ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಾ ಪ್ರಾಧಿಕಾರ: ಆಕ್ರೋಶ

ವೀರಶೈವ– ಲಿಂಗಾಯತ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಆದೇಶ
Last Updated 17 ನವೆಂಬರ್ 2020, 20:26 IST
ಅಕ್ಷರ ಗಾತ್ರ
ADVERTISEMENT
"ಮಾದಾರ ಚನ್ನಯ್ಯ ಸ್ವಾಮೀಜಿ"
"ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ"
"ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ"
"ಮಾತೆ ಗಂಗಾದೇವಿ"
"ಬಸವಜಯಮೃತ್ಯುಂಜಯ ಸ್ವಾಮೀಜಿ"

ಬೆಂಗಳೂರು: ವಿವಿಧ ಸಮುದಾಯಗಳನ್ನು ಒಲಿಸಿಕೊಂಡು ಉಪಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದ ಬಿಜೆಪಿ ಸರ್ಕಾರ ಹೊಸದಾಗಿ ಇನ್ನೆರಡು ಸಮುದಾಯಗಳಿಗೆ ಅಭಿವೃದ್ಧಿ ಪ್ರಾಧಿಕಾರ/ನಿಗಮ ಸ್ಥಾಪಿಸುವುದಾಗಿ ಆದೇಶ ಹೊರಡಿಸಿ ಈಗ ಇಕ್ಕಟ್ಟಿಗೆ ಸಿಲುಕಿದೆ.

ಕೆಲವು ದಿನಗಳ ಹಿಂದೆ ಮರಾಠ ಸಮುದಾಯಕ್ಕಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯನ್ನು ಘೋಷಿಸಿದ್ದ ಮುಖ್ಯಮಂತ್ರಿಯವರ ನಡೆಗೆ ರಾಜ್ಯದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ವೀರಶೈವ–ಲಿಂಗಾಯತರನ್ನು ಒಲಿಸಿಕೊಳ್ಳಲು ಮಂಗಳವಾರ ವೀರಶೈವ–ಲಿಂಗಾಯತ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆಯನ್ನೂ ಅವರು ಮಾಡಿದ್ದಾರೆ.

ಮರಾಠಾ ಪ್ರಾಧಿಕಾರ ಸ್ಥಾಪನೆಗೆಸಾಹಿತಿಗಳು, ಕನ್ನಡಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರ್ಧಾರ ಕೈಬಿಡುವಂತೆ ಒತ್ತಡ ಹೆಚ್ಚಲಾರಂಭಿಸಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯೂ ಸೇರಿ ವಿವಿಧ ಜಿಲ್ಲೆಗಳಲ್ಲಿ ಕನ್ನಡಿಗರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ನವೆಂಬರ್‌ 13 ರಂದು ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ, ₹ 50 ಕೋಟಿ ಅನುದಾನ ಘೋಷಿಸಿದ್ದರು. ಆ ಬಳಿಕ ವೀರಶೈವ– ಲಿಂಗಾಯತರ ಅಭಿವೃದ್ಧಿಗೂ ಪ್ರತ್ಯೇಕ ನಿಗಮ ಸ್ಥಾಪಿಸಲು ಬಿಜೆಪಿಯ ಹಲವು ಮುಖಂಡರು, ಮಠಾಧೀಶರು ಒತ್ತಾಯಿಸಿದ್ದರು. ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿರುವ ಮುಖ್ಯಮಂತ್ರಿ, ತಕ್ಷಣದಿಂದ ಜಾರಿಗೆ ಬರುವಂತೆ ನಿಗಮ ಸ್ಥಾಪಿಸುವಂತೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೂ ಮೊದಲು ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರು. ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆಯ ಪ್ರಸ್ತಾವವನ್ನು ಬದಲಿಸಿ ‘ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಮೊದಲ ಆದೇಶ ಹೊರಬಿದ್ದಿತ್ತು. ಶಿರಾ ಕ್ಷೇತ್ರದಲ್ಲಿನ ಕಾಡುಗೊಲ್ಲ ಮುಖಂಡರಿಂದ ವಿರೋಧ
ವ್ಯಕ್ತವಾಗುತ್ತಿದ್ದಂತೆ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಎಂದು ಹೆಸರು ಬದಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿತ್ತು. ಸುರೇಶ್‌ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕೂಡಾ ಶೀಘ್ರದಲ್ಲಿ ನಡೆಯಲಿದೆ.

ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ಬಾಕಿ ಇದೆ. ಈ ಮೂರೂ ಕಡೆಗಳಲ್ಲಿ ಮರಾಠಾ ಸಮುದಾಯದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ವೀರಶೈವ– ಲಿಂಗಾಯತರ ಪ್ರಾಬಲ್ಯವೂ ಇದೆ. ಈ ಎರಡೂ ಸಮುದಾಯಗಳನ್ನು ಓಲೈಸಲು ಪ್ರಾಧಿಕಾರ, ನಿಗಮ ಸ್ಥಾಪನೆಗೆ ಆದೇಶ ಹೊರಡಿಸಲಾಗಿದೆ ಎಂದು ಕನ್ನಡಪರ ಸಂಘಟನೆಗಳು, ಪ್ರತಿಪಕ್ಷ ಕಾಂಗ್ರೆಸ್‌ನ ಮುಖಂಡರು ಆರೋಪಿಸಿದ್ದಾರೆ.

ನಿರ್ಧಾರ ಕೈಬಿಡಲು ಆಗ್ರಹ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹಿರಿಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ನಟ ‘ಮುಖ್ಯಮಂತ್ರಿ‘ ಚಂದ್ರು ಸೇರಿದಂತೆ ಹಲವರು ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪನೆಯನ್ನು ವಿರೋಧಿಸಿದ್ದಾರೆ. ಮಾಜಿ ಶಾಸಕ ವಾಟಾಳ್‌ ನಾಗರಾಜ್‌, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರವೀಣ್‌ ಕುಮಾರ್ ಶೆಟ್ಡಿ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವರು ಪ್ರಾಧಿಕಾರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಪ್ರಾಧಿಕಾರ ರಚನೆಯ ನಿರ್ಧಾರ ಕೈಗೊಳ್ಳಲಾಗಿದೆ. ಇದು ಅನೈತಿಕ ನಡೆ. ಚುನಾವಣೆಯ ಹೊಸ್ತಿಲಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ತಪ್ಪು ಹೆಜ್ಜೆಯಾಗುತ್ತದೆ. ಈ ನಿರ್ಧಾರವನ್ನು ವಾಪಸ್‌ ಪಡೆಯಬೇಕು’ ಎಂದು ಬರಗೂರು ರಾಮಚಂದ್ರಪ್ಪ ಅವರುಆಗ್ರಹಿಸಿದ್ದಾರೆ.

‘ಕನ್ನಡದ ಮಕ್ಕಳಿಗೆ ಖಾಲಿ ತಟ್ಟೆ ನೀಡಿರುವ ರಾಜ್ಯ ಸರ್ಕಾರ ಮರಾಠಿ ಭಾಷಿಕರಿಗೆ ಮೃಷ್ಟಾನ್ನ ಭೋಜನ ಬಡಿಸಲು ಹೊರಟಿದೆ. ಈವರೆಗೆ ಒಮ್ಮೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 50 ಕೋಟಿ ಅನುದಾನ ನೀಡಿದ ಉದಾಹರಣೆ ಇಲ್ಲ. ಈಗ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದು ವಿವೇಕಹೀನ ನಡೆ. ಇದರಿಂದ ಸೌಹಾರ್ದಕ್ಕೆ ದೊಡ್ಡ ಧಕ್ಕೆ ಉಂಟಾಗಲಿದೆ’ ಎಂದು ಎಸ್‌.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸ್ವಾಗತಿಸಿದ್ದಾರೆ.

ರಾಜ್ಯ ಬಂದ್‌ ಎಚ್ಚರಿಕೆ:

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿ
ದರು. ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರವನ್ನು ನವೆಂಬರ್‌ 27ರೊಳಗೆ ಕೈಬಿಡುವಂತೆ ಈ ಮುಖಂಡರು ಗಡುವು ನೀಡಿದ್ದಾರೆ. ತಪ್ಪಿದರೆ ಡಿಸೆಂಬರ್‌ 5ರಂದು ರಾಜ್ಯ ಬಂದ್‌ಗೆ ಕರೆ ಕೊಡುವುದಾಗಿ ತಿಳಿಸಿದ್ದಾರೆ. ಜಯ ಕರ್ನಾಟಕ ಸಂಘಟನೆ ಕೂಡ ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪನೆಯನ್ನು ವಿರೋಧಿಸಿದೆ.

ಓಲೈಕೆಗಾಗಿ ಪ್ರಾಧಿಕಾರ ರಚನೆ: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30,000 ದಷ್ಟು ಮರಾಠಾ ಸಮುದಾಯದ ಮತದಾರರಿದ್ದಾರೆ. ಅವರ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ನೈಜ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಮರಾಠಿ ಭಾಷೆಗೂ ಪ್ರಾಧಿಕಾರಕ್ಕೂ ಸಂಬಂಧವಿಲ್ಲ ’
‘ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ರಾಜ್ಯದಲ್ಲಿರುವ ಮರಾಠಾ ಜನಾಂಗದ ಅಭಿವೃದ್ಧಿಗಾಗಿ ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಈ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರು ಟ್ವೀಟ್‌ ಮೂಲಕತಿಳಿಸಿದ್ದಾರೆ.

***********

ನಿಗಮ ಸ್ಥಾಪನೆಗೆ ಸಮಾಜ ಹಲವು ವರ್ಷಗಳಿಂದ ಬೇಡಿಕೆ ಮುಂದಿಟ್ಟಿತ್ತು. ಸರ್ಕಾರದ ನಿರ್ಧಾರ ಸಂತಸ ಮೂಡಿಸಿದೆ. ಇದೊಂದು ಸ್ವಾಗತಾರ್ಹ ನಿರ್ಧಾರ. ಸೌಲಭ್ಯ, ಅನುಕೂಲ ಸಮುದಾಯಕ್ಕೆ ಸಿಗಲಿದೆ.

ಶಿವಮೂರ್ತಿ ಮುರುಘಾ ಶರಣರು

-ಶಿವಮೂರ್ತಿ ಮುರುಘಾ ಶರಣರು

ಮುರುಘಾ ಮಠ, ಚಿತ್ರದುರ್ಗ

***********

ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದ ಸಮುದಾಯಕ್ಕೆ ನಿಗಮದ ಅಗತ್ಯವಿದೆ. ಇದು ಚುನಾವಣೆ ತಂತ್ರವಾಗಬಾರದು. ನಿಗಮಕ್ಕೆ ಲಿಂಗಾಯತ–ವೀರಶೈವ ಬದಲು ಬಸವಣ್ಣನವರ ಹೆಸರು ಸೂಕ್ತ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

–ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ತರಳಬಾಳು ಶಾಖಾ ಮಠ, ಸಾಣೇಹಳ್ಳಿ

***********

ತಳ ಸಮುದಾಯವನ್ನು ಮೇಲೆತ್ತುವ ಉದ್ದೇಶದಿಂದ ಹಿಂದೆ ನಿಗಮ ಸ್ಥಾಪಿಸಲಾಗುತ್ತಿತ್ತು. ಗಟ್ಟಿ ಧ್ವನಿ, ರಾಜಕೀಯ ಬಲ ಇರುವವರಿಗೆ ಈಗ ಮಾನ್ಯತೆ ಸಿಗುತ್ತಿದೆ. ಸಣ್ಣ ಸಮುದಾಯಗಳನ್ನು ಸರ್ಕಾರ ಗುರುತಿಸಲಿ.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

–ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಭೋವಿ ಗುರುಪೀಠ, ಚಿತ್ರದುರ್ಗ

***********

ಆರ್ಥಿಕವಾಗಿ ಹಿಂದುಳಿದವರು ಎಲ್ಲ ಜಾತಿಯಲ್ಲಿಯೂ ಇದ್ದಾರೆ. ಅಂಥವರಿಗೆ ನಿಗಮದ ಮೂಲಕ ಸೌಲಭ್ಯ ಸಿಕ್ಕರೆ ಅನುಕೂಲ. ನಿಗಮದ ಸವಲತ್ತುಗಳು ವೀರಶೈವ–ಲಿಂಗಾಯತ ಸಮುದಾಯದ ಬಡವರನ್ನು ತಲುಪಲಿ.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

–ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ

***********

ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುತ್ತಿರುವುದು ಸ್ವಾಗತಾರ್ಹ. ಲಿಂಗಾಯತ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಿಸಬೇಕು.

ಮಾತೆ ಗಂಗಾದೇವಿ

– ಮಾತೆ ಗಂಗಾದೇವಿ,
ಬಸವಧರ್ಮ ಪೀಠದ ಪೀಠಾಧ್ಯಕ್ಷೆ, ಕೂಡಲಸಂಗಮ

***********

ಲಿಂಗಾಯತರಿಗೆ ಅನುಕೂಲವಾಗಬೇಕಾದರೆ ಮಹಾರಾಷ್ಟ್ರ ಮಾದರಿಯಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಲಿಂಗಾಯತ ಅಭಿವೃದ್ಧಿ ನಿಗಮವೆಂದು ಹೆಸರು ಬದಲಿಸಬೇಕು.

ಬಸವಜಯಮೃತ್ಯುಂಜಯ ಸ್ವಾಮೀಜಿ

– ಬಸವಜಯಮೃತ್ಯುಂಜಯ ಸ್ವಾಮೀಜಿ,
ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT