ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಕಾಂಬಾ ಜಾತ್ರೆ: ವ್ಯಾಪಾರಿಗಳ ನಿರಾಸಕ್ತಿ

Last Updated 21 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರೆ ಮಾರ್ಚ್‌ 22ರಿಂದ ಆರಂಭವಾಗುತ್ತಿದೆ. ಮುಸ್ಲಿಮರಿಗೆ ಜಾತ್ರೆಯಲ್ಲಿ ಅಂಗಡಿಗಳನ್ನು ಹಾಕಲು ಅವಕಾಶ ನಿರಾಕರಿಸಿದ ನಂತರ ಸೃಷ್ಟಿಯಾದ ಗೊಂದಲದ ಪರಿಣಾಮವಾಗಿ ವ್ಯಾಪಾರಿಗಳು ಸೋಮವಾರ ರಾತ್ರಿಯವರೆಗೂ ಟೆಂಟ್‌ ಹಾಕಿರಲಿಲ್ಲ.

ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಜಾತ್ರೆಯಲ್ಲಿ ವ್ಯಾಪಾರಿಗಳು ಯಾವ ಧರ್ಮ ಭೇದವೂ ಇಲ್ಲದೆ ಟೆಂಟ್‌ ಹಾಕಿಕೊಂಡು ಆಟಿಕೆಗಳು, ತಿಂಡಿ, ತಿನಿಸುಗಳು, ತಂಪು ಪಾನೀಯಗಳು, ಬಳೆ, ಬಲೂನುಗಳು ಸೇರಿ ವಿವಿಧ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ನಡೆದ ಕೋಮು ದ್ವೇಷದ ಬೆಳವಣಿಗಳು ಮಾರಿಕಾಂಬಾ ಜಾತ್ರೆಯ ಮೇಲೂ ಪರಿಣಾಮ ಬೀರಿವೆ.

ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಚಿನ್ನಯ್ಯ ಎಂಬುವವರು ಮಳಿಗೆಗಳ ವಿತರಣೆ, ನಿರ್ವಹಣೆಯ ಗುತ್ತಿಗೆ ಪಡೆದಿದ್ದರು. ಬಿಜೆಪಿ, ಬಜರಂಗ ದಳದ ಮುಖಂಡರು ಮುಸ್ಲಿಮರಿಗೆ ಮಳಿಗೆ ಹಾಕಲು ಅವಕಾಶ ನೀಡದಂತೆ ತಾಕೀತು ಮಾಡಿದ್ದರು. ಇದರಿಂದ ಗುತ್ತಿಗೆದಾರ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರು. ನಂತರ ಬಜರಂಗ ದಳದ ಮುಖಂಡರೇ ಹಣ ನೀಡಿ, ಗುತ್ತಿಗೆ ಪಡೆದುಕೊಂಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳಿಗೆ ಮಾರಾಟಕ್ಕೆ ಅವಕಾಶ ನೀಡಿಲ್ಲ.

‘ನಾವು 40 ವರ್ಷಗಳಿಂದಲೂ ಖಾರಾ– ಮಂಡಕ್ಕಿ ಅಂಗಡಿ ಹಾಕುತ್ತಿದ್ದೇವೆ. ಜಾತ್ರೆ ಆರಂಭದ ಮೂರು ದಿನಗಳ ಮೊದಲೇ ವ್ಯಾಪಾರಕ್ಕೆ ಸಿದ್ಧತೆ ನಡೆಯುತ್ತಿತ್ತು. ಹಿಂದಿನ ದಿನದಿಂದಲೇ ವ್ಯಾಪಾರ ಆರಂಭಿಸುತ್ತಿದ್ದೇವು. ಈ ಬಾರಿ ಜಾತ್ರೆ ಆರಂಭಕ್ಕೆ ಕೆಲವು ಗಂಟೆಗಳು ಇದ್ದರೂ ನಾಲ್ಕು ಮಳಿಗೆಗಳೂ ಸಿದ್ಧವಾಗಿಲ್ಲ. ಮುಸ್ಲಿಮರಿಗೆ ಅವಕಾಶ ನಿರಾಕರಿಸಿದ್ದಾರೆ. ಹಿಂದೂ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಇದೇ ಮೊದಲ ಬಾರಿ ಇಂತಹ ವಾತಾವರಣ ಕಾಣುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು ಜಟ್ಟಂಗಿ ರಾಮೇಶ್ವರ ಕಾರಾಮಂಡಕ್ಕಿ ಅಂಗಡಿಯ ದೇವೇಂದ್ರ.

‘ಹರ್ಷ ಹತ್ಯೆಯ ನಂತರ ಹಿಂದೂ ಸಮಾಜ ನೊಂದಿದೆ. ಇಂತಹ ಸಮಯದಲ್ಲಿ ಮುಸ್ಲಿಮರಿಗೆ ನಮ್ಮ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಿದರೆ ದ್ವೇಷ ಹೆಚ್ಚಾಗಬಹುದು. ಅದಕ್ಕಾಗಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿದ್ದೇವೆ’ ಎನ್ನುತ್ತಾರೆ ಬಜರಂಗ ದಳದ ಮುಖಂಡರು.

ಮುಖ್ಯ ಶಿಕ್ಷಕಿ ಅಮಾನತು
ಖಾಸಗಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್‌ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಮುಖ್ಯ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.ಗೋಪಾಳದ ವಿದ್ಯಾನಿಕೇತನ ಶಾಲೆಯ ಜಬೀನಾ ಪರ್ವಿನ್‌ ಅಮಾನತುಗೊಂಡವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT