ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಸಂರಕ್ಷಣೆಯ ಕಲಿಕೆ: ಅಡವಿ ಕುಸುಮಗಳ ಹಾದಿಗೆ ‘ವನ ಬೆಳಕು’

ಬುಡಕಟ್ಟು ಮಕ್ಕಳ ಲವಲವಿಕೆಗೆ ‘ಸಹ್ಯಾದ್ರಿ ಸಂಚಯ’ ತಂಡದ ಯತ್ನ
Last Updated 22 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಅಡಿಕೆ ತೋಟದ ನಡುವೆ ಸಾಲಾಗಿ ಕುಳಿತಿದ್ದ ಆ ಮಕ್ಕಳಿಗೆ, ‘ನಿಮಗೆ ತೋಚಿದ ಚಿತ್ರ ಬರೆಯಿರಿ..’ ಎಂದು ಸೂಚಿಸುತ್ತಿದ್ದಂತೆ, ಒಬ್ಬರು ಥಟ್ಟನೆ ‘ಹಾರ್ನ್‌ಬಿಲ್‌’ ಚಿತ್ರ ರಚಿಸಿದರೆ, ಇನ್ನೊಬ್ಬರು ನವಿಲು ಗರಿ ಬಿಚ್ಚಿ ಕುಳಿತಿರುವ ಚಿತ್ರ ಬಿಡಿಸಿದರು. ಸುತ್ತಲಿದ್ದ ಬಣ್ಣ ಬಣ್ಣದ ಕಾಗದದ ಚೂರುಗಳನ್ನು ಜೋಡಿಸಿಕೊಂಡು, ನವಿಲಿನ ಗರಿಯನ್ನು ಚಿತ್ರಿಸಿದರು. ಒಬ್ಬರು ಬಣ್ಣ ಬಣ್ಣದ ಚಿಟ್ಟೆಗಳ ಚಿತ್ರಗಳನ್ನು ಕತ್ತರಿಸಿ ವೃತ್ತಾಕಾರದಲ್ಲಿ ಜೋಡಿಸಿದರೆ, ಇನ್ನೊಬ್ಬರು ಹಳದಿ ಬಣ್ಣದ ಕಾಗದದಲ್ಲಿ ಮುಖವಾಡ ಮಾಡಿ ಸಂಭ್ರಮಿಸಿದರು..!

ಇದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅಡವಿಯಲ್ಲಿ ಬುಡಕಟ್ಟು ಮಕ್ಕಳಿಗಾಗಿ ಆಯೋಜಿಸಿದ್ದ ‘ವನ ಬೆಳಕು’ ಶಿಬಿರದಲ್ಲಿ ಕಂಡ ದೃಶ್ಯ.

ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿವೆ. ನಗರದ ಮಕ್ಕಳಿಗಾದರೂ ಆನ್‌ಲೈನ್ ತರಗತಿಗಳಿವೆ. ಆದರೆ, ಕಾಡಿನ ಮಧ್ಯೆ ಇರುವ ಬುಡಕಟ್ಟು ಜನರ ಮಕ್ಕಳಿಗೆ ಈ ಯಾವ ಭಾಗ್ಯವೂ ಇಲ್ಲ. ಸದಾ ಚೈತನ್ಯದ ಚಿಲುಮೆಯಂತಿದ್ದ ಮಕ್ಕಳು ಮಂಕಾಗಿದ್ದಾರೆ. ಇದನ್ನು ಅರಿತ ‘ಸಹ್ಯಾದ್ರಿ ಸಂಚಯ’ ತಂಡ, ಅಡವಿಯ ಮಕ್ಕಳಿಗಾಗಿ ‘ವನಬೆಳಕು’ ಕಾರ್ಯಕ್ರಮ ಆಯೋಜಿಸಿದೆ.

ಡಿ.3 ರಿಂದ ಫೆ.3ರವರೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಯಲ್ಲಾಪುರ, ಜೊಯಿಡಾ, ಅಣಶಿ, ಕದ್ರಾ, ಮುಂಡಗೋಡ, ಹಳಿಯಾಳ ಮುಂತಾದೆಡೆ ಈ ಕಾರ್ಯಕ್ರಮ ನಡೆಯುತ್ತಿದೆ. ‘ಸಹ್ಯಾದ್ರಿ ಸಂಚಯ’ದ ಸಂಚಾಲಕ ದಿನೇಶ ಹೊಳ್ಳ ಈ ಕಾರ್ಯಕ್ರಮದ ರೂವಾರಿ.

‘ವನ ಬೆಳಕು– ಅಡವಿ ಮಕ್ಕಳ ಸೃಜನ ವಿಕಸನ’ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಬಯಲಿನಲ್ಲಿ, ಕಾಡಿನ ಮೂಲೆಯಲ್ಲಿ, ಮನೆಯ ಜಗುಲಿಯಲ್ಲಿ, ಮರದ ನೆರಳಲ್ಲಿ, ಗದ್ದೆ ಬಯಲಿನಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಹಸ್ತಾಕ್ಷರ, ಕಾಗದಗಳಿಂದ ಮುಖವಾಡ ತಯಾರಿ, ಸುತ್ತಲು ಸಿಗುವ ಕಡ್ಡಿ, ಬೀಜ, ಎಲೆಗಳಿಂದ ಕರಕುಶಲ ವಸ್ತುಗಳ ತಯಾರಿ, ಕಲೆ, ನೃತ್ಯ, ಸಂಗೀತ, ಗಾಳಿಪಟ ತಯಾರಿ.. ಇಂಥ ಹಲವು ಚಟುವಟಿಕೆಗಳನ್ನು ಕಲಿಸುತ್ತಿದ್ದಾರೆ. ‘ಮಕ್ಕಳು ತಾವು ನೋಡಿದ ಪಕ್ಷಿ, ಪ್ರಾಣಿಗಳ ಚಿತ್ರವನ್ನು ಥಟ್ಟನೆ ಬರೆಯುತ್ತಾರೆ. ಅದು ಅವರೊಳಗಿನ ಸೃಜನಶೀಲತೆ. ಅದನ್ನು ನಾವು ಗುರುತಿಸಬೇಕು’ ಎನ್ನುತ್ತಾರೆ ದಿನೇಶ್.

ಪರಿಸರ ಪಾಠ: ‘ಮಕ್ಕಳಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಕೇಳಿ ಸಾಕಾಗಿದೆ. ಹೀಗೆ ಕಲಿಸುವುದರಿಂದ ಮಕ್ಕಳಿಗೂ ಪರಿಸರದ ಬಗ್ಗೆ ಮತ್ತಷ್ಟು ಆಪ್ತವಾಗಿ ಅರಿವಾಗುತ್ತದೆ. ಒಟ್ಟಾರೆ ಶಾಲೆ ಆರಂಭ ಆಗಲಿ, ಆಗದೇ ಇರಲಿ ಮಕ್ಕಳ ಸೃಜನಾತ್ಮಕ ಮನಸುಗಳಿಗೆ ಏನೂ ಕೊರತೆ ಆಗದೇ ಮತ್ತೆ ಅದೇ ರೀತಿಯ ಒರತೆ, ಚಿಮ್ಮುವ ಜೀವನೋತ್ಸಾಹ ಬೆಳಗಬೇಕು’ ಎನ್ನುತ್ತಾರೆ ದಿನೇಶ್ ಹೊಳ್ಳ.

‘ಕಾರ್ಯಕ್ರಮದಲ್ಲಿ ಕೈಬರಹದ ಕಲೆಯನ್ನು ಅತ್ಯಂತ ಸರಳವಾಗಿ ಹೇಳಿಕೊಟ್ಟರು ದಿನೇಶ್. ಈ ತಂತ್ರವು ಕೇವಲ ಕನ್ನಡಕ್ಕಷ್ಟೇ ಸೀಮಿತವಲ್ಲ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನಾದರೂ ಸ್ಫುಟವಾಗಿ ಬರೆಯುವ ತಂತ್ರವನ್ನು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಮರದ ನೆರಳಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಕುಳಿತಲ್ಲಿಂದ ಏಳಲಿಲ್ಲ’ ಎಂದು ಸಂತಸ ವ್ಯಕ್ತಪಡಿಸಿದವರು ಯಲ್ಲಾಪುರ ತಾಲ್ಲೂಕಿನ ನಂದೊಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಭಾಸ್ಕರ ನಾಯ್ಕ.

‘ಕೈ ಬರಹ ತರಬೇತಿ ಬಹಳ ಇಷ್ಟ ಆಯ್ತು. ನನಗೆ ಬಹಳ ಪ್ರಯೋಜನವಾಗುತ್ತದೆ’ ಎಂದ ವರು ನಂದೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಭಾವನಾ ನಾಯ್ಕ. ‘ಶಿಬಿರದಲ್ಲಿ ಮುಖವಾಡಗಳನ್ನು ಮಾಡುವುದನ್ನು ಕಲಿಸಿದರು. ನಾನೀಗ ಅದನ್ನು ಮನೆಯಲ್ಲೂ ಮುಂದುವರಿಸಿದ್ದೇನೆ’ ಎಂದಿದ್ದು ಏಳನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಆಚಾರಿ.

ದಾನಿಗಳ ನೆರವು: ಈ ಶಿಬಿರಕ್ಕೆ ಪ್ರಾಯೋಜಕರಾಗಿ ಬೆಂಬಲ ನೀಡಿದವರು ಯಲ್ಲಾಪುರ ಮೂಲದ, ಈಗ ಅಮೆರಿಕದಲ್ಲಿ ವೈದ್ಯರಾಗಿರುವ ಪಣಂಬೂರು ವಾಸುದೇವ ಐತಾಳ್. ಇದರ ಜೊತೆಗೆ ಕಾಡಿನ ಮಕ್ಕಳಿಗೆ ಪೀಠೋಪಕರಣಗಳನ್ನು ನೀಡಿ ಸಹಕರಿಸಿದವರು ಮಂಗಳೂರಿನ ಎಂಸಿಎಫ್ ಕಂಪನಿ. ಉಳಿದಂತೆ, ಶಿಬಿರಕ್ಕೆ ಅರವಿಂದ ಕುಡ್ಲ, ಭವನ್ ಪೀ ಜೀ, ಸುಧಾ ನಾಯಕ್, ಮಮತಾ ಕೆ.ಎಸ್, ಯೋಗೀಶ್ ನಾಯಕ್, ನಿಖಿತಾಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದಾರೆ.

‘ವನ ಬೆಳಕಿನಂತಹ ಶಿಬಿರಗಳಿಂದ ಮಕ್ಕಳು ಅಡವಿಯ ಮತ್ತು ಅಲ್ಲಿನ ನಿವಾಸಿಗಳ ಸಮಸ್ಯೆಗೆ ಕಿವಿಯಾಗುವುದರ ಜೊತೆಗೆ, ಪ್ರಕೃತಿ ಸಂರಕ್ಷಣೆಗೆ ಕೈ ಜೋಡಿಸುವುದನ್ನು ಕಲಿಯುತ್ತಾರೆ. ಆ ಕಾರಣಕ್ಕೆ ಶಿಬಿರವನ್ನು ಕಾಡಿನ ನಡುವೆ, ಮರಗಿಡಗಳ ಕೆಳಗೆ ಮಾಡುತ್ತಿದ್ದೇವೆ. ಇನ್ನಷ್ಟು ಸೂಕ್ತ ಪ್ರಾಯೋಜಕರು ಲಭಿಸಿದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು’ ಎನ್ನುತ್ತಾರೆ ದಿನೇಶ್ ಹೊಳ್ಳ.

**

ಈಗಾಗಲೇ 12 ಕಡೆಗಳಲ್ಲಿ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಜ.3ರಿಂದ ಮತ್ತೆ ಜೊಯಿಡಾ, ದಾಂಡೇಲಿ, ಅಣಶಿ, ಹಳಿಯಾಳ ಮುಂತಾದ ಕಡೆ ಕಾರ್ಯಕ್ರಮಗಳು ನಡೆಯಲಿವೆ.
-ದಿನೇಶ್ ಹೊಳ್ಳ, ಸಂಚಾಲಕ, ಸಹ್ಯಾದ್ರಿ ಸಂಚಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT