ಶನಿವಾರ, ಮಾರ್ಚ್ 6, 2021
28 °C
ಪರ್ಯಾಯ ‘ಸೂತ್ರ’ ಸೂಚಿಸಿದರೆ ಮಾತುಕತೆಗೆ ಸಿದ್ಧ– ಸಚಿವರ ಭರವಸೆ

ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಶಾಲೆಗಳ ಬೋಧನಾ ಶುಲ್ಕ ಶೇ 30ರಷ್ಟು ಕಡಿತ ಆದೇಶ ಮರು ಪರಿಶೀಲಿಸುವಂತೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮಂಗಳವಾರ ಇಲ್ಲಿ ಬೃಹತ್ ರ‍್ಯಾಲಿ ಹಾಗೂ ಪ್ರತಿಭಟನಾ ಸಮಾವೇಶ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರುವ ಯತ್ನ ಮಾಡಿತು.

ಖಾಸಗಿ ಸಂಸ್ಥೆಗಳ ಒಕ್ಕೂಟಕ್ಕೆ ಮಣಿಯದ ಸರ್ಕಾರ, ‘ತನ್ನ ನಿರ್ಧಾರದಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಪಾದಿಸಿದೆ.

ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆಯ (ಕ್ಯಾಮ್ಸ್) ಮತ್ತು ಇತರ 10ಕ್ಕೂ ಹೆಚ್ಚು ಸಂಘಟನೆಗಳನ್ನು ಒಳಗೊಂಡ ‘ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಿಕ್ಷಣ– ಶಿಕ್ಷಕೇತರ ಸಿಬ್ಬಂದಿಯ ಸಮನ್ವಯ ಸಮಿತಿ’ಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಶಿಕ್ಷಕರು, ವ್ಯವಸ್ಥಾಪಕರು ಸೇರಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

‘ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಅಲ್ಲಿನ ಶಿಕ್ಷಕರನ್ನು ಸರ್ಕಾರ ಮಲತಾಯಿ ಧೋರಣೆಯಿಂದ ಕಾಣುತ್ತಿದೆ. ಕೊರೊನಾದಿಂದ ಖಾಸಗಿ ಶಾಲೆಗಳಿಗೆ ಶೇ 60ರಿಂದ 70ರಷ್ಟು ಆರ್ಥಿಕ ಸಂಕಷ್ಟ ಉಂಟಾಗಿದೆ. ಈ ಮಧ್ಯೆಯೂ ಪಾಲಕ, ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಶೇ 30ರಷ್ಟು ಶುಲ್ಕ ಕಡಿತ ಮಾತ್ರವಲ್ಲ, ವಿವಿಧವಿನಾಯಿತಿ ಹೆಸರಿನಲ್ಲಿ ಶೇ 50ರಿಂದ 55ರಷ್ಟು ಶುಲ್ಕ ವಿನಾಯತಿ ಮಾಡಲಾಗಿದೆ. ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಶುಲ್ಕ ಕಡಿತ ತೀರ್ಮಾನವನ್ನು ಮರು ಪರಿಶೀಲಿಸಬೇಕು. ಮರುಪರಿಶೀಲಿಸದಿದ್ದರೆ ಮತ್ತೊಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಸಮಾವೇಶ ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್, ‘ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪೂರಕವಾಗುವಂತೆ ಶುಲ್ಕ ಕಡಿತ ನಿರ್ಧಾರ ತೆಗೆದುಕೊಂಡಿದ್ದೇವೆ. ಇದನ್ನು ಬಿಟ್ಟರೆ ಬೇರೆಮಾರ್ಗ ಇಲ್ಲ. ಶುಲ್ಕ ವಿಚಾರದಲ್ಲಿ ನನಗೆ, ಸರ್ಕಾರಕ್ಕೆ ಪ್ರತಿಷ್ಠೆಯಿಲ್ಲ. ಪೋಷಕರ ಮತ್ತು ಆಡಳಿತ ಮಂಡಳಿಗಳು ಒಮ್ಮತದ ನಿರ್ಧಾರಕ್ಕೆ ಬರಲಿಲ್ಲವಾದ್ದರಿಂದ ಸರ್ಕಾರ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯ ಉಂಟಾಯಿತು’ ಎಂದರು.

ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಮರಿತಿಬ್ಬೇಗೌಡ, ರಮೇಶ್ ಗೌಡ, ಮಾಜಿ ಸಂಸದ ಶಿವರಾಮೇಗೌಡ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಮುಖ್ಯಮಂತ್ರಿ ಜತೆಗೂ ಚರ್ಚೆ

‘ಶುಲ್ಕ ಕಡಿತ ನಿರ್ಧಾರ ಮರು ಪರಿಶೀಲಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ಅವರ ಜೊತೆಗೂ ಈ ವಿಷಯ ಚರ್ಚೆ ಮಾಡಿದ್ದೇನೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶೀಘ್ರ ಸಭೆ ನಡೆಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚಿಸುತ್ತೇನೆ’ ಎಂದು ಸುರೇಶ್‌ಕುಮಾರ್‌ ಹೇಳಿದರು.

ಮೈಲುದ್ದ ಸಾಲುಗಟ್ಟಿ ನಿಂತ ವಾಹನಗಳು

ಬೆಂಗಳೂರು: ಖಾಸಗಿ ಶಾಲೆಗಳ ಒಕ್ಕೂಟದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಿಂದಾಗಿ ನಗರದಲ್ಲಿ ವಿಪರೀತ ದಟ್ಟಣೆ ಉಂಟಾಯಿತು. ಸ್ವಾತಂತ್ರ್ಯ ಉದ್ಯಾನ ಹಾಗೂ ಸುತ್ತಮುತ್ತ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾಯಿತು.

ಒಕ್ಕೂಟದ ಸದಸ್ಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೂಲಕ ಮೆರವಣಿಗೆ ಸಾಗಿತು. ಮೇಲ್ಸೇತುವೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಯಿತು. ಮೇಲ್ಸೇತುವೆ ಮೂಲಕ ಹೊಗಬೇಕಿದ್ದ ವಾಹನಗಳು, ಕಿ.ಮೀ. ಗಟ್ಟಲೇ ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಯಿತು. ಮೆರವಣಿಗೆಯುದ್ದಕ್ಕೂ ಶಾಲಾ ವಾಹನಗಳೂ ಹೆಚ್ಚಿದ್ದವು. ಹೀಗಾಗಿ, ಮೆರವಣಿಗೆ ನಿಧಾನವಾಗಿ ಸಾಗಿತು. ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿ, ಚಾಲಕರು ಹಾಗೂ ಪ್ರಯಾಣಿಕರು ಪರದಾಡಿದರು.

ಮೆಜೆಸ್ಟಿಕ್, ಆನಂದರಾವ್ ವೃತ್ತ, ಓಕಳಿಪುರ, ಮಲ್ಲೇಶ್ವರ, ಶೇಷಾದ್ರಿಪುರ, ಕುಮಾರಕೃಪಾ ರಸ್ತೆ, ಅರಮನೆ ರಸ್ತೆ, ರೇಸ್‌ಕೋರ್ಸ್ ರಸ್ತೆ, ಶಿವಾನಂದ ವೃತ್ತ, ಬಸವೇಶ್ವರ ವೃತ್ತ, ಶೇಷಾದ್ರಿ ರಸ್ತೆ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಪ್ರಮಾಣ ಹೆಚ್ಚಿತ್ತು. ವಾಹನಗಳು ನಿಧಾನವಾಗಿ ಚಲಿಸಿದವು. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು, ನಡೆದುಕೊಂಡೇ ಮುಂದಕ್ಕೆ ಹೋದರು.

ಪ್ರತಿಭಟನೆಗೆ ಜನರನ್ನು ಕರೆತಂದಿದ್ದ ಶಾಲಾ ವಾಹನಗಳನ್ನೂ ಎಲ್ಲೆಂದರಲ್ಲಿ ನಿಲ್ಲಿಸಲಾಗಿತ್ತು. ಇದು ಸಹ ದಟ್ಟಣೆಗೆ ಕಾರಣವಾಯಿತು. ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.

‘ನಮಗೇಕೆ ಶಿಕ್ಷೆ; ಪೊಲೀಸರು ಏನು ಮಾಡುತ್ತಿದ್ದಾರೆ’

ವಿಪರೀತ ದಟ್ಟಣೆಯಲ್ಲಿ ಸಿಲುಕಿದ್ದ ಸವಾರರು, ಕೆಲವೆಡೆ ಪೊಲೀಸರ ಜೊತೆಯೇ ವಾಗ್ವಾದ ನಡೆಸಿದರು. ‘ಬೆಂಗಳೂರಿನ ಹೃದಯಭಾಗದಲ್ಲಿ  ಪ್ರತಿಭಟನಾ ಮೆರವಣಿಗೆ ನಡೆಸಲು ಹೇಗೆ ಅನುಮತಿ ನೀಡಿದ್ದೀರಾ’ ಎಂದು ಸಾರ್ವಜನಿಕರು ಪ್ರಶ್ನಿಸಿದರು.

ಓಕಳಿಪುರ ಕೆಳ ಸೇತುವೆಯಲ್ಲಿ ದಟ್ಟಣೆಯಲ್ಲಿ ಸಿಲುಕಿದ್ದ ಸವಾರ ಪ್ರಕಾಶ್, ‘ರಸ್ತೆಯ ಒಂದು ಬದಿಯಲ್ಲಿ ಮೆರವಣಿಗೆಗೆ ಅವಕಾಶ ನೀಡಬೇಕಿತ್ತು. ಆದರೆ, ಎರಡೂ ಕಡೆಯೂ ನೀಡಿರುವುದು ಸರಿಯಲ್ಲ. ನಿತ್ಯವೂ ನಾವು ಇದೇ ರಸ್ತೆ ಮೂಲಕ ಓಡಾಡುತ್ತೇವೆ. ಹೀಗೆ, ಗಂಟೆಗಟ್ಟಲೇ ರಸ್ತೆಯಲ್ಲಿ ನಿಂತರೆ ನಮ್ಮ ಕೆಲಸ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ, ಬೆಂಗಳೂರಿನ ಹೃದಯ. ಇದರ ಮೂಲಕವೇ ಶೇ 50ರಷ್ಟು ವಾಹನಗಳು ನಗರದ ವಿವಿಧ ಭಾಗಕ್ಕೆ ಸಂಚರಿಸುತ್ತವೆ. ಇಂಥ ಸ್ಥಳದಲ್ಲಿ ಮೆರವಣಿಗೆಗೆ ಅನುಮತಿ ನೀಡುವ ಮೊದಲು ಪೊಲೀಸರು ಯೋಚಿಸಬೇಕು. ಶಾಲಾ ಒಕ್ಕೂಟದ ಸದಸ್ಯರು, ನಿಯಮ ಉಲ್ಲಂಘಿಸಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು