ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿಗಿಂತ ಭಾಷಾ ನೀತಿ ಅಗತ್ಯ: ಪುರುಷೋತ್ತಮ ಬಿಳಿಮಲೆ

ರಾಷ್ಟ್ರೀಯ ಶಿಕ್ಷಣ ನೀತಿ– ಪ್ರಾದೇಶಿಕ ಅಸ್ಮಿತೆ ವೆಬಿನಾರ್‌ನಲ್ಲಿ ಪುರುಷೋತ್ತಮ ಬಿಳಿಮಲೆ ಅಭಿಮತ
Last Updated 24 ಜುಲೈ 2021, 19:05 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ರಾಷ್ಟ್ರೀಯ ಭಾಷಾ ನೀತಿಯ ಅಗತ್ಯ ಇದೆ’ ಎಂದು ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಪ್ರಾದೇಶಿಕ ಅಸ್ಮಿತೆ’ ಎಂಬ ವಿಷಯದ ಕುರಿತ ವೆಬಿನಾರ್‌ನಲ್ಲಿ ಶನಿವಾರ ಮಾತನಾಡಿದ ಅವರು, ‘ಭಾರತದಲ್ಲಿ 19,569 ಭಾಷೆಗಳಿವೆ. ಅವುಗಳಲ್ಲಿ 22 ಭಾಷೆಗಳನ್ನು ಮಾತ್ರ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಅಂಗೀಕರಿಸಲಾಗಿದೆ. ಅವುಗಳಲ್ಲಿ ಉತ್ತರ ಭಾರತದ 18 ಭಾಷೆಗಳು ಮತ್ತು ದಕ್ಷಿಣ ಭಾರತದ ನಾಲ್ಕು (ಕನ್ನಡ, ತಮಿಳು, ತೆಲುಗು, ಮಲಯಾಳ) ಭಾಷೆಗಳಿವೆ’ ಎಂದು ಹೇಳಿದರು.

‘ಸದ್ಯ 99 ಭಾಷೆಗಳು ಅಂಗೀಕಾರಕ್ಕೆ ಕಾದಿವೆ. ಇನ್ನೂ ಶೇ 98ರಷ್ಟು ಭಾಷೆಗಳು ಸಂವಿಧಾನದ ಅಂಗೀಕಾರವನ್ನೇ ಪಡೆಯದೆ ಮೂಲೆಗುಂಪಾಗಿವೆ. ಈ ರೀತಿಯ ಭಾಷಾ ಅಸಮಾನತೆಗೆ ಹೊಸ ಶಿಕ್ಷಣ ನೀತಿಯಲ್ಲಿ ಏನು ಉತ್ತರವಿದೆ’ ಎಂದು ಪ್ರಶ್ನಿಸಿದರು.

‘ಈ ಅಸಮಾನತೆ ನಿವಾರಿಸ ಬೇಕೆಂದರೆ ಭಾಷಾ ಮಡಿವಂತಿಕೆ ಬಿಡಬೇಕಾಗುತ್ತದೆ. ಒಂದು ಭಾಷೆಯನ್ನು ಮೇಲೆತ್ತಲು ಉಳಿಸಲು ಉಳಿದ ಭಾಷೆಗಳನ್ನು ಕಡೆಗಣಿಸುವುದು ಭಾಷಾ ಅಸ್ಪೃಶ್ಯತೆ. ಈ ಆಧುನಿಕ ಅಸ್ಪೃಶ್ಯತೆ ನಾಶವಾಗಬೇಕೆಂದರೆ ಭಾರತಕ್ಕೊಂದು ರಾಷ್ಟ್ರೀಯ ಭಾಷಾ ನೀತಿ ಅತ್ಯಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಯಾವುದೇ ಭಾಷೆಯನ್ನೂ ಉಪಭಾಷೆ ಎನ್ನಲಾಗದು. ಯಾರಿಗೆ ಅದು ತಾಯಿ ನುಡಿ ಆಗಿರುತ್ತದೋ, ಅವರಿಗೆ ಅದೇ ಪ್ರಮುಖ ಭಾಷೆ. ಎಲ್ಲಾ ಭಾಷೆಗಳನ್ನೂ ಸಮಾನವಾಗಿ ಕಾಣುವುದೇ ನಿಜವಾದ ಅಸ್ಮಿತೆ’ ಎಂದರು.

‘ದೇಶದಲ್ಲಿ 19,569 ಭಾಷೆಗಳಿವೆ ಎಂದರೆ, ಅಷ್ಟೇ ಸಂಸ್ಕೃತಿಗಳಿವೆ ಎಂದರ್ಥ. ಭಾರತ ಉಳಿದಿರುವುದೇ ಬಹುತ್ವದ ತಳಹದಿಯಲ್ಲಿ. ಹೊಸ ನೀತಿಗಳಿಂದ ಬಹುತ್ವಕ್ಕೆ ಪೆಟ್ಟು ಬಿದ್ದರೆ ಪ್ರಾದೇಶಿಕ ಅಸ್ಮಿತೆ ಘಾಸಿಗೊಳ್ಳಲಿದೆ’ ಎಂದು ಎಚ್ಚರಿಸಿದರು.

‘ಹೊಸ ಶಿಕ್ಷಣ ನೀತಿಯು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. 12ನೇ ತರಗತಿ ನಂತರ ಒಂದು ವರ್ಷಕ್ಕೆ ಸರ್ಟಿಫಿಕೇಟ್ ಕೋರ್ಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣವನ್ನು ಈ ಸರ್ಟಿಫಿಕೇಟ್‌ ಕೋರ್ಸ್‌ ಹಂತಕ್ಕೇ ಸ್ಥಗಿತಗೊಳಿಸಿ, ಅವರಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾದರೆ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ’ ಎಂದು ಶಾಕಿರಾ ಖಾನಮ್ ಕಳವಳ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞರಾದ ಡಾ. ಪಿ.ಡಿ.ಶ್ರೀಶರ್, ಡಾ. ಮಲ್ಲಿಕಾರ್ಜುನ ಮೇತ್ರಿ, ನಾಗೇಂದ್ರಪ್ಪ ಔರಾದ, ಶಂಕರ ವಾಲೀಕರ, ಸಮುದಾಯ ಕರ್ನಾಟಕದ ಕೆ.ಎಸ್.ವಿಮಲಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT