ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆ: ರಾಜ್ಯದಲ್ಲಿ ಗರಿಗೆದರಿದ ಆರ್ಥಿಕ ಚಟುವಟಿಕೆ

ಬೆಂಗಳೂರು: ರಾಜ್ಯದಲ್ಲಿ ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದ್ದು, ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಪುನರಾರಂಭಗೊಂಡಿವೆ. ದೇವಸ್ಥಾನ, ಮಾಲ್‌ಗಳ ಬಾಗಿಲು ತೆರೆದ ಮೊದಲ ದಿನವೇ ಜನಸಂದಣಿ ಕಂಡುಬಂದಿದೆ.
ಕೋವಿಡ್ ಎರಡನೇ ಅಲೆ ಬಿರುಸಾಗಿದ್ದರಿಂದ ಮೇ 10ರಿಂದ ರಾಜ್ಯದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಸೋಮವಾರದಿಂದ ಸಾರ್ವಜನಿಕ ಸಾರಿಗೆ, ವಾಣಿಜ್ಯ ವಹಿವಾಟು ಬಹುತೇಕ ಯಥಾಸ್ಥಿತಿಗೆ ಬಂದಿದೆ. ಲಾಕ್‌ಡೌನ್ ಸಡಿಲಿಕೆಯಾದ ಕಾರಣದಿಂದ ಜನರ ಓಡಾಟವೂ ಹೆಚ್ಚಿದ್ದು, ಪ್ರಮುಖ ನಗರಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ.
ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಮುಂದುವರಿದಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲೂ, ಸಾರ್ವಜನಿಕ ಸಾರಿಗೆ ಸೇವೆ ಪುನರಾರಂಭವಾಗಿದೆ. ಸರ್ಕಾರಿ ಸಾರಿಗೆ ನಿಗಮಗಳು ಮತ್ತು ಖಾಸಗಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದವು. ಬೆಂಗಳೂರಿನಲ್ಲಿ ಮೆಟ್ರೊ ರೈಲು ಸಂಚಾರದಲ್ಲೂ ಹೆಚ್ಚಳವಾಗಿದ್ದು, ಅಸಂಖ್ಯ ಮಂದಿ ಪ್ರಯಾಣಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಒಂದರಲ್ಲೇ ಬಸ್‌ಗಳು 4,500 ಟ್ರಿಪ್ ನಡೆಸಿವೆ. ಇತರ ಮೂರು ನಿಗಮಗಳೂ ಸೇರಿದಂತೆ 7,000 ದಿಂದ 8,000 ಗಳಷ್ಟು ಟ್ರಿಪ್ ಬಸ್ ಸಂಚಾರ ನಡೆದಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಮಾರುಕಟ್ಟೆಗಳಲ್ಲೂ ಜನಸಂದಣಿ ಜಾಸ್ತಿ ಇತ್ತು. ಹಲವೆಡೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ಸೋಮವಾರದಿಂದ ಬಾಗಿಲು ತೆರೆದಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಮಾರಲು ಅತ್ತ ಹೆಜ್ಜೆ ಹಾಕಿದ್ದರು. ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಚಟುವಟಿಕೆ ಕಂಡುಬಂದಿದೆ.
ದೇವಸ್ಥಾನಗಳಲ್ಲಿ ದಟ್ಟಣೆ: ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಸಾರ್ವಜನಿಕರ ಪ್ರವೇಶ, ದರ್ಶನ ಮತ್ತು ಪ್ರಾರ್ಥನೆ ಸಲ್ಲಿಕೆಗೆ ಅವಕಾಶ ದೊರೆತಿರುವುದರಿಂದ ಎಲ್ಲೆಡೆ ಧಾರ್ಮಿಕ ಮಂದಿರಗಳಲ್ಲಿ ಜನದಟ್ಟಣೆ ಇತ್ತು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಘಾಟಿ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಜನದಟ್ಟಣೆ ಇತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.