ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಯಿಮರಿ’ ಪದ ಬಳಕೆ: ಸಚಿವರ ವಾಗ್ದಾಳಿ

Last Updated 4 ಜನವರಿ 2023, 22:38 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿ ಮರಿಯಂತೆ ವರ್ತಿಸುತ್ತಾರೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕರು ಮತ್ತು ಸಚಿವರು ತೀವ್ರವಾಗಿ ಖಂಡಿಸಿದ್ದಾರೆ.

ಕಂದಾಯ ಸಚಿವ ಆರ್‌.ಅಶೋಕ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಅವರು ಬೊಮ್ಮಾಯಿ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಇಂತಹ ಭಾಷೆ ಬಳಕೆ ಕಾಂಗ್ರೆಸ್‌ ಸಂಸ್ಕೃತಿ ಏನು ಎನ್ನುವುದನ್ನು ತೋರಿಸುತ್ತದೆ. ಇವರು ದೆಹಲಿಗೆ ಹೋಗಿ ಸೋನಿಯಾ ಮತ್ತು ರಾಹುಲ್‌ ಅವರ ಭೇಟಿಗೆ 4–5 ದಿನಗಳು ಕಾಯುತ್ತಾ, ಗುಲಾಮರಂತೆ ವರ್ತಿಸುವುದು ಎಲ್ಲರಿಗೂ ಗೊತ್ತಿದೆ. ಆದರೆ, ನಾಯಿ ಮರಿಯೋ ಬೆಕ್ಕಿನ ಮರಿಯೋ ಎಂದು ನಾವು ಹೇಳುವುದಿಲ್ಲ. ಅದು ನಮ್ಮ ಸಂಸ್ಕೃತಿ ಅಲ್ಲ’ ಎಂದಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ, ‘ರಾಜ್ಯದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುರಿತು ಟೀಕೆಯ ಸಂದರ್ಭದಲ್ಲಿ ಬಳಸಿದ ಭಾಷೆ ಅವರ ಘನತೆಗೆ ತಕ್ಕುದಲ್ಲ. ಇದರಿಂದ ಸಾಂಸ್ಕೃತಿಕ ಪ್ರಜ್ಞೆ ಇರುವ ಎಲ್ಲರ ಮನ ನೋಯಿಸಿದೆ. ಅವರು ರಾಜ್ಯದ ಜನತೆ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು, ‘ಸಿದ್ದರಾಮಯ್ಯ ಅವರು ತಮ್ಮ ಎಲುಬಿಲ್ಲದ ನಾಲಿಗೆಯಿಂದ ಈ ರೀತಿಯಾಗಿ ಮಾತನಾಡುವುದನ್ನು ಕೇಳಿದಾಗ ಪುರಂದರದಾಸರು ಬರೆದ ಆಚಾರವಿಲ್ಲದ ನಾಲಿಗೆ... ನಿನ್ನ ನೀಚ ಬುದ್ಧಿಯನ್ನು ಬಿಡು ನಾಲಿಗೆ ಎಂಬ ಸಾಲು ನೆನಪಿಗೆ ಬರುತ್ತಿದೆ’ ಎಂದು ಹೇಳಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ‘ಹತ್ತು ವರ್ಷಗಳ ಕಾಲ ಸೂಪರ್ ಪವರ್ ಆಗಿದ್ದ ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವಾಗ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿ ಹೋಗಿತ್ತು?. ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಅಂಥವರ ಮುಂದೆ ಜೀ ಹುಜೂರ್ ಎನ್ನುವ ನಿಮಗೆ ಭಾರತದ ಸಂಸ್ಕೃತಿ, ಸಂಸ್ಕಾರ ಕೊಟ್ಟಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ‘ಸಿದ್ದರಾಮಯ್ಯ ಅವರಿಗೆ ನಾನು ಒಂದು ಪ್ರಶ್ನೆ ಕೇಳುತ್ತೇನೆ. ರಾಹುಲ್ ಗಾಂಧಿ ಅವರು ನಿಮಗಿಂತ ಜ್ಯೂನಿಯರಾ? ಸೀನಿಯರಾ? ರಾಹುಲ್ ಗಾಂಧಿ ಮುಂದೆ ನೀವು ಹೇಗೆ ಮಾತನಾಡುತ್ತೀರಿ? ಅವರ ಮುಂದೆ ಕಾಲಮೇಲೆ ಕಾಲು ಹಾಕಿಕೊಂಡು ಕೂತ್ಕೋತಿರಾ’ ಎಂದು ಅವರು ಪ್ರಶ್ನಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಗುಲಾಮರಂತೆ ಇರುವ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕೇ ವಿನಾ ನಾಲಿಗೆಯನ್ನು ಹರಿಬಿಡುವ ದುಸ್ಸಾಹಸಕ್ಕೆ ಮುಂದಾಗಬಾರದು. ಇದೇ ಪ್ರವೃತ್ತಿ ಮುಂದುವರಿಸಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸಂಸ್ಕೃತಿಯೇ ಬಿಜೆಪಿಯಲ್ಲಿ ಇದೆ ಎಂದು ಸಿದ್ದರಾಮಯ್ಯ ಭಾವಿಸಿರಬಹುದು, ಅದು ತಪ್ಪು ಕಲ್ಪನೆ. ನಾಯಿಯು ಬಾಲ ಅಲ್ಲಾಡಿಸಿಕೊಂಡು ಓಡಾಡಿದಂತೆ ವರ್ತಿಸುವುದು ಕಾಂಗ್ರೆಸ್‌ ಸಂಸ್ಕೃತಿ

-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ರಾಹುಲ್ ಗಾಂಧಿ ಅವರಿಗೆ ಯಾವುದೇ ಸ್ಥಾನಮಾನವಿಲ್ಲ. ಆದರೂ, ಅವರನ್ನು ಕಂಡರೆ ಏಕೆ ನಡುಗುತ್ತೀರಿ. ಅವರ ವಯಸ್ಸು, ಅನುಭವ ಏನು. ನಿಮ್ಮ ವಯಸ್ಸು, ಅನುಭವ ಏನು?

- ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT