ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವವಾಗಿರುವ ಎಂಇಎಸ್: ನಾರಾಯಣಗೌಡ ಟೀಕೆ

Last Updated 31 ಆಗಸ್ಟ್ 2020, 10:48 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಶವವಾಗಿದೆ. ಮರುಜೀವ ಕೊಡುವುದಕ್ಕೋಸ್ಕರ ಕೆಲವರು ಆಗಾಗ ವಿವಾದಗಳನ್ನು ಸೃಷ್ಟಿಸುತ್ತಿರುತ್ತಾರೆ. ಇದಕ್ಕೆ ಕನ್ನಡಿಗರು ಅಂಜುವುದಿಲ್ಲ. ತಕ್ಕ ಉತ್ತರ ಕೊಡುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ರಾಯಣ್ಣನ ಪುಣ್ಯಭೂಮಿ. ಇಲ್ಲಿ ಆ ನಾಯಕನ ಪ್ರತಿಮೆ ಪ್ರತಿಷ್ಠಾಪನೆಗೆ ಯಾವುದೇ ದೊಡ್ಡ ನಾಯಕರ ಅನುಮತಿ ಬೇಕಿಲ್ಲ. ಯಾರೋ ವಿವಾದ ಸೃಷ್ಟಿಸಿ ಗಲಭೆ, ಗಲಾಟೆ ಹಾಗೂ ಪುಂಡಾಟಿಕೆ ಮಾಡುವುದು ಬೇಡ ಎಂದು ನಮ್ಮ ಕಾರ್ಯಕರ್ತರೇ ಸ್ಥಾಪಿಸಿದ್ದಾರೆ. ಆದರೆ, ವಿವಾದಕ್ಕೆ ಕಾರಣವಾದವರನ್ನು ಬಗ್ಗು ಬಡಿಯಲೇ ಬೇಕು. ಇಲ್ಲದಿದ್ದಲ್ಲಿ ಆಗಾಗ ಸೃಷ್ಟಿಸುತ್ತಲೇ ಇರುತ್ತಾರೆ. ಅಮಾಯಕ ಯುವಕರನ್ನು ಗಲಾಟೆಗೆ ಪ್ರಚೋದಿಸುತ್ತಿರುತ್ತಾರೆ’ ಎಂದು ದೂರಿದರು.

‘ಇಲ್ಲಿನ ರಾಜಕಾರಣಿಗಳು ಮತ ಬ್ಯಾಂಕ್‌ ರಾಜಕಾರಣ ಮಾಡಲು, ಯಾರನ್ನೋ ಓಲೈಸಲು ಹೋಗಬಾರದು. ಅವರು ಸರಿ ಇದ್ದಿದ್ದರೆ ಬೆಳಗಾವಿಯಲ್ಲಿ ಇಂತಹ ವಿವಾದಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ಅನ್ಯಭಾಷಿಗರು ಸುಮ್ಮನಿರುತ್ತಿದ್ದರು. ಇಲ್ಲಿ ಕನ್ನಡಿಗರು ಮಾಲೀಕರೇ ಹೊರತು ಬೇರೆಯವರಲ್ಲ’ ಎಂದು ಹೇಳಿದರು.

‘ಶಿವಾಜಿ ಅಪ್ರತಿಮ ದೇಶಪ್ರೇಮಿ. ಅವರ ಬಗ್ಗೆ ನಮಗೆ ಗೌರವವಿದೆ. ನಮ್ಮ ನೆಲದಲ್ಲೇ ನಮ್ಮ ನಾಯಕನ ಪ್ರತಿಮೆ ಪ್ರತಿಷ್ಠಾಪನೆಗೆ ಅಡ್ಡಿಪಡಿಸುವ ಶಿವಸೇನೆಯವರು ಅಥವಾ ಎಂಇಎಸ್‌ ಮುಖಂಡರು ಮಹಾರಾಷ್ಟ್ರದಲ್ಲಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿ ತೋರಿಸುತ್ತಾರೆಯೇ?’ ಎಂದು ಸವಾಲು ಹಾಕಿದರು.

‘ಸುವರ್ಣ ವಿಧಾನಸೌಧದ ಮುಂದೆ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪ್ರತಿಮೆಗಳನ್ನು ಸ್ಥಾಪಿಸಬೇಕು. ಜಯಂತಿಯನ್ನು ಸರ್ಕಾರದಿಂದ ಅಲ್ಲೇ ಅದ್ಧೂರಿಯಾಗಿ ಆಚರಿಸಬೇಕು’ ಎಂದು ಆಗ್ರಹಿಸಿದರು.

ಬಳಿಕ ಪೀರನವಾಡಿಯಲ್ಲಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT