ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆ: ‘ಕೈ’ ನಾಯಕರ ಜತೆ ಸುರ್ಜೇವಾಲ ಚರ್ಚೆ

ಬೆಂಗಳೂರು: ಮುಂಬರುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಪಕ್ಷದ ನಾಯಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬುಧವಾರ ಸರಣಿ ಸಭೆ ನಡೆಸಿದರು.
ಗುರುವಾರ ಕೂಡಾ ಪ್ರಮುಖ ನಾಯಕರ ಜೊತೆ ಅವರು ಸಭೆ ನಡೆಸಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಶಾಸಕರಾದ ಕೆ.ಜೆ. ಜಾರ್ಜ್, ಎಂ. ಕೃಷ್ಣಪ್ಪ, ಎನ್.ಎ. ಹ್ಯಾರಿಸ್, ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು ಸಭೆಯಲ್ಲಿದ್ದರು.
ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಸಭೆಯ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ‘ಸುರ್ಜೇವಾಲ ಅವರು ಪಕ್ಷ ಸಂಘಟನೆ ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆ ಬಗ್ಗೆ ವಿಶೇಷವಾಗಿ ಗಮನಹರಿಸಿ ಸಭೆ ನಡೆಸಿದ್ದಾರೆ. ಬಿಬಿಎಂಪಿ ಚುನಾವಣೆ ಎದುರಾಗುವ ಮುನ್ನವೇ ಪಕ್ಷವನ್ನು ಸಂಘಟಿಸುವ ವಿಚಾರವಾಗಿ ಚರ್ಚಿಸಿದ್ದಾರೆ’ ಎಂದರು.
‘ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು ಹಾಗೂ ಸೋತ ಅಭ್ಯರ್ಥಿಗಳ ಜೊತೆ ವೈಯಕ್ತಿಕವಾಗಿ ಚರ್ಚಿಸಿದ್ದಾರೆ. ಪ್ರತಿಯೊಬ್ಬರಿಗೂ ಹತ್ತು ನಿಮಿಷಗಳ ಕಾಲಾವಕಾಶ ನೀಡಿದ್ದಾರೆ’ ಎಂದರು.
‘ಬಿಜೆಪಿಯವರು ಸರದಿಯಲ್ಲಿದ್ದಾರೆ’
‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲಾ ರಂಗಗಳಲ್ಲೂ ವಿಫಲವಾಗಿವೆ. ನಾಯಕರು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆಂದು ಅವರು ಹೇಳಿದ್ದಾರೆ. ಕಟೀಲ್‌ಗೆ ಸುಳ್ಳು ಹೇಳುವ ಚಾಳಿಯಿದೆ. ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರದಿಂದ ಕೆಲವರು ಬಿಜೆಪಿಗೆ ಹೋಗಿದ್ದು, ಅವರು ಈಗಾಗಲೇ ಪಶ್ಚಾತ್ತಾಪ ಪಡುತ್ತಿದ್ದಾರೆ’ ಎಂದರು.
‘ಇಲ್ಲಿಂದ (ಕಾಂಗ್ರೆಸ್) ಯಾರೂ ಅಲ್ಲಿಗೆ ಹೋಗಲ್ಲ. ಅಲ್ಲಿಂದ (ಬಿಜೆಪಿಯಿಂದ) ಬರಲು ಸರದಿಯಲ್ಲಿದ್ದಾರೆ. ಸಮಯ ಬಂದಾಗ ಅದನ್ನು ಹೇಳುತ್ತೇವೆ. ಬಿಜೆಪಿಯಲ್ಲಿರುವವರೇ ಭ್ರಮನಿರಸನಗೊಂಡಿದ್ದು, ಇಲ್ಲಿಂದ ಹೋದವರಷ್ಟೇ ಅಲ್ಲ, ಅಲ್ಲಿರುವವರೂ ಬರಲು ಸಿದ್ಧವಾಗಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.