ಸೋಮವಾರ, ಜನವರಿ 17, 2022
20 °C

ಮಂತ್ರಿ ಸ್ಥಾನಕ್ಕೆ ಕಾರಜೋಳ ನಾಲಾಯಕ್: ಎಂ.ಬಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾರಜೋಳ ಒಬ್ಬ ಮೂರ್ಖ ಮಂತ್ರಿ‌. ಮಂತ್ರಿ ಸ್ಥಾನಕ್ಕೆ ನಾಲಾಯಕ್‌. ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು’ ಎಂದು ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಅಂತರ್ ರಾಜ್ಯ ಜಲವಿವಾದದ ಬಗ್ಗೆ ಕಾರಜೋಳ ಅವರಿಗೆ ಗೊತ್ತೇ ಇಲ್ಲ. ಬೆಂಗಳೂರಿಗೆ ಕುಡಿಯಲು ನೀರು ಸಿಕ್ಕಿದ್ದರೆ ಅದು ನಮ್ಮ ಪ್ರಯತ್ನ. ಸಾಮಾನ್ಯ ಪರಿಜ್ಞಾನವೂ ಅವರಿಗಿಲ್ಲ. ಅವರನ್ನು ಜಲಸಂಪನ್ಮೂಲ ಸಚಿವರಾಗಿ ಇಟ್ಟುಕೊಂಡಷ್ಟು ದಿನವೂ ಕರ್ನಾಟಕಕ್ಕೆ ಹಾನಿಯಾಗುತ್ತಲೇ ಇರುತ್ತದೆ’ ಎಂದರು.

‘ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಕಾರಜೋಳ ಅವರು ಮೂರನೇ ದರ್ಜೆಯ ಕೆಲಸ ಮಾಡಿದ್ದಾರೆ. ಜಾಹೀರಾತು ಪ್ರಾಯೋಜಿತ ಎಂದೂ ಹಾಕಿದ್ದಾರೆ. ಅನಾಮಧೇಯರು ಹಾಕಿದ್ದು ಅದು. ಯಾರ ಸತ್ಯ ದರ್ಶನ ಇದು. ಇದು ಯಾರ ವಿವೇಕ. ಬಿಜೆಪಿನೂ ಕೊಟ್ಟಿಲ್ಲ, ಸರ್ಕಾರ ಕೊಟ್ಟಿಲ್ಲ, ಸಂಘ ಸಂಸ್ಥೆಗಳೂ ಕೊಟ್ಟಿಲ್ಲ. ಹಾಗಿದ್ದರೆ ಕೊಟ್ಟವರು ಯಾರು? ಚಿಲ್ಲರೆಯಾಗಿ ವರ್ತನೆ ಮಾಡುತ್ತಿರುವುದು ಯಾರು. ಇದಕ್ಕೆಲ್ಲ ಕಾರಜೋಳ ಕಾರಣ’ ಎಂದೂ ಟೀಕಿಸಿದರು.

‘ನಾನು ಜಲಸಂಪನ್ಮೂಲ ಸಚಿವನಾನಾಗಿದ್ದಾಗ (2013ರಲ್ಲಿ) ಕಾವೇರಿ ಅಧಿಸೂಚನೆ ಆಯಿತು. ಪ್ರಥಮ ಬಾರಿಗೆ ಮೇಕೆದಾಟು ಆರಂಭಿಸಿದ್ದು ನಾವು. ಆರಂಭಿಕ ಹೆಜ್ಜೆ ಇಟ್ಟವರು ನಾವು. ಕಾರಜೋಳ ಅವರಿಗೆ ಯಾರ ಭಯ ಕಾಡುತ್ತಿದೆಯೊ ಗೊತ್ತಿಲ್ಲ. ಸಾಮಾನ್ಯ ಜ್ಞಾನ ಇಲ್ಲ. ಸುಮ್ಮನೆ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದೂ ವಾಗ್ದಾಳಿ ನಡೆಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮೇಕೆದಾಟು ಯೋಜನೆ ಕುರಿತು ಪತ್ರ ಒಂದನ್ನು ಬರೆಯುವುದು ಬಿಟ್ಟರೆ ಮತ್ತೇನು ಮಾಡಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

‘ಪಾದಯಾತ್ರೆಯಿಂದ ಡಬ್ಬಲ್ ಎಂಜಿನ್‌ ಸರ್ಕಾರ ಚುರುಕಾಗುತ್ತದೆ. ಆ ಆಸೆ ಇಟ್ಟುಕೊಂಡೇ ಯಾತ್ರೆ ಮಾಡುತ್ತಿದ್ದೇವೆ. ಹಾಗಾದರೂ ಸರ್ಕಾರ ಚುರುಕಾಗಲಿ’ ಎಂದು ಎಂ.ಬಿ. ಪಾಟೀಲ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು