ಗುರುವಾರ , ಏಪ್ರಿಲ್ 15, 2021
23 °C
6 ತಿಂಗಳಲ್ಲಿ ಬೇಡಿಕೆ ಈಡೇರದಿದ್ದರೆ 20 ಲಕ್ಷ ಜನ ಸೇರಿಸಿ ಸಮಾವೇಶ

ಪಂಚಮಸಾಲಿ ಶ್ರೀ ಧರಣಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸುದೀರ್ಘ 64 ದಿನಗಳ ಹೋರಾಟಕ್ಕೆ ಸೋಮವಾರ ತೆರೆ ಬಿದ್ದಿದೆ.

ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅಧಿವೇಶನದಲ್ಲಿ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂಬ ವಿಶ್ವಾಸದಿಂದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿವೇಶನದಲ್ಲಿಯೇ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಇಂತಿಷ್ಟು ದಿನಗಳಲ್ಲಿ ಘೋಷಿಸಲಾಗುವುದು ಎಂಬ ಮಾತನ್ನಾದರೂ ನೀಡಬೇಕು ಅಥವಾ ಆಗುವುದಿಲ್ಲ ಎಂದಾದರೂ ತಿಳಿಸಬೇಕು ಎಂಬ ಷರತ್ತನ್ನು ಸರ್ಕಾರದ ಮುಂದಿಟ್ಟಿದ್ದೆವು. ಆರು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಹೇಳಿದೆ. ಈ ಅವಧಿಯೊಳಗೆ ಬೇಡಿಕೆ ಈಡೇರದಿದ್ದರೆ 6 ತಿಂಗಳ ನಂತರ ಬೆಂಗಳೂರಿನಲ್ಲಿ 20 ಲಕ್ಷ ಜನರನ್ನು ಸೇರಿಸಿ ಜಾಗತಿಕ ಪಂಚಮಸಾಲಿ ಸಮಾವೇಶ ನಡೆಸಲಾಗುವುದು. ನೇರವಾಗಿ ಪ್ರಧಾನಿ ಮೋದಿಯವರಿಗೇ ಮನವಿ  ಸಲ್ಲಿಸಲಾಗುವುದು’ ಎಂದೂ ಅವರು ಹೇಳಿದರು.

 ‘ಅಧಿವೇಶನದಲ್ಲಿಯೇ ಸ್ಪಷ್ಟ ಭರವಸೆ ಸಿಕ್ಕಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರಥಮ ಜಯ. ಮುಖ್ಯಮಂತ್ರಿಯವರ ಮನ ಒಲಿಸುವಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ ಯಶಸ್ವಿಯಾಗಿದ್ದಾರೆ. ಸಂಘ ಪರಿವಾರದವರಿಗೂ ಶಾಸಕ ಅರವಿಂದ ಬೆಲ್ಲದ ಮನವೊಲಿಸಿದ್ದಾರೆ. ಇವರೆಲ್ಲ ಸೇರಿದಂತೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಹೇಳುತ್ತೇನೆ’ ಎಂದರು.

ಧರಣಿ ನಡೆಯುತ್ತಿದ್ದ ಸ್ವಾತಂತ್ರ್ಯ ಉದ್ಯಾನಕ್ಕೆ ಸಚಿವ ಸಿ.ಸಿ. ಪಾಟೀಲ, ಶಾಸಕರಾದ ಯತ್ನಾಳ, ರೇಣುಕಾಚಾರ್ಯ, ಸಿದ್ದು ಸವದಿ, ಮಹೇಶ ಕುಮಠಳ್ಳಿ, ಅರುಣ್‌ ಪೂಜಾರಿ ಭೇಟಿ ನೀಡಿ ಧರಣಿ ಕೈಬಿಡುವಂತೆ ಸ್ವಾಮೀಜಿಯವರಿಗೆ ಮನವಿ ಮಾಡಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಇದ್ದರು.

ಆರು ತಿಂಗಳಲ್ಲಿ ವರದಿ: ಬಿಎಸ್‌ವೈ

ಬೆಂಗಳೂರು: ‘ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸುವ ಸಂಬಂಧ ಅಧ್ಯಯನ ನಡೆಸಲು ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಅಡಿ ನೇತೃತ್ವದ ಸಮಿತಿ ಹಾಗೂ ಹಿಂದುಳಿದ ವರ್ಗಗಳ ಆಯೋಗವು ಆರು ತಿಂಗಳಲ್ಲಿ ವರದಿ ಸಲ್ಲಿಸಲಿವೆ. ಆಗ ಸಮುದಾಯದ ಬೇಡಿಕೆಗೆ ಸಕಾರಾತ್ಮಕ ಉತ್ತರ ಸಿಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್‌ ಅವರು ಮೀಸಲಾತಿ ವಿಷಯ  ಪ್ರಸ್ತಾಪಿಸಿದರು. ಆಗ ಯಡಿಯೂರಪ್ಪ, ‘ಬಸವ ಮೃತ್ಯುಂಜಯ ಸ್ವಾಮೀಜಿ ಅವರು ಉಪವಾಸ ಸತ್ಯಾಗ್ರಹ ಕೈ ಬಿಡಬೇಕು‘ ಎಂದೂ ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು