ಮಂಗಳವಾರ, ಸೆಪ್ಟೆಂಬರ್ 21, 2021
23 °C
ಕೇಂದ್ರದಿಂದ ಅನ್ಯಾಯ l ಜೆಡಿಎಸ್‌ ಶಾಸಕರ ಪಾದಯಾತ್ರೆ, ಅನುಮತಿಗೆ ಮನವಿ

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ: ರಾಷ್ಟ್ರಪತಿ, ಪ್ರಧಾನಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಮತ್ತು ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಪಾದಯಾತ್ರೆಯಲ್ಲಿ ರಾಜಭವನಕ್ಕೆ ಗುರುವಾರ ತೆರಳಿದ ಜೆಡಿಎಸ್ ಶಾಸಕರ ನಿಯೋಗ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು. ಮನವಿ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸಿದೆ.

ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ ಶಾಸಕರು, ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನದವರೆಗೆ ಪಾದಯಾತ್ರೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ರಾಜ್ಯಪಾಲರ ಭೇಟಿಗೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ‘ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

‘ಮೇಕೆದಾಟು ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡುವ ವಿಚಾರದಲ್ಲಿ ತಮಿಳುನಾಡಿನ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಮಂಜೂರಾತಿ ನೀಡಿಲ್ಲ. ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಮಂಡಳಿ ತೀರ್ಪು ನೀಡಿದರೂ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ ಎಂಬ ನೆಪವೊಡ್ಡಿ ಅಧಿಸೂಚನೆ ಹೊರಡಿಸಿಲ್ಲ’ ಎಂದು ಅವರು ದೂರಿದರು.

‘ಪ್ರಾದೇಶಿಕ ನೆಲೆಗಟ್ಟಿನ ಆಧಾರಲ್ಲಿ ರಾಜ್ಯದ ಹಿತಕ್ಕಾಗಿ ನಾವು ಹೋರಾಟ ನಡೆಸುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದು ನೀರು ಸಮುದ್ರಕ್ಕೆ ಹೋಗುತ್ತಿದೆ. ನಮಗೆ ಹಂಚಿಕೆಯಾಗಿರುವ ನೀರಿನ ಪಾಲು ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಈ ವಿಚಾರದಲ್ಲಿ ಜನಜಾಗೃತಿ ಮೂಡಿಸುವ ಕೆಲಸವನ್ನು ಪಕ್ಷ ಮಾಡಲಿದೆ. ನಮ್ಮ ಮನವಿಗೆ ಕೇಂದ್ರ ಸರ್ಕಾರದ ಸ್ಪಂದನೆ ನೋಡಿಕೊಂಡು ಮುಂದಿನ ನಿಲುವು ತೆಗೆದುಕೊಳ್ಳುತ್ತೇವೆ’ ಎಂದರು.

‘ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಹೀಗಾಗಿ, ಆದ್ಯತೆ ಮೇರೆಗೆ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದೂ ಒತ್ತಾಯಿಸಿದರು.

‘ಮೇಕೆದಾಟು: ಪರ್ಯಾಯ ಮಾರ್ಗ ಅನುಸರಿಸಿ’

ಮೈಸೂರು: ‘ಮೇಕೆದಾಟು ಯೋಜನೆ ಜಾರಿಯಿಂದ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ನದಿ, ಅರಣ್ಯ ಸಂಪತ್ತು ನಾಶವಾಗಲಿದೆ. ಅಣೆಕಟ್ಟು ನಿರ್ಮಾಣ ಸ್ಥಳವನ್ನು ಶಿಂಷಾಗೆ ಬದಲಿಸಬೇಕು. ಪರ್ಯಾಯ ಮಾರ್ಗದ ಬಗ್ಗೆಯೂ ಆಲೋಚಿಸಬೇಕು’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸಲಹೆ ನೀಡಿದರು.

ಚಾಮರಾಜೇಂದ್ರ ಮೃಗಾಲಯವು ವಿಶ್ವ ಹುಲಿ ದಿನದ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಅವರು, ‘ವನ್ಯಜೀವಿಧಾಮದ ಹೃದಯ ಭಾಗದಲ್ಲಿ ಮೇಕೆದಾಟು ಇದೆ. ಅಣೆಕಟ್ಟು ನಿರ್ಮಿಸಿದರೆ ಹಿನ್ನೀರಿನಲ್ಲಿ ಕಾವೇರಿ ನದಿ ಕಣಿವೆಯ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವನ್ಯಜೀವಿಧಾಮದಲ್ಲಿ ಮಾತ್ರ ಬೂದು ಬಣ್ಣದ ಅಳಿಲು (ಗ್ರಿಜಲ್‌ ಜ್ಯೇಂಟ್‌ ಸ್ಕ್ವಿರಲ್‌), ತರಕರಡಿ, ಚಿಪ್ಪುಹಂದಿ ಇವೆ. ಬಿಳಿಗಿರಿರಂಗನಬೆಟ್ಟ, ಸತ್ಯಮಂಗಲ ಹಾಗೂ ಮಲೆ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಹುಲಿ ಸಾಂದ್ರತೆ ಹೆಚ್ಚಾಗುತ್ತಿದ್ದು, ವನ್ಯಜೀವಿಧಾಮದಲ್ಲಿ ಹುಲಿಗಳು ಹೊಸ ವಾಸಸ್ಥಳಗಳನ್ನು ಕಂಡುಕೊಂಡಿವೆ. ನದಿ ಅರಣ್ಯದ ಅಪರೂಪದ ಸಸ್ಯ ಪ್ರಭೇದಗಳೂ ಅಲ್ಲಿವೆ. ಆ ಭೂ ಸ್ವರೂಪ ಉಳಿಸಿಕೊಳ್ಳುವುದೇ ಆದ್ಯತೆಯಾಗಬೇಕು’ ಎಂದು ಪ್ರತಿಪಾದಿಸಿದರು.

***
ಕೇಂದ್ರ ಸಕಾರಾತ್ಮಕಾಗಿ ಸ್ಪಂದಿಸದೇ ಇದ್ದರೆ ದೇವೇ ಗೌಡರ ನೇತೃತ್ವದಲ್ಲಿ ದೆಹಲಿಗೆ ತೆರಳಿ ರಾಷ್ಟ್ರಪತಿ, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು

- ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು