲ್ಲಿನ ವಿಸ್ತೀರ್ಣ ಮತ್ತು ಹಿಡುವಳಿದಾರನ ಹೆಸರಿನ ಮುಂದೆ ಆತನು ಅನುಭವಿಸುತ್ತಿರುವ ಭೂಮಿಯ ವಿಸ್ತೀರ್ಣವು ತಪ್ಪಾಗಿರುವುದು, ಒಂದೇ ಪಹಣಿಯಲ್ಲಿ ಐವತ್ತಕ್ಕೂ ಹೆಚ್ಚು ಖಾತೆದಾರರು ಇದ್ದು, ಪ್ರತಿಯೊಬ್ಬರಿಗೂ ಅವರ ವಿಸ್ತೀರ್ಣಕ್ಕೆ ತಕ್ಕಂತೆ ಪ್ರತ್ಯೇಕ ಪಹಣಿ ಇಲ್ಲದಿರುವುದು, ಪೋಡಿಯಾಗದೆ ಇರುವುದು, ಆಕಾರ ಬಂದ್‌ಗಿಂತ (ಅಂದರೆ ನಿರ್ದಿಷ್ಟ ವಿಸ್ತೀರ್ಣಕ್ಕಿಂತ) ಹೆಚ್ಚು ಭಾಗ ಪಹಣಿಯಲ್ಲಿ ಇರುವುದು, ಬಹು ಮಾಲೀಕತ್ವದ ಪಹಣಿಯಲ್ಲಿ ಯಾರದೋ ಒಬ್ಬರ ಭೂವಿಸ್ತೀರ್ಣ ತಪ್ಪಾಗಿರುವುದು, ಒಬ್ಬ ಭೂಮಾಲೀಕನ ಪಹಣಿ ವಿಸ್ತೀರ್ಣ ತಪ್ಪಿದಲ್ಲಿ ಬಹು ಮಾಲೀಕತ್ವದವರಿಗೆ ಯಾವುದೇ ವಹಿವಾಟು ಮಾಡಲಾಗದ ನ್ಯೂನತೆ, ಖಾತೆದಾರರ ಜಮೀನಿನ ವಿಸ್ತೀರ್ಣಗಳು ಅದಲು ಬದಲಾಗಿರುವುದು, ಸರ್ವೆ ದಾಖಲೆಗಳಂತೆ ಖರಾಬು ವಿಸ್ತೀರ್ಣ ಪಹಣಿಯಲ್ಲಿ ಇಂಡೀಕರಣವಾಗದಿರುವುದು, ಕ್ರಯಕ್ಕೆ ಪಡೆದ ಜಮೀನು ಕ್ರಯಕ್ಕೆ ಕೊಟ್ಟವನ ಹೆಸರಿನಲ್ಲೇ ಮುಂದುವರಿದಿರುವುದು, ಉಪ ನೋಂದಣಾಧಿಕಾರಿಗಳ ದಾಖಲೆಗಳಿಗೂ ಕಂದಾಯ ಇಲಾಖೆಯ ದಾಖಲೆಗಳಲ್ಲಿ ವ್ಯತ್ಯಾಸವಿರುವುದು, ಸರ್ಕಾರಿ ಕಂದಾಯ ಕಟ್ಟಿರದಿರುವುದು ಪಡಾ ಆಗಿರುವುದು, ಸರ್ಕಾರದ ಹೆಸರಿನಲ್ಲಿ ನಮೂದಾಗಿರುವುದು, ಪೌತಿ ಖಾತೆಯಾಗದಿರುವುದು, ಅನುಭವದಲ್ಲಿ ಅದಲು ಬದಲಾಗಿರುವುದು ಮುಂತಾದ ಮೇಲ್ಕಂಡ ಹೆಚ್ಚಿನ ಪಹಣಿ ದೋಷಗಳು ಖಾಸಗಿ ಸರ್ವೆ ನಂಬರ್‌ನಲ್ಲಿ ಇದ್ದವು.

ಮಂಜೂರಾದ ಸರ್ಕಾರಿ ಜಮೀನುಗಳ ಪಹಣಿಯಲ್ಲೂ ದೋಷಗಳು

ಸರ್ಕಾರದಿಂದ ಮಂಜೂರಾದ ಜಮೀನುಗಳಲ್ಲಿ ಮಂಜೂರಾದವರಿಗೆ ಆಯಾ ಜಾಗದ ವಿಸ್ತೀರ್ಣ ಸಾಗುವಳಿ ಚೀಟಿಯಂತೆ ಪಹಣಿ ಮತ್ತು ಮ್ಯೂಟೇಷನ್‌ನಲ್ಲಿ ಇಲ್ಲದಿರುವುದು, ಉದಾಹರಣೆಗೆ 100 ಎಕರೆ ಜಮೀನು ಇದ್ದಲ್ಲಿ 50 ಜನರಿಗೆ ತಲಾ 2 ಎಕರೆಯಂತೆ ಮಂಜೂರಾಗಿದ್ದರೂ ಪ್ರತಿಯೊಬ್ಬರ ಹೆಸರಿಗೆ ತಲಾ 2 ಎಕರೆಯಂತೆ ದರ್ಕಾಸ್ತು ಪೋಡಿ ಆಗದೇ ಗೋಮಾಳದಲ್ಲಿನ ‘ಬಿ’ ಖರಾಬಿನಲ್ಲಿರುವುದು, ದರಖಾಸ್ತು ಜಮೀನು ಪೋಡಿಯಾಗದೆ ವಿಸ್ತೀರ್ಣ ಮತ್ತು ಸ್ಪಷ್ಟ ಚಕ್ಕುಬಂದಿ ಇಲ್ಲದೆ ಇರುವುದು, ಅನಧಿಕೃತ ಹಿಡುವಳಿದಾರರಿಗೆ ಮಂಜೂರಾದ ಜಮೀನುಗಳ ವಿಸ್ತೀರ್ಣ ಇಂತಹ ದೋಷಗಳು ಹೇರಳವಾಗಿ ಇದ್ದವು.

ಇನ್ನು ಸರ್ಕಾರಿ ಉದ್ದೇಶಗಳಾದ ರಸ್ತೆ, ಜನತಾ ಮನೆಗಳು, ಸ್ಮಶಾನ, ಉಚಿತ ನಿವೇಶನಗಳು, ಶಾಲಾ-ಕಾಲೇಜು-ಹಾಸ್ಟೆಲ್-ಆಸ್ಪತ್ರೆ ಬೇರೆ ಬೇರೆ ಇಲಾಖೆಗಳಿಗೆ ಮಂಜೂರಾದ ಜಮೀನುಗಳು ಮತ್ತು ಕಟ್ಟಡಗಳು, ಮೈದಾನ, ಇತ್ಯಾದಿಗಳನ್ನು ಅಂಕಿ ಅಂಶಗಳು ಪಹಣಿ ಪತ್ರಿಕೆಗಳಲ್ಲಿ ತಪ್ಪಾಗಿರುವುದು, ಮಂಜೂರಾದ ಜಮೀನಿಗೆ ಕಂದಾಯದ ಮೌಲ್ಯಮಾಪನ ಮಾಡದೇ ಸರ್ಕಾರಿ ಖರಾಬಿನಲ್ಲಿ ಇಟ್ಟಿರುವುದು, ಅರಣ್ಯ ಇಲಾಖೆಗೆ ಮಂಜೂರಾದ ಜಮೀನುಗಳು, ಅರಣ್ಯ ಜಮೀನುಗಳು, ಹಳ್ಳ-ಕೊಳ್ಳ, ಕೆರೆ-ಕಟ್ಟೆ-ಕುಂಟೆ ಇತ್ಯಾದಿ ಪಹಣಿಯಲ್ಲಿ ಇಂಡೀಕರಣವಾಗದೇ ಇರುವುದು, ಇಂತಹ ಹಲವಾರು ನ್ಯೂನತೆಗಳೂ ಇದ್ದವು.

ಜೋಡಿ ಗ್ರಾಮಗಳು ಮತ್ತು ಇನಾಂ ಜಮೀನುಗಳು...

ಮೈಸೂರು ಪ್ರಾಂತ್ಯದಲ್ಲಿ ಪ್ರತೀ ತಾಲ್ಲೂಕಿನಲ್ಲೂ ಸುಮಾರು 40-45 ಕ್ಕೂ ಹೆಚ್ಚು ಗ್ರಾಮಗಳನ್ನು ಜೋಡಿದಾರರು, ಇನಾಂದಾರರು, ದೇವಸ್ಥಾನದ ಇನಾಂತಿ ಜಮೀನು, ವಕ್ಷ ಇನಾಂತಿ ಜಮೀನುಗಳು ಎಂದು ವರ್ಗೀಕರಿಸಿ, ಅಂತಹ ಗ್ರಾಮಗಳನ್ನು ಕೆಲವು ಅಳತೆಗೊಳಪಡಿಸಿ, ಇನ್ನೂ ಕೆಲವು ಗ್ರಾಮಗಳು ಅಳತೆಯಾಗದೇ ಹಾಗೇ ಉಳಿದುಕೊಂಡಿವೆ.

ಅಂದಿನ ಜೋಡಿದಾರರು/ಇನಾಂದಾರರು ಸರ್ಕಾರಕ್ಕೆ ಕಂದಾಯ ಕಟ್ಟುತ್ತಿದ್ದರಿಂದ ಮತ್ತು ಅವರು ಪ್ರಭಾವ ಬಳಸಿ ಸರ್ವೆ ಮಾಡಲು ಬಿಡಲಿಲ್ಲ. ಇದನ್ನು ಮನಗಂಡ ಸರ್ಕಾರವು 1955ರಲ್ಲಿ ವಿಶೇಷ ಜಿಲ್ಲಾಧಿಕಾರಿಗಳು (ಇನಾಂ) ಮತ್ತು ವಿಶೇಷ ತಹಶೀಲ್ದಾರ್ (ಇನಾಂ) ಹುದ್ದೆಗಳನ್ನು ಸೃಷ್ಟಿಸಿ ಜೋಡಿ ಗ್ರಾಮದ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಮಂಜೂರು ಮಾಡಿದರು. ಅಲ್ಲದೇ, ಪ್ರತಿ ಗ್ರಾಮಗಳಲ್ಲೂ 2-3 ಸರ್ವೆ ನಂಬರುಗಳಲ್ಲಿ ತೋಟಿ ತಳವಾರಿ ಮತ್ತು ನೀರಗಂಟಿ ಜಮೀನುಗಳಾಗಿ ಮೀಸಲಿಟ್ಟು, ಗ್ರಾಮದಲ್ಲಿ ಗ್ರಾಮ ಸೇವಕರಾಗಿ ಕಾರ್ಯನಿರ್ವಹಿಸುತ್ತಿದವರಿಗೆ ಯಾವುದೇ ವೇತನ ನೀಡದೆ, ಕೃಷಿ ಜಮೀನಿನಲ್ಲಿ ಬರುವ ಆದಾಯದಲ್ಲೆ ಜೀವನ ನಿರ್ವಹಣೆ ಮಾಡಲು ಸರ್ಕಾರ ಭೂಮಿ ಮಂಜೂರು ಮಾಡಿತು.

(* ಇನಾಮತಿ ಆಯಾ ಪ್ರಾಂತ್ಯದ ಆಡಳಿತಗಾರರು ಅಥವಾ ಮುಖ್ಯಸ್ಥರಿಂದ ಇನಾಮು (ಬಹುಮಾನ) ಉಂಬಳಿ ಅಥವಾ ಕೊಡುಗೆ ರೂಪದಲ್ಲಿ ಬಂದ ಜಮೀನು)

ಇಲ್ಲೂ ಲೋಪ ತಪ್ಪಲಿಲ್ಲ

ಜೋಡಿ ಮತ್ತು ಇನಾಂ ಗ್ರಾಮಗಳಲ್ಲಿ ಕಂಡುಬರುವ ಪಹಣಿಯಲ್ಲಿರುವ ನ್ಯೂನತೆಗಳೆಂದರೆ ಜೋಡಿದಾರರ ಹೆಸರಿನಲ್ಲಿ ಪಹಣಿ ಇದ್ದು, ಕಾಲಂ-9ರಲ್ಲಿ ಮಂಜೂರುದಾರರಿಗೆ ಹಕ್ಕು ಬರದಿರುವುದು, ಹೆಸರಿಗೆ ದಾಖಲಾಗದಿರುವುದು, ಇನಾಂ ಗ್ರಾಮಗಳ ಸರ್ವೆಯಾಗದೇ ಇರುವುದು, 50 ವರ್ಷಗಳಿಂದಲೂ ಭೂ ನ್ಯಾಯ ಮಂಡಳಿಗಳಲ್ಲಿ ಇನಾಂ ಪ್ರಕರಣಗಳು ಇತ್ಯರ್ಥವಾಗದೇ ಇರುವುದು, ನ್ಯಾಯಾಲಯದಲ್ಲಿ ದಾಖಲಾಗಿರುವ ಅಪೀಲುಗಳ ಸಂಖ್ಯೆ ಪಹಣಿಯಲ್ಲಿ ಇಲ್ಲದೆ ಇರುವುದು ಮುಂತಾದ ಸರ್ವೆಸಾಮಾನ್ಯ ತಪ್ಪುಗಳು ಇನ್ನು ಚಾಲ್ತಿಯಲ್ಲಿರುವುದು ಇನ್ನೂ ಇವೆ.

ಅಲ್ಲದೆ ಕಂದಾಯ ಇಲಾಖೆ, ಸರ್ವೇ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತು ಅಭಿವೃದ್ಧಿ ಇಲಾಖೆಯಾದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ದಿ ಇಲಾಖೆಗಳ ಮಧ್ಯೆ ಸಮನ್ವಯ ಕೊರತೆಯಿಂದ ತಮ್ಮದಲ್ಲದ ತಪ್ಪಿಗೆ ಸಾರ್ವಜನಿಕರು ಮತ್ತು ರೈತರು ಪರಿತಪಿಸುವಂತಾಗಿತ್ತು.

ಕಂದಾಯ ದಾಖಲೆಗಳಲ್ಲಿ ಯಾವುದೇ ನ್ಯೂನತೆ ಇಲ್ಲದಿದ್ದಲ್ಲಿ ಹೆಚ್ಚಿನ ವ್ಯಾಪಾರ-ವಹಿವಾಟು ನಡೆದು ಸರಕಾರದ ಬೊಕ್ಕಸಕ್ಕೆ ಆದಾಯ ಬರುತ್ತದೆ. ಆರ್ಥಿಕ ವಹಿವಾಟಿನಿಂದ ಆದಾಯ ತೆರಿಗೆ ಸಂಗ್ರಹವಾಗುತ್ತದೆ. ಅಲ್ಲದೆ, ಕಂದಾಯ ದಾಖಲೆಗಳು ಸರಿ ಇದಲ್ಲಿ ಭೂಸ್ವಾಧೀನದಿಂದ ಕೈಗಾರಿಕೆಗಳು, ನೀರಾವರಿ ಯೋಜನೆಗಳು, ರಸ್ತೆ, ರೈಲು ಮತ್ತು ವಿಮಾನ ನಿಲ್ದಾಣಗಳು, ವಿವಿಧ ಸಂಪರ್ಕ ಯೋಜನೆಗಳು ಅತೀ ಶೀಘ್ರದಲ್ಲೆ ಅನುಷ್ಠಾನಗೊಂಡು ರಾಜ್ಯ ಮತ್ತು ದೇಶದ ಪ್ರಗತಿಗೆ ಪೂರಕವಾಗಲಿದೆ.

ಪರಿಹಾರವೇನು...? ಮುಂದಿನ ಭಾಗದಲ್ಲಿ...ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ (National Land Records Modernization program...)

ಲೇಖಕರು:ಕಾರ್ಯದರ್ಶಿ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಮತ್ತು

ವಿಶೇಷ ಭೂಸ್ವಾಧೀನಾಧಿಕಾರಿ, ಡಾ.ಕೆ.ಶಿವರಾಮ ಕಾರಂತ ಬಡಾವಣೆ,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT