ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ‘ಅಕ್ರಮದ ನಶೆ’ ಇಳಿಸಿದ ಲಾಕ್‌ಡೌನ್!

ವಾಹನ, ರೈಲು ಸಂಚಾರ ನಿರ್ಬಂಧದಿಂದ ಗೋವಾ ಮದ್ಯ ಅಕ್ರಮ ಸಾಗಣೆಗೆ ಕಡಿವಾಣ
Last Updated 1 ಸೆಪ್ಟೆಂಬರ್ 2020, 5:00 IST
ಅಕ್ಷರ ಗಾತ್ರ

ಕಾರವಾರ: ‘ಮನೆಯಲ್ಲೇ ಕೂತ್ಕೊಂಡು ಕುಡೀಬೇಕಂತೆ.. ಅದೆಂಥದ್ದು.. ಕಿಕ್ ಏರೋದೇ ಇಲ್ಲ! ಅತ್ತ ಪೋಳೆಂ ಹೋಗ್ಲಿಕ್ಕೂ ಆಗ್ತಿಲ್ಲ. ಭಾರಿ ಕಷ್ಟ ಆಗದೆ..!’ ಇದು ಪಾನಪ್ರಿಯನೊಬ್ಬನ ವ್ಯಥೆ.

‘ಹೌದೋ ಮಾರಾಯ! ಚೆಕ್‌ಪೋಸ್ಟಲ್ಲಿ ಒಂದು ಬಾಟ್ಲಿನೂ ತರ್ಲಿಕ್ಕೆ ಆಗ್ತಿಲ್ಲ. ಕೋವಿಡ್ ನೆಪದಲ್ಲಿ ಹೋಗ್ಲಿಕ್ಕೇ ಬಿಡ್ತಿಲ್ಲ. ಈ ಸೀಕು (ಸೋಂಕು) ಯಾವಾಗ ಹೋಗ್ತದೋ..’ ಇದು ಅವನ ಗೆಳೆಯನ ಸಮ್ಮತಿ ಸೂಚಕ ಮಾತು.

ಕಾರವಾರ, ಅಂಕೋಲಾ, ಕುಮಟಾ ಭಾಗಕ್ಕೆ ನೆರೆಯ ಗೋವಾ ರಾಜ್ಯದಿಂದ ಅಕ್ರಮವಾಗಿ ಅತಿ ಹೆಚ್ಚು ಮದ್ಯ ಪೂರೈಕೆಯಾಗುತ್ತದೆ. ಕೊರೊನಾ ವೈರಸ್ ಜನರಿಂದ ಜನರಿಗೆ ಹರಡುವುದನ್ನು ತಡೆಯುವ ಕ್ರಮದ ಅಂಗವಾಗಿ, ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಅಂತರರಾಜ್ಯ ಗಡಿಯನ್ನು ಮಾರ್ಚ್‌ನಿಂದ ಮೇವರೆಗೆ ಮುಚ್ಚಲಾಗಿತ್ತು. ಬಳಿಕ ಕರ್ನಾಟಕವು ಗಡಿಯನ್ನು ತೆರೆದರೂ ಗೋವಾ ಒಂದಷ್ಟು ನಿರ್ಬಂಧಗಳನ್ನು ಹೇರಿ ಸೀಮಿತ ಪ್ರಯಾಣಕ್ಕೆ ಅವಕಾಶ ನೀಡಿತ್ತು. ಇದರಿಂದ ವಾಹನಗಳ ಸಂಚಾರ ಅತ್ಯಂತ ಕಡಿಮೆಯಾಗಿತ್ತು. ಇದರಿಂದ ಮದ್ಯದ ಅಕ್ರಮ ಸಾಗಣೆಯ ನಿಯಂತ್ರಣವೂ ಸಾಧ್ಯವಾಯಿತು.

ರೈಲುಗಳ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಅಧಿಕ ಪ್ರಮಾಣದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಣೆಯಾಗುತ್ತದೆ. ಅಂಕೋಲಾ, ಕಾರವಾರದ ಕಡೆಯಿಂದ ಗೋವಾದತ್ತ ರೈಲುಗಳಲ್ಲಿ ಸಾಗುವ ಕೆಲವರು, ಮದ್ಯ ಖರೀದಿಸಿ ಚೀಲಗಳಲ್ಲಿ ತುಂಬಿಕೊಂಡು ರೈಲನ್ನೇರುತ್ತಾರೆ. ಅವರು ಬಹಳ ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿರುವ ಕಾರಣ ರೈಲ್ವೆ ಅಧಿಕಾರಿಗಳ, ಪೊಲೀಸರ ಕಣ್ಣು ತಪ್ಪಿಸುವುದರಲ್ಲೂ ನಿಸ್ಸೀಮರು!

ರೈಲು ಬೋಗಿಯ ಶೌಚಾಲಯ, ಸೀಟಿನ ಕೆಳಗೆ ಬಟ್ಟೆ ತುಂಬಿದ ಚೀಲಗಳಲ್ಲಿ ಸಾರಾಯಿ, ಫೆನ್ನಿ, ಬಿಯರ್‌ ಬಾಟಲಿಗಳನ್ನು ಹುದುಗಿಸಿಡುತ್ತಾರೆ. ಕಾರವಾರ ತಾಲ್ಲೂಕಿನ ಅಸ್ನೋಟಿ, ಕಾರವಾರ ರೈಲು ನಿಲ್ದಾಣಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ರೈಲು ನಿಧಾನವಾಗಿ ಬರುತ್ತಿದ್ದಂತೆ, ಬಾಟಲಿ ತುಂಬಿದ ಚೀಲಗಳನ್ನು ಹಳಿಯ ಸಮೀಪದ ಪೊದೆಗೆ ಎಸೆಯುತ್ತಾರೆ. ಇದರಿಂದ ಬಾಟಲಿಯೂ ಒಡೆಯುವುದಿಲ್ಲ, ಜೊತೆಗೇ ಪೊಲೀಸರಿಗೂ ಗೊತ್ತಾಗುವುದಿಲ್ಲ ಎಂಬುದು ಅವರ ಲೆಕ್ಕಾಚಾರ.

ಮದ್ಯದ ಬಾಟಲಿಯ ಸಾಗಣೆಯ ಈ ಪರಿಯನ್ನು ಅರಿತುಕೊಂಡ ಅಬಕಾರಿ ಪೊಲೀಸರು, ಗೋವಾ ಕಡೆಯಿಂದ ಪ್ಯಾಸೆಂಜರ್‌ ರೈಲು ಬಂದ ತಕ್ಷಣ ರೈಲು ನಿಲ್ದಾಣದ ಸಮೀಪ ಕಾರ್ಯಾಚರಣೆ ಮಾಡುತ್ತಾರೆ. ಇದರಿಂದ ಹಲವು ಬಾರಿ ಬಾಟಲಿಗಳು ಪತ್ತೆಯಾಗಿವೆ. ಈ ನಡುವೆ, ಕೋವಿಡ್ ಕಾರಣದಿಂದ ಕೇಂದ್ರ ಸರ್ಕಾರವು ರೈಲುಗಳ ಸಂಚಾರವನ್ನು ಕೂಡ ನಿಲ್ಲಿಸಿದ್ದು, ಈ ದಂಧೆಗೆ ದೊಡ್ಡ ‘ಹೊಡೆತ’ ಕೊಟ್ಟಿತು.

ಗೋವಾದಿಂದ ಕಾರವಾರದತ್ತ ‘ಎಣ್ಣೆ’ಯನ್ನು ಕಳ್ಳ ಮಾರ್ಗದಲ್ಲಿ ತರುವವರು ಸಮುದ್ರ ಮಾರ್ಗವನ್ನೂ ಬಳಸುತ್ತಾರೆ. ‍ಗೋವಾದ ಪೋಳೆಂ, ಕಾಣಕೋಣ ಮುಂತಾದ ಕಡೆಗಳಿಂದ ‘ಎಣ್ಣೆ ಬಾಟಲಿ’ಗಳನ್ನು ಪಾತಿ ದೋಣಿಗಳಲ್ಲಿ ತುಂಬಿಕೊಂಡು ಬರುವುದು ಸಾಮಾನ್ಯವಾಗಿದೆ. ಬೆಳಗಿನ ಜಾವಕ್ಕೂ ಮೊದಲೇ ಅವುಗಳ ರವಾನೆ ಆಗಿರುವ ಕಾರಣ ಹಲವು ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬೀಳುವುದೇ ಇಲ್ಲ!

ಈಗ ಮಳೆಗಾಲವಾಗಿರುವ ಕಾರಣ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತವೆ. ಹಾಗಾಗಿ ಮೀನುಗಾರಿಕಾ ದೋಣಿಗಳು ಮಾತ್ರ ಸಮುದ್ರದಲ್ಲಿ ಹೆಚ್ಚು ದೂರ ಸಾಗಬಲ್ಲವು. ಸಣ್ಣ ದೋಣಿಗಳಲ್ಲಿ ಸಾಗುವುದು ಅಪಾಯಕಾರಿ. ಆದ್ದರಿಂದ ಈ ಮಾರ್ಗದಲ್ಲೂ ಮದ್ಯದ ಬಾಟಲಿಗಳ ಪೂರೈಕೆ ದಂಧೆಕೋರರಿಗೆ ಸಾಧ್ಯವಾಗುತ್ತಿಲ್ಲ.

ಕಾರವಾರ ತಾಲ್ಲೂಕಿನ ಮೈಂಗಿಣಿ, ಅಸ್ನೋಟಿ ಮುಂತಾದ ಕಡೆಗಳಲ್ಲಿ ಗೋವಾದಿಂದ ಬರುವ ಕಾಲುದಾರಿಗಳಲ್ಲಿತಲೆಹೊರೆಯಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸುವವರಿದ್ದರು. ಅವರಲ್ಲಿ ಕೆಲವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಮಟ್ಟ ಹಾಕಿದ್ದರಿಂದ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ನಿಯಂತ್ರಣದಲ್ಲಿದೆ. ಆದರೂ ಆಗಾಗ ಸಣ್ಣ ಪ್ರಮಾಣದಲ್ಲಿ ಬಾಟಲಿಗಳು ಈ ಪ್ರದೇಶದ ಸುತ್ತಮುತ್ತ ಅಬಕಾರಿ ಅಧಿಕಾರಿಗಳು ವಶಕ್ಕೆ ಸಿಗುತ್ತವೆ.

‘ಜಿಲ್ಲೆಗೆ ಗೋವಾ ರಾಜ್ಯದ ಅಕ್ರಮ ಮದ್ಯದ ಪೂರೈಕೆಯನ್ನು ತಡೆಯುವುದು ದೊಡ್ಡ ಸವಾಲು. ರಾಜ್ಯದ ಗಡಿಯುದ್ದಕ್ಕೂ ದಟ್ಟಾರಣ್ಯವಿದ್ದು, ಒಂದಲ್ಲ ಒಂದು ಕಳ್ಳ ದಾರಿಯಿಂದ ಸಾಗಣೆಯಾಗುತ್ತದೆ. ಆದರೂ ಮಾಹಿತಿ ಸಿಕ್ಕಿದ ಕೂಡಲೇ ದಾಳಿ ಮಾಡುತ್ತೇವೆ. ಅವರ ಸಂಪರ್ಕಜಾಲ ಬಹಳ ದೊಡ್ಡದಿರುತ್ತದೆ. ಹಾಗಾಗಿ ಹಲವು ಸಂದರ್ಭಗಳಲ್ಲಿ ಇಲಾಖೆಯ ಅಧಿಕಾರಿಗಳು ಬರುತ್ತಿರುವ ಮಾಹಿತಿ ದಂಧೆಕೋರರಿಗೆ ಮೊದಲೇ ತಿಳಿಯುತ್ತದೆ. ತಮ್ಮ ವಾಹನ ಹಾಗೂ ಮದ್ಯದ ಬಾಟಲಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗುತ್ತಾರೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಅತ್ಯಂತ ಕಳಪೆ ಗುಣಮಟ್ಟದ ಗೋವಾ ಸಾರಾಯಿಯನ್ನು ಜನ ಸೇವಿಸುತ್ತಾರೆ. ರಾಸಾಯನಿಕ ಅಂಶಗಳು ಹೆಚ್ಚಿರುವ ಅದನ್ನು ನಿರಂತರ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆ, ಕಿಡ್ನಿಗೆ ಹಾನಿಯಾಗುವುದು ಖಚಿತ. ಆದರೂ ಕ್ಷಣಿಕ ಸುಖಕ್ಕಾಗಿ ತಮ್ಮ ಆರೋಗ್ಯವನ್ನೇ ಬಲಿ ಕೊಡುವುದು ವಿಪರ್ಯಾಸ’ ಎನ್ನುತ್ತಾರೆ ಅವರು.

ಉತ್ತರ ಕನ್ನಡದಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತರ ಕಾಯಂ ಹುದ್ದೆ ಸದ್ಯಕ್ಕೆ ಖಾಲಿಯಿದ್ದು, ಹುಬ್ಬಳ್ಳಿಯವರೇ ಪ್ರಭಾರದಲ್ಲಿದ್ದಾರೆ. ಭೌಗೋಳಿಕವಾಗಿ ದೊಡ್ಡದಾಗಿರುವ ಈ ಜಿಲ್ಲೆಗೆ ಸರ್ಕಾರ ಶೀಘ್ರವೇ ಪೂರ್ಣಾವಧಿಯ ಅಧಿಕಾರಿಗಳನ್ನು ನೇಮಿಸಬೇಕು. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಹಲವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT