ಬುಧವಾರ, ಏಪ್ರಿಲ್ 14, 2021
24 °C
ಮೀಸಲಾತಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಿಸಬೇಕೇ– ಕಾನೂನು ತಜ್ಞರ ಜೊತೆ ಬೊಮ್ಮಾಯಿ ಸಭೆ

'ಎಲ್ಲ ವರ್ಗದ ಆಶೋತ್ತರ, ಸಂವಿಧಾನ ಹಕ್ಕುಗಳ ರಕ್ಷಣೆ ಗಮನಿಸಿ ಮೀಸಲಾತಿ ತೀರ್ಮಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ ಹಿಂದುಳಿದ ಸಮುದಾಯದ ಹಿತರಕ್ಷಣೆ ಮತ್ತು ಸಂವಿಧಾನದ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಬೇಕೊ, ಬೇಡವೊ ಎಂಬ ವಿಚಾರದಲ್ಲಿ ತೀರ್ಮಾನ ತೆಗೆದು ಕೊಳ್ಳಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮೀಸಲಾತಿಯನ್ನು ಶೇ 50ರಿಂದ ಹೆಚ್ಚಿಸುವ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯಗಳಿಂದ ಅಭಿಪ್ರಾಯ ಕೇಳಿರುವ ಹಿನ್ನೆಲೆಯಲ್ಲಿ,  ಕಾನೂನು ತಜ್ಞರ ಜೊತೆ ಶನಿವಾರ ಸುಮಾರು ಎರಡು ತಾಸು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ, ‘ಎಲ್ಲ ವರ್ಗಗಳ ಜನಸಂಖ್ಯೆ, ಶಿಕ್ಷಣ, ಉದ್ಯೋಗದಲ್ಲಿ ಮುಂದುವರಿಸಬೇಕೆಂಬ ಆಶೋತ್ತರಗಳಿಗೆ ಪೂರಕವಾಗಿ ಈಗಿರುವ ಶೇ 50ರಷ್ಟು ಮೀಸಲಾತಿ ಸಾಕೋ, ಹೆಚ್ಚಿಸಬೇಕೋ ಎಂಬ ಬಗ್ಗೆ ಎಲ್ಲಾ ಅಯಾಮಗಳಲ್ಲೂ ಚರ್ಚೆ ಮಾಡಿದ್ದೇವೆ’ ಎಂದರು.

‘ಸಭೆಯಲ್ಲಿ ಕೆಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಕೆಲವರು ಲಿಖಿತವಾಗಿಯೂ ಅಭಿಪ್ರಾಯ ನೀಡಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಗುರುತು ಹಾಕಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್‌ಗೆ ಇದೇ 23ರಂದು ರಾಜ್ಯದ ನಿಲುವು ತಿಳಿಸಬೇಕಿದೆ. ಹೀಗಾಗಿ, ಉತ್ತರದ ಕರಡನ್ನು ಕಾನೂನು ತಜ್ಞರಿಗೆ ಕಳುಹಿಸಿ, ಸಂವಿಧಾನಾತ್ಮಕ ವಿಚಾರದಲ್ಲಿ ಸ್ಪಷ್ಟೀಕರಣವನ್ನು ಪಡೆದು ಅಂತಿಮಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆ ಮಹತ್ವದ್ದಾಗಿತ್ತು’ ಎಂದೂ ಅವರು ತಿಳಿಸಿದರು.

‘ಮಹಾರಾಷ್ಟ್ರ ಸರ್ಕಾರ, ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ್ದ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮಾಡಿರುವ ಪ್ರಕರಣದಲ್ಲಿ ದೊಡ್ಡ ಪೀಠಕ್ಕೆ ವರ್ಗಾಯಿಸುವ ಸಂದರ್ಭದಲ್ಲಿ ಎಲ್ಲ ರಾಜ್ಯಗಳಿಂದ 6 ಪ್ರಶ್ನೆಗಳಿಗೆ ಅಭಿಪ್ರಾಯ ಕೇಳಿದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ  ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ವಿಷಯವನ್ನು ವಿಧಾನಸಭೆಯಲ್ಲೂ ನಾನು ಪ್ರಸ್ತಾಪಿಸಿದ್ದೆ. ಅಲ್ಲದೆ, ಎಲ್ಲ ಕಾನೂನು ತಜ್ಞರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದಿದ್ದೆ. ಅದರಂತೆ ಸಭೆ ನಡೆಸಲಾಗಿದೆ’ ಎಂದರು.

‘ಮೀಸಲಾತಿ ವಿಚಾರದಲ್ಲಿ ಕೆಲವು ತಿದ್ದುಪಡಿಗಳ ಮೂಲಕ ರಾಜ್ಯ ಸರ್ಕಾರದ ಈಗಿರುವ ಅವಕಾಶಗಳಿಗೆ ತೊಂದರೆ ಆಗಬಹುದೇ? ಈಗಿರುವ ಅವಕಾಶಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಹೇಗೆ ರಕ್ಷಣೆ ಮಾಡಬೇಕು. ಈ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಇಂದಿರಾ ಸಾಹ್ನಿ ಕೇಸು, ಸ್ವಾತಂತ್ರ ಕಾಲಕ್ಕೂ ಮೊದಲೇ ಮಹಾರಾಜರ ಕಾಲದಲ್ಲಿಯೇ ರಾಜ್ಯದಲ್ಲಿ ಮೀಸಲಾತಿ ಇತ್ತು. ಮಂಡಲ್‌ ಆಯೋಗಕ್ಕೂ ಮೊದಲೇ ಇಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆ ಆಗಿತ್ತು. ಅಲ್ಲದೆ, ಮೀಸಲಾತಿಯೂ ಇತ್ತು. ಒಟ್ಟಾರೆ ಕೆರ್ನಾಟಕ ರಾಜ್ಯ ಮೀಸಲಾತಿಯಲ್ಲಿ ಪ್ರಗತಿಪರವಾದಂಥ ರಾಜ್ಯ’ ಎಂದರು.

‘ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಹಿಂದಿನ ನ್ಯಾಯಮೂರ್ತಿ ಮಂಜುನಾಥ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹಿಂದಿನ ಅಡ್ವೊಕೇಟ್‌ ಜನರಲ್‌ಗಳಾದ ರವಿವರ್ಮ ಕುಮಾರ್‌, ಉದಯ ಹೊಳ್ಳ, ಮಧುಸೂದನ್‌ ನಾಯಕ ಭಾಗವಹಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು’ ಎಂದೂ ಬೊಮ್ಮಾಯಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು