ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ಗಾಂಧಿ ಉತ್ತಿದ್ದಾರಾ, ಬಿತ್ತಿದ್ದಾರಾ?: ಕಂದಾಯ ಸಚಿವ ಅಶೋಕ ವಾಗ್ದಾಳಿ

Last Updated 19 ಡಿಸೆಂಬರ್ 2020, 9:24 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರಿಗೆ ರೈತರ ಕಷ್ಟ ಗೊತ್ತಿಲ್ಲ ಎಂದು ಹೇಳುವ ರಾಹುಲ್‌ ಗಾಂಧಿ ಹೊಲ ಉತ್ತಿದ್ದಾರಾ, ಬಿತ್ತಿದ್ದಾರಾ? ಅವರ ತಂದೆ, ತಾಯಿ, ಅಜ್ಜ– ಅಜ್ಜಿ ಯಾರೂ ರೈತರಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಪರಂಪರೆಯಲ್ಲಿ ಬಾರದವರು ಬುದ್ಧಿವಾದ ಹೇಳುವುದು ಸರಿಯಲ್ಲ. ಕಾಂಗ್ರೆಸ್‌ ನಾಯಕರು ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಮೊದಲು ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಪಿಎಂಸಿ ಬಿಟ್ಟು ಬೇರೆ ಕಡೆಗಳಲ್ಲಿ ಮಾರುವಂತಿರಲಿಲ್ಲ. ಹಾಗೆ ಮಾಡಿದ್ದರೆ ರೈತರ ಮೇಲೆ ಕೇಸ್‌ ಹಾಕಬಹುದಿತ್ತು. ಹೊಸ ಕಾಯ್ದೆಗಳಿಂದ ರೈತರ ತಾನು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಬಹುದು.

ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವೇ ಡಾ. ಸ್ವಾಮಿನಾಥನ್‌ ಸಮಿತಿಯನ್ನು ನೇಮಕ ಮಾಡಿತ್ತು. ರೈತರಿಗೆ ಅವರು ಬೆಳೆಯುವ ಬೆಳೆಗೆ ಖರ್ಚು ಮಾಡುವ ಒಟ್ಟು ಮೌಲ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚುವರಿ ಮೌಲ್ಯ ಬರುವಂತಾಗಬೇಕು ಎಂದು ಸ್ವಾಮಿನಾಥನ್‌ ಶಿಫಾರಸು ಮಾಡಿದ್ದರು. ಆದರೆ, ಕಾಂಗ್ರೆಸ್‌ ಸರ್ಕಾರ ಅದನ್ನು ಜಾರಿಗೆ ತರುವ ಗೋಜಿಗೆ ಹೋಗಲಿಲ್ಲ. ಆದರೆ, ಈಗ ಕೇಂದ್ರ ಸರ್ಕಾರ ಜಾರಿ ಮಾಡಿರುವ ಸುಧಾರಣಾವಾದಿ ಕಾಯ್ದೆಗಳ ವಿರುದ್ಧ ರೈತರನ್ನು ಎತ್ತಿ ಕಟ್ಟುತ್ತಿದೆ ಎಂದರು.

ಕಾಯ್ದೆಗಳಲ್ಲಿರುವ ರೈತ ಕಾಳಜಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಈ ಕಾಯ್ದೆಗಳಿಂದ ರೈತ ಸಮುದಾಯಕ್ಕೆ ಸಾಕಷ್ಟು ಅನುಕೂಲ ಇದೆ ಎಂದು ಕಡಾಡಿ ಹೇಳಿದರು.

ಸಿದ್ದರಾಮಯ್ಯಗೆ ಕಣ್ಣು ಕಾಣಿಸಲಿಲ್ಲವೇ?

ಎಚ್‌.ಡಿ. ಕುಮಾರಸ್ವಾಮಿ ಒಂದು ವರ್ಷ ತಾಜ್ ವೆಸ್ಟ್‌ಎಂಡ್‌ ಹೊಟೇಲಿನಲ್ಲಿ ಕೂತಿದ್ದಾಗ ಸಿದ್ದರಾಮಯ್ಯ ಅವರಿಗೆ ಕಣ್ಣು ಕಾಣಿಸಲ್ಲಿಲ್ಲವೇ? ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಏಕೆ ಈ ವಿಷಯ ಪ್ರಸ್ತಾಪಿಸಲಿಲ್ಲ. ಮೈತ್ರಿ ಸರ್ಕಾರ ಬಿದ್ದು ಹೋದ ಮೇಲೆ ಪ್ರಶ್ನಿಸಿದರೆ ಏನು ಪ್ರಯೋಜನ ಎಂದು ಸಚಿವ ಆರ್‌.ಅಶೋಕ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರನ್ನು ಸೋಲಿಸಿದವರು ಈಗಲೂ ಅವರ ಜತೆಯಲ್ಲೇ ಇದ್ದಾರೆ. ಸಿದ್ದರಾಮಯ್ಯ ಅವರು ಈ ವಿಷಯವನ್ನು ಡಿ.ಕೆ. ಶಿವಕುಮಾರ್‌ ಅವರನ್ನು ಉದ್ದೇಶಿಯೇ ಹೇಳಿರಬೇಕು. ಏಕೆಂದರೆ ಈ ವಿಚಾರವಾಗಿ ತೀಕ್ಷ್ಣ ಹೇಳಿಕೆ ಕೊಟ್ಟವರು ಡಿ.ಕೆ. ಶಿವಕುಮಾರ್‌ ಒಬ್ಬರೇ. ಇದು ಕಾಂಗ್ರೆಸ್‌ನ ಆಂತರಿಕ ಕಚ್ಚಾಟ. ಜೆಡಿಎಸ್‌ ಜತೆಗೆ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಒಳಒಪ್ಪಂದ ಏನಿದ್ದರೂ ಎಚ್‌ಡಿಕೆ ಮತ್ತು ಡಿಕೆಶಿ ಮಧ್ಯೆ. ಅವರಿಗೆ ಮಾಡಲು ಕೆಲಸ ಇಲ್ಲ. ನಮಗೆ ಸರ್ಕಾರದ ಕೆಲಸ ಇದೆ ಎಂದು ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT