ಶುಕ್ರವಾರ, ಜನವರಿ 27, 2023
25 °C

ಮಂಗಳೂರು ಸ್ಫೋಟ ಪ್ರಕರಣ: ಎನ್ಐಎಗೆ ಹಸ್ತಾಂತರಿಸಿ ಕೇಂದ್ರ ಗೃಹ ಇಲಾಖೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಗರೋಡಿಯಲ್ಲಿ ನ.19ರಂದು ಆಟೊರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಸೂಚಿಸಿದೆ.

ಕೇಂದ್ರ ಗೃಹಸಚಿವಾಲಯದ ಭಯೋತ್ಪಾದನೆ ಹಾಗೂ ಉಗ್ರಗಾಮಿ ಚಟುವಟಿಕೆ ಪ್ರತಿರೋಧ ವಿಭಾಗವು ಈ ಕುರಿತು ಬುಧವಾರ ಆದೇಶ ಹೊರಡಿಸಿದೆ. 

‘ಕುಕ್ಕರ್‌ ಬಾಂಬ್ ಸ್ಫೋಟದ ಬಗ್ಗೆ ಆಟೊರಿಕ್ಷಾ ಚಾಲಕ ಕೆ.ಪುರುಷೋತ್ತಮ ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಮಂಗಳೂರಿನ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ 1908ರ ಸ್ಫೋಟಕ ಸಾಮಗ್ರಿಗಳ ಕಾಯ್ದೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 ಬಿ ಮತ್ತು 307ರ ಅಡಿ ಎಫ್‌ಐಆರ್‌ ದಾಖಲಾಗಿದೆ. ಆರೋಪಿ,  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರಿಕ್‌ ಹಾಗೂ ಆಟೊರಿಕ್ಷಾ ಚಾಲಕ ಗಾಯಗೊಂಡಿದ್ದಾರೆ.’

‘ಈ ಸ್ಫೋಟದ ಸ್ಥಳದಲ್ಲಿದ್ದ 5 ಲೀ ಸಾಮರ್ಥ್ಯದ ಪ್ರಷರ್‌ ಕುಕ್ಕರ್‌,  9 ವೋಲ್ಟ್‌ ಸಾಮರ್ಥ್ಯದ ಮೂರು ಬ್ಯಾಟರಿಗಳು, ಹಾನಿಗೊಂಡ ಸರ್ಕ್ಯೂಟ್‌ ಹಾಗೂ  ಸುಧಾರಿತ ಸ್ಫೋಟ ಸಾಧನ (ಐಇಡಿ) ತಯಾರಿಸಲು ಬಳಸುವ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಮೈಸೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಯಿಂದ ಸುಧಾರಿತ ಸ್ಫೋಟ ಸಾಧನ ತಯಾರಿಸಲು ಬಳಸುವ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.’

‘ಇದು 2008ರ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ಬರುವ ಅನುಸೂಚಿತ ಪ್ರಕರಣ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ಗಂಭೀರತೆ ಹಾಗೂ ಇದರಿಂದ ರಾಷ್ಟ್ರೀಯ ಭದ್ರತೆಯ ಮೇಲಾಗುವ ಪರಿಣಾಮಗಳನ್ನು ಆಧರಿಸಿ ಹೇಳುವುದಾದರೆ ರಾಷ್ಟ್ರೀಯ ತನಿಖಾ ಸಂಸ್ಥೆಯೇ ಇದರ ತನಿಖೆ ನಡೆಸುವ ಅಗತ್ಯ ಇದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಳ್ಳಬೇಕು’ ಎಂದು  ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ವಿಪುಲ್‌ ಅಲೋಕ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು